ಸಾರಾಂಶ
ಇಂದೋರ್: ಪ್ರೇಮಿಯನ್ನು ಮದುವೆಯಾಗಲು ಮನೆ ಬಿಟ್ಟು ಓಡಿಹೋಗಿದ್ದ ಯುವತಿ ಆತ ಸಿಗದೇ ಇದ್ದಾಗ, ರೈಲು ನಿಲ್ದಾಣದಲ್ಲಿ ಸಿಕ್ಕ ಮತ್ತೊಬ್ಬ ವ್ಯಕ್ತಿಯನ್ನು ಮದುವೆಯಾಗಿ ಮನೆಗೆ ಮರಳಿದ ವಿಚಿತ್ರ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.
ಶ್ರದ್ಧಾ ಎಂಬಾಕೆ ಸಾರ್ಥಕ್‌ನನ್ನು ಪ್ರೀತಿಸುತ್ತಿದ್ದಳು. ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು. ಆತನನ್ನು ಮದುವೆಯಾಗಲು ಶ್ರದ್ಧಾ ಮನೆಯಿಂದ ಓಡಿ ಹೋಗಿದ್ದಳು. ಆದರೆ ರೈಲು ನಿಲ್ದಾಣದಲ್ಲಿ ಸಾರ್ಥಕ್ ‘ನಾನು ನಿನ್ನನ್ನು ಮದುವೆಯಾಗುವುದಿಲ್ಲ’ ಎಂದು ಹೇಳಿ ಹೊರಟುಹೋಗಿದ್ದಾನೆ.
ಇದರಿಂದ ತೀವ್ರವಾಗಿ ನೊಂದ ಶ್ರದ್ಧಾ, ದಿಕ್ಕು ದೆಸೆಯಿಲ್ಲದೇ ಯಾವುದೋ ರೈಲು ಹತ್ತಿ ರತ್ಲಾಂಗೆ ಬಂದಿದ್ದಾಳೆ. ಅಲ್ಲಿ ಅದೃಷ್ಟಕ್ಕೆ ಶ್ರದ್ಧಾ ಕಾಲೇಜಿನಲ್ಲಿ ವಿದ್ಯುತ್ ಕೆಲಸ ಮಾಡಿದ್ದ ಎಲೆಕ್ಟ್ರಿಶಿಯನ್ ಭೇಟಿಯಾಗಿ, ಆಕೆಯ ಮನವೊಲಿಸಿ ಮನೆಗೆ ಕಳುಹಿಸಲು ಯತ್ನಿಸಿದ್ದಾನೆ. ಆದರೆ ಇದಕ್ಕೆ ಒಪ್ಪದ ಶ್ರದ್ಧಾ ‘ನಾನು ಮದುವೆಯಾಗಲು ಬಂದಿದ್ದೇನೆ. ಈಗ ಒಬ್ಬಂಟಿಯಾಗಿ ಮನೆಗೆ ಹೋಗುವುದಿಲ್ಲ’ ಎಂದು ಹಠ ಹಿಡಿದಿದ್ದಾಳೆ. ಈ ವೇಳೆ ನಾನೇ ಮದುವೆ ಆಗುತ್ತೇನೆ ಎಂದಿದ್ದಾನೆ. ಅದಕ್ಕೆ ಆಕೆಯೂ ಒಪ್ಪಿದ ಕಾರಣ ಇಬ್ಬರೂ ಮದುವೆಯಾಗಿದ್ದಾರೆ. ಬಳಿಕ ಇಬ್ಬರೂ ಶ್ರದ್ಧಾಳ ಮನೆಗೆ ಬಂದು ತಂದೆಯ ಆಶೀರ್ವಾದ ಪಡೆದಿದ್ದಾರೆ.