ಗಗನಯಾನಕ್ಕೆ ಮಾನವರ ಹೊತ್ತೊಯ್ಯಬಲ್ಲ ಸಾಮರ್ಥ್ಯಕ್ಕೆ ಇಸ್ರೊ ಸಜ್ಜು

| Published : Feb 22 2024, 01:49 AM IST / Updated: Feb 22 2024, 08:33 AM IST

ISRO
ಗಗನಯಾನಕ್ಕೆ ಮಾನವರ ಹೊತ್ತೊಯ್ಯಬಲ್ಲ ಸಾಮರ್ಥ್ಯಕ್ಕೆ ಇಸ್ರೊ ಸಜ್ಜು
Share this Article
  • FB
  • TW
  • Linkdin
  • Email

ಸಾರಾಂಶ

ಇಸ್ರೋದಿಂದ ಮತ್ತೊಂದು ಮೈಲುಗಲ್ಲು ಸ್ಥಾಪನೆಯಾಗಲಿದ್ದು, ಮಾನವಸಹಿತ ಗಗನಯಾನಕ್ಕೆ ಇಸ್ರೋ ಸಿದ್ಧತೆ ನಡೆಸಿದೆ.

ಪಿಟಿಐ ಬೆಂಗಳೂರು

ಗಗನಯಾನ ಯೋಜನೆಗೆ ಸಂಬಂಧಿಸಿದಂತೆ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಮತ್ತೊಂದು ಮೈಲುಗಲ್ಲನ್ನು ಸಾಧಿಸಿದೆ. 

ತನ್ನ ಮಹತ್ವಾಕಾಂಕ್ಷಿ ಯೋಜನೆಯಾದ ಗಗನಯಾನದ ಕ್ರಯೋಜೆನಿಕ್‌ ಎಂಜಿನ್‌ ಇದೀಗ ಮಾನವರನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯವನ್ನು ಗಳಿಸಿಕೊಂಡಿದೆ ಎಂದು ಇಸ್ರೋ ಹೇಳಿದೆ.

ಈ ಕುರಿತಾಗಿ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಇಸ್ರೋ, ‘ಇಸ್ರೋದ ಸಿಇ20 ಕ್ರಯೋಜೆನಿಕ್ ಎಂಜಿನ್‌ ಇದೀಗ ಮಾನವರನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯವನ್ನು ಗಳಿಸಿದೆ. ಅತ್ಯಂತ ಕಟ್ಟುನಿಟ್ಟಾಗಿ ನಡೆಸಿದ ಪ್ರಯೋಗಗಳು ಎಂಜಿನ್‌ನ ಸಾಮರ್ಥ್ಯವನ್ನು ಸಾಬೀತು ಮಾಡಿವೆ.

ಎಲ್‌ವಿಎಂ-3 ಜೆನ್‌-1 ರಾಕೆಟ್‌ ಮೂಲಕ ಕೈಗೊಳ್ಳಲಿರುವ ಮಾನವ ರಹಿತ ಗಗನಯಾನಕ್ಕೆ ಸಿಇ20 ಎಂಜಿನ್‌ ಎಲ್ಲಾ ಪರೀಕ್ಷೆಗಳನ್ನು ಪೂರ್ಣಗೊಳಿಸಿದೆ’ ಎಂದು ಹೇಳಿದೆ. 

ವ್ಯಾಕ್ಯೂಮ್‌ ಇಗ್ನೀಷನ್‌ಗೆ ಸಂಬಂಧಿಸಿದಂತೆ ಫೆ.13ರಂದು 7ನೇ ಸುತ್ತಿನ ಪ್ರಯೋಗವನ್ನು ಇಸ್ರೋ ಕೈಗೊಂಡಿತ್ತು. ಮಾನವಸಹಿತ ಗಗನಯಾನ ಕೈಗೊಳ್ಳುವುದಕ್ಕಾಗಿ ಅಗತ್ಯವಿರುವ ಎಲ್ಲಾ ಪರೀಕ್ಷೆಗಳನ್ನು ಈಗಾಗಲೇ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದು ಇಸ್ರೋ ಹೇಳಿದೆ.

2024ರಲ್ಲಿ ಮೊದಲ ಬಾರಿ ಕೈಗೊಳ್ಳಲಿರುವ ಮಾನವ ರಹಿತ ಗಗನಯಾನ ಯೋಜನೆಗೆ ಸಕಲ ಸಿದ್ಧತೆಗಳಾಗಿವೆ. ಇದೀಗ ಮಾನವ ಸಹಿತ ಗಗನಯಾನಕ್ಕಾಗಿ ಎಂಜಿನನ್ನು ಮೇಲ್ದರ್ಜೆಗೇರಿಸಲಾಗಿದೆ. ಇದು 19ರಿಂದ 22 ಟನ್‌ ತೂಕವನ್ನು ಹೊತ್ತೊಯ್ಯಬಲ್ಲದು ಎಂದು ಇಸ್ರೋ ಹೇಳಿದೆ.