ಸಾರಾಂಶ
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಕಳೆದ 10 ವರ್ಷಗಳಲ್ಲಿ ಯುವಜನತೆಗೆ ಉದ್ಯೋಗದ ಕ್ಷಾಮ ಸೃಷ್ಟಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿ, ‘ರಾಹುಲ್ ಗಾಂಧಿ ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ನಿರಂತರವಾಗಿ ಯುವಜನತೆಗೆ ನ್ಯಾಯ ದೊರಕಿಸುವ ಕುರಿತು ಪ್ರಸ್ತಾಪಿಸುತ್ತಿದ್ದಾರೆ. ಆದರೆ ಲಂಡನ್ ಸ್ಕೂಲ್ ಅಫ್ ಎಕನಾಮಿಕ್ಸ್‌ನ ತಜ್ಞರೇ ತಿಳಿಸುವಂತೆ 10 ವರ್ಷಕ್ಕೆ ಮೊದಲು ಶೇ.4ರಷ್ಟಿದ್ದ ನಿರುದ್ಯೋಗ ದರ ಶೇ.8ಕ್ಕೇರಿದೆ. ಅಲ್ಲದೆ 30 ವರ್ಷಗಳ ಇತಿಹಾಸದಲ್ಲೇ ಉದ್ಯೋಗಿಗಳ ಸಂಬಳ ಕಡಿತವಾಗಿದೆ. ಉದ್ಯೋಗಿಗಳು ಐದು ವರ್ಷಕ್ಕಿಂತ ಮುಂಚೆ ದುಡಿಯುತ್ತಿದ್ದ ಸಂಬಳಕ್ಕಿಂತ ಶೇ.12ರಷ್ಟು ಕಡಿಮೆ ಸಂಬಳ ಪಡೆಯುತ್ತಿದ್ದಾರೆ. ಇದಕ್ಕೆ ಪ್ರಧಾನಿ ಮೋದಿ ರೂಪಿಸಿದ ಆರ್ಥಿಕ ನೀತಿಗಳೇ ಕಾರಣ’ ಎಂದು ಕಿಡಿಕಾರಿದ್ದಾರೆ.ಮೋದಾನಿ ಕಾರಣ: ಇದೇ ವೇಳೆ ಹಣದ ಅಸಮಾನ ಹಂಚಿಕೆಯನ್ನು ಕುರಿತು ವಿವರಿಸುತ್ತಾ, ‘ಪ್ರಧಾನಿ ಮೋದಿ ಗೌತಮ್ ಅದಾನಿಯನ್ನು ಉದ್ಧಾರ ಮಾಡುವ ಸಲುವಾಗಿ ಕಾರ್ಪೊರೇಟ್ ತೆರಿಗೆಗಳನ್ನು ಶೇ.25ರಷ್ಟು ಇಳಿಸಿ ರಾಷ್ಟ್ರಕ್ಕೆ 1ಲಕ್ಷ ಕೋಟಿ ರು. ನಷ್ಟ ಉಂಟು ಮಾಡಿದ್ದಾರೆ. ಅಲ್ಲದೆ ದೊಡ್ಡ ಉದ್ಯಮಿಗಳ 14.5 ಲಕ್ಷ ಕೋಟಿ ರು. ಸಾಲಮನ್ನಾ ಮಾಡಲಾಗಿದೆ. ಇಷ್ಟು ಸಾಲದೆಂಬಂತೆ ಅದಾನಿಗೆ ವಿಮಾನ ನಿಲ್ದಾಣ, ಗ್ಯಾಸ್, ಇಂಧನ ಘಟಕಗಳ ಜೊತೆಗೆ ಮುಂಬೈನ ಧಾರಾವಿಯನ್ನೂ ಕೊಟ್ಟು 10 ವರ್ಷಗಳ ಮುಂಚೆ ಸಿರಿವಂತರ ಪಟ್ಟಿಯಲ್ಲಿ 609ನೆ ಸ್ಥಾನದಲ್ಲಿದ್ದ ವ್ಯಕ್ತಿಯ ಆದಾಯವನ್ನು 10 ಪಟ್ಟು ಹೆಚ್ಚಿಸಿ ಎರಡನೇ ಸ್ಥಾನಕ್ಕೆ ತಂದು ಕೂರಿಸಿದ್ದಾರೆ. ಹೀಗಾಗಿ 10 ವರ್ಷಗಳ ಮುಂಚೆ ದೇಶದ ಸಿರಿವಂತ ಕಂಪನಿಗಳು ರಾಷ್ಟ್ರದ ಸಂಪತ್ತಿನ ಶೇ.40ರಷ್ಟು ಲಾಭ ಪಡೆಯುತ್ತಿದ್ದುದು ಈಗ ಶೇ.90ಕ್ಕೇರಿದೆ.ಈ ಮೋದಾನಿ ಗೆಳೆತನದಿಂದಾಗಿ ದೇಶದಲ್ಲಿ ಉದ್ಯೋಗದ ಕ್ಷಾಮ ತಲೆದೋರಿದ್ದು, ದೇಶ ಅನ್ಯಾಯದ ಕಾಲದಲ್ಲಿದೆ’ ಎಂದು ದೂರಿದರು.