ಕಳೆದ ವರ್ಷ ಮನೆಯಲ್ಲಿ ಕಂತೆ ಕಂತೆ ಸುಟ್ಟ ನೋಟುಗಳು ಪತ್ತೆಯಾದ ಪ್ರಕರಣದಲ್ಲಿ ಆರೋಪಿಯಾಗಿದ್ದ ದೆಹಲಿ ಹೈಕೋರ್ಟ್‌ನ ನ್ಯಾ.ಯಶವಂತ್‌ ವರ್ಮಾ (ಹಾಲಿ ಅಲಹಾಬಾದ್‌ ಹೈಕೋರ್ಟ್‌) ದಿಢೀರ್‌ ರಾಜೀನಾಮೆ ನೀಡಿದ್ದಾರೆ.

ವಾಗ್ದಂಡನೆ ಮುನ್ನವೇ ನ್ಯಾ. ವರ್ಮಾ ಪದತ್ಯಾಗ । ಸರ್ಕಾರದ ಶ್ರಮ, ಸಮಯ, ಸಂಪನ್ಮೂಲ ವ್ಯರ್ಥ

ಪಿಂಚಣಿ, ಗೌರವ ಬಚಾವ್‌ಗೆ ನಾಜೂಕಿನ ದಾರಿ । ಈ ಹಿಂದೆಯೂ ಇಬ್ಬರು ಜಡ್ಜ್‌ಗಳಿಂದ ಇದೇ ಕ್ರಮ

ಕಳೆದ ವರ್ಷ ಮನೆಯಲ್ಲಿ ಕಂತೆ ಕಂತೆ ಸುಟ್ಟ ನೋಟುಗಳು ಪತ್ತೆಯಾದ ಪ್ರಕರಣದಲ್ಲಿ ಆರೋಪಿಯಾಗಿದ್ದ ದೆಹಲಿ ಹೈಕೋರ್ಟ್‌ನ ನ್ಯಾ.ಯಶವಂತ್‌ ವರ್ಮಾ (ಹಾಲಿ ಅಲಹಾಬಾದ್‌ ಹೈಕೋರ್ಟ್‌) ದಿಢೀರ್‌ ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ಅವರು ತಪ್ಪಿತಸ್ಥರೆಂದು ಕಂಡುಬಂದರೆ ವಾಗ್ದಂಡನೆ ವಿಧಿಸುವ ಮೂಲಕ ಅವರ ಪದಚ್ಯುತಿಗೆ ನಡೆದಿದ್ದ ಸುದೀರ್ಘ ಮತ್ತು ಕ್ಲಿಷ್ಟಕರ ಪ್ರಕ್ರಿಯೆ ಜೀವ ಕಳೆದುಕೊಂಡಿದೆ. ಆರಂಭದಿಂದಲೂ ತಾವು ನಿರ್ದೋಷಿ ಎಂದೇ ಹೇಳಿಕೊಂಡು ಬಂದಿದ್ದ ನ್ಯಾ. ವರ್ಮಾ ಕಡೆಯ ಹಂತದವರೆಗೂ ಹೋರಾಡುವ ಬದಲು, ಮಾರ್ಗಮಧ್ಯದಲ್ಲೇ ಶಸ್ತ್ರ ತ್ಯಾಗ ಮಾಡಿದ್ದಾರೆ. ಜೊತೆಗೆ ರಾಜೀನಾಮೆ ಅಸ್ತ್ರ ಬಳಸುವ ಮೂಲಕ ವಾಗ್ದಂಡನೆ ಪ್ರಕ್ರಿಯೆಯಿಂದ ಬಚಾವ್‌ ಆಗುವ ಯತ್ನ ಮಾಡಿದ್ದಾರೆ. ಅವರ ಈ ನಡೆ ಸರ್ಕಾರದ ಸಮಯ, ಹಣ ಮತ್ತು ಸಂಪನ್ಮೂಲ ವ್ಯರ್ಥವಾಗಲು ಕಾರಣವಾಗಿದ್ದಲ್ಲದೇ, ನ್ಯಾಯಾಂಗದ ವಿಶ್ವಾಸಾರ್ಹತೆ ಮೇಲಿನ ಅನುಮಾನ ಹಾಗೆಯೇ ಉಳಿದುಕೊಳ್ಳುವಂತೆಯೂ ಆಗಿದೆ.ಸರ್ಕಾರದ ಕೆಲಸ, ಸಮಯ ವ್ಯರ್ಥ:

ಭಾರತದ ಸಂವಿಧಾನದಲ್ಲಿ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ಪದಚ್ಯುತಗೊಳಿಸುವುದು ಬಹಳ ಕಷ್ಟಕರ ಪ್ರಕ್ರಿಯೆ. ಅವರ ವಾಗ್ದಂಡನೆಗೆ ಸಂಸತ್ತಿನ ಎರಡೂ ಸದನಗಳಲ್ಲಿ ವಿಶೇಷ ಬಹುಮತ ಬೇಕು. ಇದು ನ್ಯಾಯಾಧೀಶರ (ತನಿಖೆ) ಕಾಯ್ದೆ, 1968ರ ಅಡಿಯಲ್ಲಿ ನಡೆಯುತ್ತದೆ. ಸಂಸತ್ತಿನಲ್ಲಿ ವಾಗ್ದಂಡನೆ ಗೊತ್ತುವಳಿ ಸಲ್ಲಿಕೆಯಾಗಿ, ಚರ್ಚೆ, ವೋಟಿಂಗ್‌ ಪ್ರಕ್ರಿಯೆಗಳು ನಡೆಯಬೇಕಿತ್ತು. ರಾಜೀನಾಮೆ ನೀಡಿದ ಕೂಡಲೇ ಈ ಎಲ್ಲಾ ಪ್ರಕ್ರಿಯೆಗಳು ತಾಂತ್ರಿಕವಾಗಿ ನಿಲ್ಲುತ್ತವೆ. ಕಾರಣ ನ್ಯಾಯಾಧೀಶರು ತಮ್ಮ ಸ್ಥಾನವನ್ನು ತೊರೆದುಬಿಟ್ಟರೆ, ಅವರನ್ನು ತೆಗೆಯುವ ಅಗತ್ಯವೇ ಇರುವುದಿಲ್ಲ. ಆದ್ದರಿಂದ ಸಂಸತ್ತು, ತನಿಖಾ ಸಮಿತಿ ಮತ್ತು ಸರ್ಕಾರದ ಎಲ್ಲಾ ಶ್ರಮ, ಸಮಯ, ಸಂಪನ್ಮೂಲಗಳು ವ್ಯರ್ಥ.

==ರಾಜೀನಾಮೆಯಿಂದ ಏನಾಗುತ್ತೆ?

- ತನಿಖಾ ಸಮಿತಿ ರಚನೆ, ಸಭೆಗಳು, ಸಾಕ್ಷ್ಯ ಸಂಗ್ರಹ, ವಿಚಾರಣೆ ಎಲ್ಲಾ ನಡೆದಿತ್ತು. ಇದೀಗ ನ್ಯಾ.ವರ್ಮಾ ರಾಜೀನಾಮೆಯಿಂದ ಇವೆಲ್ಲಾ ವ್ಯರ್ಥ

- ಸುಪ್ರೀಂಕೋರ್ಟ್ ಆಂತರಿಕ ತನಿಖಾ ಸಮಿತಿ ಸತ್ಯಾಂಶ ಕಂಡುಹಿಡಿದಿದ್ದರೂ, ಅಂತಿಮ ತೀರ್ಮಾನ, ವಿಸ್ತೃತ ವರದಿ ಸಾರ್ವಜನಿಕರಿಗೆ ಸಿಗೋಲ್ಲ

- ರಾಜೀನಾಮೆ ನೀಡಿದ ಕಾರಣ ವಾಗ್ದಂಡನೆ ಇಲ್ಲ. ನಿವೃತ್ತಿಯ ಬಳಿಕ ಜಡ್ಜ್‌ಗಳಿಗೆ ಸಿಗುವ ಪಿಂಚಣಿ ಸೇರಿ ಎಲ್ಲಾ ಸವಲತ್ತುಗಳು ನ್ಯಾ.ವರ್ಮಾಗೆ ಲಭ್ಯ

- ನ್ಯಾಯಾಂಗದ ಮೇಲಿನ ಜನರ ವಿಶ್ವಾಸ ಕುಗ್ಗುತ್ತದೆ. ಆರೋಪ ಬಂದಾಗ ರಾಜೀನಾಮೆ ನೀಡಿ ತಪ್ಪಿಸಿಕೊಳ್ಳುತ್ತಾರೆ’ ಎಂಬ ಭಾವನೆ ಬಲಗೊಳ್ಳುತ್ತೆ

==ಈ ಹಿಂದಿನ ರಾಜೀನಾಮೆ ಉದಾಹರಣೆ

ಭಾರತದಲ್ಲಿ ಹೈಕೋರ್ಟ್/ಸುಪ್ರೀಂ ಕೋರ್ಟ್ ನ್ಯಾಯಾಧೀಶರ ವಿರುದ್ಧ ಭ್ರಷ್ಟಾಚಾರ ಆರೋಪ ಬಂದಾಗ ರಾಜೀನಾಮೆ ನೀಡಿ ತಪ್ಪಿಸಿಕೊಳ್ಳುವ ಘಟನೆಗಳು ಈ ಹಿಂದೆಯೂ ನಡೆದಿವೆ. ಇದುವರೆಗೆ ಯಾವುದೇ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಪದಚ್ಯುತಿಯಾಗಿ ಶಿಕ್ಷೆ ಅನುಭವಿಸಿಲ್ಲ.

==

1. ನ್ಯಾ. ಪಿ.ಡಿ. ದಿನಕರನ್‌ (2011): ಸಿಕ್ಕಿಂ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾಗಿದ್ದರು. ಭೂಮಿ ಅಕ್ರಮ, ಭ್ರಷ್ಟಾಚಾರ ಆರೋಪದ ಸಂಬಂಧ ರಾಜ್ಯಸಭೆಯಲ್ಲಿ ವಾಗ್ದಂಡನೆ ಪ್ರಕ್ರಿಯೆ ಪ್ರಾರಂಭವಾದಾಗ ರಾಜೀನಾಮೆ ನೀಡಿದರು. ತನಿಖೆ ನಿಂತಿತು.

2. ನ್ಯಾ. ಸೌಮಿತ್ರ ಸೇನ್ (2011): ಕಲ್ಕತ್ತಾ ಹೈಕೋರ್ಟ್ ನ್ಯಾಯಾಧೀಶರಾಗಿದ್ದರು. ಕೋರ್ಟ್‌ ಹಣದ ದುರ್ಬಳಕೆ ಆರೋಪ ಕೇಳಿಬಂತು. ರಾಜ್ಯಸಭೆಯಲ್ಲಿ ವಾಗ್ದಂಡನೆ ತೀರ್ಮಾನವಾದ ನಂತರ, ಲೋಕಸಭೆಯಲ್ಲಿ ಚರ್ಚೆಗೂ ಮುನ್ನವೇ ರಾಜೀನಾಮೆ ನೀಡಿದರು.==

ನ್ಯಾ.ವರ್ಮಾ ಕೇಸು ಮುಂದೇನು?

ಇದುವರೆಗೆ ಜಡ್ಜ್ ಆಗಿದ್ದ ಕಾರಣ ಅವರಿಗೆ ಒಂದಿಷ್ಟು ಸಾಂವಿಧಾನಿಕ ವಿನಾಯ್ತಿ ಇತ್ತು. ರಾಜೀನಾಮೆ ಬಳಿಕ ಅದು ರದ್ದಾಗುತ್ತದೆ. ಹೀಗಾಗಿ ಹಣ ಸಿಕ್ಕ ಕೇಸಲ್ಲಿ ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ ತನಿಖೆ ನಡೆಸಬಹುದು. ಆದರೆ ಅದು ಆಗುತ್ತಾ ಎಂಬುದು ಪ್ರಶ್ನೆ.