ಸಾರಾಂಶ
ಶ್ರೀಹರಿಕೋಟ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಸೋಮವಾರ ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರದಿಂದ ‘ಸ್ಪೇಸ್ ಡಾಕಿಂಗ್ ಎಕ್ಸ್‌ಪರಿಮೆಂಟ್’ (ಸ್ಪೇಡೆಕ್ಸ್) ಯೋಜನೆ ಭಾಗವಾಗಿ 2 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಈ ಮುನ್ನ ಸೋಮವಾರ ರಾತ್ರಿ 9.58ಕ್ಕೆ ಶ್ರೀಹರಿಕೋಟದಿಂದ ರಾಕೆಟ್ ಉಡಾವಣೆ ಸಮಯ ನಿಗದಿ ಆಗಿತ್ತು. ಆದರೆ ಕೆಲ ಬದಲಾವಣೆಯಿಂದ 2 ನಿಮಿಷ ಮುಂದೂಡಿಕೆಯಾಗಿ ರಾತ್ರಿ 10ಕ್ಕೆ ಉಡಾವಣೆಗೊಂಡಿತು. ಇದಾದ 16 ನಿಮಿಷಕ್ಕೆ- ಎಂದರೆ 10.15ಕ್ಕೆ ಮಿಶನ್ ಯಶಸ್ವಿಯಾಗಿದೆ ಎಂಬ ಘೋಷಣೆ ಆಯಿತು.
‘ಎರಡೂ ಉಪಗ್ರಹಗಳು 476 ಕಿ.ಮೀ. ವೃತ್ತಾಕಾರ ಪರಿಧಿಗೆ ಈಗ ಸೇರಿವೆ. ಇನ್ನು ಜ.7ರ ಸುಮಾರಿಗೆ ಇವುಗಳ ಡಾಕಿಂಗ್ (ಜೋಡಣೆ) ಕಸರತ್ತು ನಡೆಯಲಿದೆ’ ಎಂದು ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಹೇಳಿದ್ದಾರೆ. ಇವುಗಳ ಡಾಕಿಂಗ್‌ನಲ್ಲಿ ಇಸ್ರೋ ಯಶ ಕಂಡರೆ, ಭಾರತ ಸ್ಪೇಡೆಕ್ಸ್ ನಲ್ಲಿ ಸಾಧನೆ ಮಾಡಿದ ವಿಶ್ವದ 4ನೇ ದೇಶ ಎನ್ನಿಸಿ ಕೊಳ್ಳಲಿದೆ. ಸದ್ಯಕ್ಕೆ ಡಾಕಿಂಗ್ ತಂತ್ರಜ್ಞಾನವನ್ನು ಅಮೆರಿಕ, ರಷ್ಯಾ, ಚೀನಾ ಹೊಂದಿವೆ.
ಏನಿದು ಇಸ್ರೋ ಪ್ರಯೋಗ?: ಪಿಎಸ್‌ಎಲ್‌ವಿ ರಾಕೆಟ್ ಸಹಾಯದಿಂದ ಬಾಹ್ಯಾಕಾಶಕ್ಕೆ ಟಾರ್ಗೆಟ್ ಮತ್ತು ಚೇಸರ್‌ಎಂಬ 2 ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ.
ಅವುಗಳಲ್ಲಿರುವ ವ್ಯವಸ್ಥೆಯ ಸಹಾಯದಿಂದ ವ್ಯೋಮನೌಕೆಗಳನ್ನು ಪರಸ್ಪರ ಸಂಧಿಸುವಂತೆ ಮಾಡುವುದು, ಸೆನ್ಸರ್‌ಗಳನ್ನು ಬಳಸಿ ಎರಡೂ ಉಪಗ್ರಹಗಳು ಒಂದಕ್ಕೊಂದು ಜೋಡಣೆ (ಡಾಕಿಂಗ್) ಆಗುವಂತೆ ಮಾಡುವುದು. ಬಳಿಕ ಪರಸ್ಪರ ಬೇರೆ (ಅನ್‌ಡಾಕಿಂಗ್) ಆಗುವಂತೆ ಮಾಡುವುದು ಇಸ್ರೋ ನಡೆಸುತ್ತಿರುವ ಪ್ರಯೋಗ. ಹೀಗಾಗಿ ‘ಸ್ಪೇಸ್ ಡಾಕಿಂಗ್ ಎಕ್ಸ್ ಪರಿಮೆಂಟ್’ (ಸ್ಪೇಡೆಕ್ಸ್) ಎಂಬ ಹೆಸರನ್ನು ಇದಕ್ಕೆ ಇಟ್ಟಿದೆ. ಈ ಉಪಗ್ರಹಗಳು ಹಲವು ಮುಖ್ಯ ಕಾರ್ಯಗಳನ್ನು ನೆರವೇರಿಸಲಿವೆ. ಅವೆರಡು ಉಪಗ್ರಹಗಳು ಪರಸ್ಪರ ಒಂದೇ ಕಕ್ಷೆ ಯಲ್ಲಿ ಅಳವಡಿಕೆಯಾಗಿ, ಕ್ರಮೇಣ ಪರಸ್ಪರ ಸನಿಹಕ್ಕೆ ಚಲಿಸಲಿವೆ. ಅವೆರಡೂ ಸಾಕಷ್ಟುಹತ್ತಿರಕ್ಕೆ ಸಾಗಿದ ಬಳಿಕ, ಅವು ಒಂದಕ್ಕೊಂದು ಜೋಡಣೆಯಾಗಿ, ವಿದ್ಯುತ್ ಶಕ್ತಿಯನ್ನು ಹಂಚಿ ಕೊಂಡು, ಬಳಿಕ ಬೇರ್ಪಡಲಿವೆ. ಬೇರ್ಪಟ್ಟಬಳಿಕ, 2 ವರ್ಷ ಕಾಲ ಎರಡೂ ಉಪಗ್ರಹಗಳು ತಮ್ಮ ಪೇಲೋಡ್ ಕಾರ್ಯಾಚರಿಸಲಿವೆ.
ಏಕೆ ಈ ಪ್ರಯೋಗ?
ಈ ತಂತ್ರಜ್ಞಾನ, ಇಸ್ರೋದ ಭವಿಷ್ಯದ ಯೋಜನೆಗಳಾದ ಚಂದ್ರಯಾನ-4 ಹಾಗೂ ಭಾರತದ ಸ್ವಂತ ಬಾಹ್ಯಾಕಾಶ ನಿಲ್ದಾಣವಾದ ‘ಭಾರತೀಯ ಅಂತರಿಕ್ಷ ಕೇಂದ್ರ’ ನಿರ್ಮಾಣಕ್ಕೆ ಅತ್ಯವಶ್ಯಕವಾಗಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ರೀತಿಯಲ್ಲೇ ಇಸ್ರೋ ಕೂಡ ತನ್ನದೇ ಆದ ಸ್ವದೇಶಿ ಭಾರತೀಯ ಅಂತರಿಕ್ಷ ನಿಲ್ದಾಣವನ್ನು ಸ್ಥಾಪಿಸಲು ಪ್ರಾರಂಭಿಸಿದೆ. ಆ ನಿಲ್ದಾಣಕ್ಕೆ ಗಗನಯಾತ್ರಿಗಳು, ಉಪಕರಣಗಳನ್ನು ಕಳುಹಿಸಲು ಡಾಕಿಂಗ್, ಅನ್‌ಡಾಕಿಂಗ್ ಪರಿಣತಿ ಬೇಕು. ಜೊತೆಗೆ ಮಾನವಸಹಿತ ಅಂತರಿಕ್ಷಯಾನ, ಚಂದ್ರನ ಅಂಗಗಳಿಗೆ ಮನುಷ್ಯರನ್ನು ಕಳುಹಿಸಿ, ವಾಪಸ್ ಕರೆತರಲು ಈ ತಂತ್ರಜ್ಞಾನ ಬೇಕು.