ಜಿಯೋ ಮೊಬೈಲ್‌ ಇಂಟರ್ನೆಟ್‌ ಇನ್ನು ಬಲು ದುಬಾರಿ

| Published : Jun 28 2024, 12:47 AM IST / Updated: Jun 28 2024, 05:03 AM IST

ಸಾರಾಂಶ

ದೇಶದ ಪ್ರಮುಖ ಮೊಬೈಲ್‌ ಸೇವಾ ಕಂಪನಿಗಳಲ್ಲಿ ಒಂದಾದ ‘ರಿಲಯನ್ಸ್‌ ಜಿಯೋ’ ಮೊಬೈಲ್‌ ಚಂದಾ ಶುಲ್ಕವನ್ನು ಶೇ.12ರಿಂದ ಶೇ.27ರವರೆಗೂ ಏರಿಕೆ ಮಾಡಿದೆ. ಅಲ್ಲದೆ 5ಜಿ ಸೇವೆಗಳ ಅನಿಯಮಿತ ಬಳಕೆಯ ಮೇಲೂ ಕಡಿವಾಣ ಹೇರಲು ನಿರ್ಧರಿಸಿದೆ. ಈ ಎಲ್ಲಾ ಘೋಷಣೆ ಜು.3ರಿಂದ ಜಾರಿಗೆ ಬರಲಿದೆ ಎಂದು ಕಂಪನಿ ತಿಳಿಸಿದೆ.

ನವದೆಹಲಿ: ದೇಶದ ಪ್ರಮುಖ ಮೊಬೈಲ್‌ ಸೇವಾ ಕಂಪನಿಗಳಲ್ಲಿ ಒಂದಾದ ‘ರಿಲಯನ್ಸ್‌ ಜಿಯೋ’ ಮೊಬೈಲ್‌ ಚಂದಾ ಶುಲ್ಕವನ್ನು ಶೇ.12ರಿಂದ ಶೇ.27ರವರೆಗೂ ಏರಿಕೆ ಮಾಡಿದೆ. ಅಲ್ಲದೆ 5ಜಿ ಸೇವೆಗಳ ಅನಿಯಮಿತ ಬಳಕೆಯ ಮೇಲೂ ಕಡಿವಾಣ ಹೇರಲು ನಿರ್ಧರಿಸಿದೆ. ಈ ಎಲ್ಲಾ ಘೋಷಣೆ ಜು.3ರಿಂದ ಜಾರಿಗೆ ಬರಲಿದೆ ಎಂದು ಕಂಪನಿ ತಿಳಿಸಿದೆ.

47 ಕೋಟಿ ಗ್ರಾಹಕರ ಮೂಲಕ ಮಾರುಕಟ್ಟೆಯಲ್ಲಿ ಶೇ.41ರಷ್ಟು ಪಾಲು ಹೊಂದಿರುವ ಜಿಯೋ ಮಾರುಕಟ್ಟೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಜಿಯೋ ದರ ಏರಿಕೆ ಮಾಡಿದ ಬೆನ್ನಲ್ಲೇ ಉಳಿದ ಪ್ರಮುಖ ಕಂಪನಿಗಳಾದ ಏರ್‌ಟೆಲ್‌, ವೊಡಾಫೋನ್‌ ಕೂಡ ದರ ಹೆಚ್ಚಳ ಮಾಡುವ ಸಾಧ್ಯತೆ ಇದೆ. 

ಎಷ್ಟು ಹೆಚ್ಚಳ?:

ಕನಿಷ್ಠ ರೀಚಾರ್ಜ್‌ನ ಮೊತ್ತವನ್ನು 15 ರು.ನಿಂದ 19 ರು.ಗೆ ಹೆಚ್ಚಳ ಮಾಡಲಾಗಿದೆ. 1 ಜಿಬಿ ಡಾಟಾ ಆ್ಯಡ್ ಆನ್‌ ಪ್ಯಾಕ್‌ನ ಶುಲ್ಕ ಇನ್ನು 19 ರು. ಆಗಲಿದೆ. ಇನ್ನು ಜನಪ್ರಿಯ ಯೋಜನೆಯಾದ 84 ದಿನಗಳ 666 ರು. ಪ್ಲಾನ್‌ ಅನ್ನು 799 ರು.ಗೆ ಏರಿಸಲಾಗಿದೆ.75 ಜಿಬಿ ಪೋಸ್ಟ್‌ ಪೇಯ್ಡ್‌ ಡಾಟಾ ಬೆಲೆ 399 ರು.ನಿಂದ 449 ರು.ಗೆ, 1599 ರು. ಹಾಗೂ 2999 ರು. ಬೆಲೆಯ ವಾರ್ಷಿಕ ಪ್ಯಾಕ್‌ ಅನ್ನು 1899 ರು. ಹಾಗೂ 3599 ರು.ಗೆ ಹೆಚ್ಚಿಸಲಾಗಿದೆ. ಜೊತೆಗೆ ನಿತ್ಯ 2ಜಿಬಿ ಮತ್ತು ಮೇಲಿನ ಯೋಜನೆಗಳಿಗೆ ಮಾತ್ರ ಇನ್ನು ಅನಿಯಮಿತ 5ಜಿ ಇಂಟರ್ನೆಟ್‌ ಸಿಗಲಿದೆ. ಹಾಲಿ 239 ರು. ಮೇಲ್ಪಟ್ಟ ಎಲ್ಲಾ ಯೋಜನೆಗಳಿಗೂ ಅನಿಯಮಿತ 5ಜಿ ಸೇವೆ ಬಳಕೆ ಅವಕಾಶ ಇತ್ತು.

2 ಹೊಸ ಸೇವೆ:

ಇದೇ ವೇಳೆ ಜಿಯೋ ಸೇಫ್‌ ಮತ್ತು ಜಿಯೋ ಟ್ರಾನ್ಸ್‌ಲೇಟ್‌ ಎಂಬ ಎರಡು ಆ್ಯಪ್‌ಗಳನ್ನು ಒಂದು ವರ್ಷದ ಅವಧಿಗೆ ಗ್ರಾಹಕರಿಗೆ ಉಚಿತವಾಗಿ ನೀಡಲು ಜಿಯೋ ನಿರ್ಧರಿಸಿದೆ.

ಜಿಯೋ ಸೇಫ್‌:

ಇಂದು ಕ್ವಾಂಟಂ ಸೆಕ್ಯೂರ್‌ ಸಂವಹನ ಆ್ಯಪ್‌ ಆಗಿದ್ದು, ಇದನ್ನು ಬಳಸಿಕೊಂಡು ಕರೆ, ಸಂದೇಶ, ದತ್ತಾಂಶ ರವಾನೆ ಮಾಡಬಹುದು.

ಜಿಯೋ ಟ್ರಾನ್ಸ್‌ಲೇಟ್‌:

ಇದೊಂದು ಬಹುಭಾಷಾ ಸಂವಹನ ಆ್ಯಪ್‌ ಆಗಿದ್ದು, ಇದನ್ನು ಬಳಸಿಕೊಂಡು ವಾಯ್ಸ್‌ ಕಾಲ್‌, ವಾಯ್ಸ್‌ ಮೆಸೇಜ್‌, ಸಂದೇಶಗಳನ್ನು ವಿವಿಧ ಭಾಷೆಗಳಲ್ಲಿ ಭಾಷಾಂತರ ಮಾಡಬಹುದಾಗಿದೆ.