ಸಾರಾಂಶ
ನವದೆಹಲಿ : ಗಣೇಶ ಮೆರವಣಿಗೆ ವೇಳೆ ಕಲ್ಲು, ಚಪ್ಪಲಿ ಎಸೆತ, ಬೆಂಕಿ ಹಚ್ಚುವುದು, ತಲ್ವಾರ್, ಕತ್ತಿ ಹಿಡಿದು ಝಳಪಿಸುವುದು, ಪೆಟ್ರೋಲ್ ಬಾಂಬ್ ಎಸೆಯುವುದನ್ನು ಮಂಡ್ಯ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ನೋಡಿದ್ದು. ರಾಜ್ಯ ಕಾಂಗ್ರೆಸ್ ಸರ್ಕಾರದ ಓಲೈಕೆ, ತುಷ್ಟೀಕರಣದ ರಾಜಕಾರಣವೇ ಇದಕ್ಕೆ ಕಾರಣ ಎಂದು ಕೇಂದ್ರ ಭಾರೀ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ನಾಗಮಂಗಲ ಗಲಭೆಗೆ ಸಂಬಂಧಿಸಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೊಂದು ಸಣ್ಣ ಪ್ರಕರಣ ಎಂದು ಹೇಳಿಕೆ ನೀಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಹೇಳಿಕೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಒಂದು ನಿರ್ದಿಷ್ಟ ಸಮುದಾಯವನ್ನು ಓಲೈಕೆ ಮಾಡುತ್ತಿರುವುದೇ ಇಂಥ ಘಟನೆಗಳಿಗೆ ಕಾರಣ. 30ಕ್ಕೂ ಹೆಚ್ಚು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ. ಸಿಕ್ಕಸಿಕ್ಕ ಕಡೆ ಅಂಗಡಿಗಳ ಬಾಗಿಲು ಒಡೆದು ದೋಚಲಾಗಿದೆ. ಮನಸೋ ಇಚ್ಛೆ ದೊಂಬಿ ಎಬ್ಬಿಸಲಾಗಿದೆ. ಇಂತಹ ಕಳವಳಕಾರಿ ಘಟನೆಯನ್ನು ರಾಜ್ಯದ ಗೃಹ ಸಚಿವರು ಸಣ್ಣ ವಿಚಾರ ಎಂದು ಹೇಳಿರುವುದು ದುರದೃಷ್ಟಕರ ಎಂದರು.
ಪೆಟ್ರೋಲ್ ಬಾಂಬ್ ಎಸೆಯುವುದು, ಸ್ಕೂಟರ್ ಗಳಿಗೆ ಬೆಂಕಿ ಹಚ್ಚುವುದು, ತಲ್ವಾರ್ ಹಿಡಿದು ಹೆದರಿಸುವುದು ಸಣ್ಣವಿಚಾರವೇ? ಮಂಡ್ಯದಲ್ಲಿ ನಡೆದಿರುವುದು ಅತ್ಯಂತ ಕಳವಳಕಾರಿ ಘಟನೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.
ರಾಜಕೀಯ ಮಾಡುತ್ತಿಲ್ಲ: ಎರಡು ಬಾರಿ ನಾನು ಮುಖ್ಯಮಂತ್ರಿ ಆಗಿ ಕೆಲಸ ಮಾಡಿದ್ದೇನೆ. ಯಾವತ್ತೂ ನಾನು ಬೆಂಕಿ ಹಚ್ಚುವ ಕೆಲಸ ಮಾಡಿಲ್ಲ. ಗಣಪತಿ ಮೆರವಣಿಗೆಯಲ್ಲಿ ಭಾಗಿಯಾಗಿದ್ದು ಒಂದು ಪಕ್ಷದವರಷ್ಟೇ ಅಲ್ಲ, ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್‌ನವರು ಎಲ್ಲರೂ ಪಕ್ಷಾತೀತವಾಗಿ ಭಾಗಿಯಾಗಿದ್ದರು. ಇದರಲ್ಲಿ ನಾನು ರಾಜಕೀಯ ಮಾಡುತ್ತಿಲ್ಲ. ಎಲ್ಲರ ಪರವಾಗಿ ಮಾತನಾಡುತ್ತಿದ್ದೇನೆ. ಸ್ಥಳೀಯ ಪೊಲೀಸ್ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಕ್ರಮ ವಹಿಸಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ ಎಂದು ಕೇಂದ್ರ ಸಚಿವ ಹೇಳಿದರು.
ಹಿಂದೆ ನಡೆದಿರುವ ಘಟನೆಗಳು ಅವರೇ ಕಣ್ಣಾರೆ ನೋಡಿದ್ದಾರೆ. ಈಗ ರಾಜಕೀಯ ಮಾಡಬಾರದು ಎಂದು ನನಗೆ ಉಪದೇಶ ಮಾಡುತ್ತಿದ್ದಾರೆ. ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂದಿದ್ದರೆ ಈ ಪರಿಸ್ಥಿತಿ ಯಾಕೆ ಬರುತ್ತಿತ್ತು? ನಾನು ರಾಜಕೀಯ ಮಾಡುವುದಕ್ಕೆ ಹೇಳುತ್ತಿಲ್ಲ, ರಾಜಕೀಯಕ್ಕಾಗಿ ಟೀಕೆ ಮಾಡುತ್ತಿಲ್ಲ ಎಂದರು.
ಅಂಗಡಿಗಳಿಗೆ ಬೆಂಕಿ ಹಚ್ಚಲು ಯಾಕೆ ಆಸ್ಪದ ಕೊಟ್ಟರು? ನನಗೆ ಉಪದೇಶ ಮಾಡುವ ಬದಲು ಯಾವ ರೀತಿ ನಡೆದುಕೊಳ್ಳಬೇಕು ಎಂದು ಗೃಹ ಸಚಿವರಿಗೆ ಹೇಳಿ ಎಂದು ಪ್ರಕರಣದಲ್ಲಿ ರಾಜಕೀಯ ಮಾಡುತ್ತಿದ್ದಾರೆಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ಕುಮಾರಸ್ವಾಮಿ ತಿರುಗೇಟು ನೀಡಿದರು.
ಅಧಿಕಾರಿಗಳ ಶಕ್ತಿ ಕುಂದಿಸಿದ್ದೀರಿ: ನಾಗಮಂಗಲ ಪಟ್ಟಣದಲ್ಲಿ ತಲ್ವಾರ್ ಹಿಡಿದುಕೊಂಡು, ಪೆಟ್ರೋಲ್ ಬಾಂಬ್ ಎಸೆಯುತ್ತಾರೆಂದರೆ ಈ ಸರ್ಕಾರ ಯಾವ ಮಟ್ಟಕ್ಕೆ ಆಡಳಿತ ನಡೆಸುತ್ತಿದೆ ಎನ್ನುವುದು ಅರ್ಥವಾಗುತ್ತದೆ. ಯಾರಿಗೂ ಭಯ ಇಲ್ಲ. ಈ ಸರ್ಕಾರ ಬಂದ ಮೇಲೆ ಕಾನೂನು ಸುವ್ಯವಸ್ಥೆ ಕುಸಿದು ಹೋಗಿದೆ. ಅಧಿಕಾರಿಗಳ ಶಕ್ತಿಯನ್ನು ಸಂಪೂರ್ಣವಾಗಿ ಕುಂದಿಸಲಾಗಿದೆ ಎಂದು ಕಿಡಿಕಾರಿದರು.