ಸಾರಾಂಶ
ತಮ್ಮ ಹತ್ಯೆಗೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಸಂಚು ಹೂಡಿದ್ದರ ವಿರುದ್ಧ ಪ್ರತಿಭಟಿಸಲು ಅವರ ಮನೆಗೇ ಹೋಗುವೆ ಎಂದು ಜಾರಂಗೆ ತಿಳಿಸಿದ್ದಾರೆ.
ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ನನ್ನನ್ನು ಹತ್ಯೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ಮಾರಾಠ ಮೀಸಲು ಹೋರಾಟಗಾರ ಮನೋಜ್ ಜಾರಂಗೆ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೇ ಇದರ ವಿರುದ್ಧ ಮುಂಬೈವರೆಗೆ ಯಾತ್ರೆ ಕೈಗೊಂಡು ಫಡ್ನವೀಸ್ ಮನೆ ಮುಂದೆ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ.
ಜಾಲ್ನಾದ ಅಂತರವಾಲಿ ಸಾರತಿಯಲ್ಲಿ ಭಾನುವಾರ ಭಾಷಣ ಮಾಡಿದ ಜಾರಂಗೆ ಇದ್ದಕ್ಕಿದ್ದಂತೆ ಫಡ್ನವೀಸ್ ವಿರುದ್ಧ ಹಲವಾರು ಆರೋಪಗಳನ್ನು ಮಾಡಿ ಕಿಡಿಕಾರಿದ್ದಾರೆ.‘ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವಂತೆ ಕೆಲವರಿಗೆ ಆಮಿಷ ಒಡ್ಡಲಾಗುತ್ತಿದೆ. ಈ ಷಡ್ಯಂತ್ರಗಳ ಹಿಂದೆ ಫಡ್ನವೀಸ್ ಇದ್ದಾರೆ. ಅವರು ನನ್ನನ್ನು ಕೊಲ್ಲಲು ಬಯಸಿದ್ದಾರೆ. ಈಗಿನಿಂದಲೇ ನಾನು ಮುಂಬೈಯಲ್ಲಿರುವ ಫಡ್ನವೀಸ್ ಅವರ ನಿವಾಸ ಸಾಗರ್ ಬಂಗಲೆಗೆ ಮೆರವಣಿಗೆ ಹೋಗಲು ಸಿದ್ಧನಿದ್ದೇನೆ’ ಎಂದರು.
ಈ ಹೇಳಿಕೆಯಿಂದ ನೆರೆದಿದ್ದ ಜನರಲ್ಲಿ ತೀವ್ರ ಗೊಂದಲ ಹಾಗೂ ಆಶ್ಚರ್ಯ ಉಂಟಾಯಿತು. ಕೂಡಲೇ ಕೆಲವರು ಜಾರಂಗೆ ಅವರ ಮೈಕ್ ಅನ್ನು ಕಸಿದುಕೊಳ್ಳಲು ಯತ್ನಿಸಿದರು. ಆಗ ಜಾರಂಗೆ ‘ಮುಂಬೈಗೆ ಏಕಾಂಗಿಯಾಗಿ ತೆರಳುತ್ತೇನೆ. ನನ್ನ ಬೆಂಬಲಕ್ಕೆ ಒಂದು ಕೋಲು ಮಾತ್ರ ಸಾಕು’ ಎಂದರು. ಜಾರಂಗೆ ವಿರುದ್ಧ ಬಿಜೆಪಿ ಕಿಡಿ:ಜಾರಂಗೆ ಹೇಳಿಕೆ ವಿರುದ್ಧ ತೀವ್ರ ಕಿಡಿಕಾರಿರುವ ರಾಜ್ಯ ಬಿಜೆಪಿ ಶಾಸಕ ನಿಲೇಶ್ ರಾಣೆ, ‘ಇದು ಜಾರಂಗೆಯ ನಿಜವಾದ ಮುಖವಾಗಿದೆ. ಫಡ್ನವೀಸ್ ಅವರನ್ನು ಮುಟ್ಟಲು ಬಿಜೆಪಿ ಕಾರ್ಯಕರ್ತರ ಬೃಹತ್ ಗೋಡೆಯನ್ನು ದಾಟಿ ಜಾರಂಗೆ ಬರಬೇಕು. ಜಾರಂಗೆ ರಾಜಕೀಯಕ್ಕೆ ಬರಬೇಕು. ಆದರೆ ಫಡ್ನವೀಸ್ ವಿರುದ್ಧ ಇಂಥ ಹೇಳಿಕೆ ನೀಡಿ ಕೆಳಮಟ್ಟಕ್ಕೆ ಳಿಯಬಾರದು’ ಎಂದಿದ್ದಾರೆ.