ಸಾರಾಂಶ
ಚಂಡೀಗಢ: ಪಾಕ್ ಪರ ಬೇಹುಗಾರಿಕೆ ಆರೋಪದಲ್ಲಿ ಬಂಧಿತ ಯುಟ್ಯೂಬರ್ ಜ್ಯೋತಿ, 26 ಪ್ರವಾಸಿಗರ ನರಮೇಧಗೈದ ಪಹಲ್ಗಾಂ, ಕೇರಳ, ಒಡಿಶಾದ ಪುರಿ ದೇಗುಲಕ್ಕೂ ಭೇಟಿ ನೀಡಿದ್ದ ವಿಷಯ ಬೆಳಕಿಗೆ ಬಂದಿದೆ. ಹೀಗಾಗಿ ಈ ಸ್ಥಳಗಳ ಕುರಿತು ಆಕೆ ಪಾಕಿಸ್ತಾನದೊಂದಿಗೆ ಮಾಹಿತಿ ಹಂಚಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಜ್ಯೋತಿ ಇದೇ ವರ್ಷದ ಜನವರಿಯಲ್ಲಿ ಕಾಶ್ಮೀರದ ಶ್ರೀನಗರ, ಸೋನ್ಮಾರ್ಗ್, ಗುಲ್ಮಾರ್ಗ್ ಮತ್ತು ಇತ್ತೀಚೆಗೆ ಉಗ್ರದಾಳಿಗೆ ಸಾಕ್ಷಿಯಾದ ಪಹಲ್ಗಾಂಗೆ ಭೇಟಿ ನೀಡಿದ್ದಳು. ಅದಾದ ಬಳಿಕ, ದಕ್ಷಿಣದ ರಾಜ್ಯವಾದ ಕೇರಳಕ್ಕೆ ಪ್ರವಾಸ ಕೈಗೊಂಡಿದ್ದಳು. ಯೋಜನೆಯ ಪ್ರಕಾರ, ಕೊಚ್ಚಿ ಮೂಲಕ ಕೇರಳ ಪ್ರವೇಶಿಸುವುದಾಗಿ ಹೇಳಿಕೊಂಡಿದ್ದಳಾದರೂ, ಅಲ್ಲಿಗೆ ಹೋಗದೆ ಕಣ್ಣೂರಿನ ದಾರಿ ಹಿಡಿದಳು. ಆ ಊರನ್ನೂ ನೋಡದೆ, ಅಲಕ್ಕಾಡಿಗೆ ಹೋದಳು. ಅದು ಎಳಿಮಲ ನೌಕಾ ತರಬೇತಿ ಅಕಾಡೆಮಿಯಿಂದ ಕೇವಲ 17 ಕಿ.ಮೀ. ದೂರದಲ್ಲಿದೆ ಹಾಗೂ 11 ಯುವಕರು ಐಸಿಸ್ ಸೇರಿದ ಪದನ್ನಾ ಗ್ರಾಮವೂ ಇಲ್ಲಿಗೆ ಹತ್ತಿರ.
ಇದಾದ ಬಳಿಕ, ಪ್ರಯಾಗರಾಜ್‌ನಲ್ಲಿ ನಡೆದ ಕುಂಭಮೇಳಕ್ಕೂ ಜ್ಯೋತಿ ಹೋಗಿದ್ದಳು. ನಂತರ ಒಮ್ಮೆ ಪಾಕಿಸ್ತಾನಕ್ಕೂ ಹೋಗಿ ಬಂದಿದ್ದಳು. ಸಾಲದ್ದಕ್ಕೆ, ಪಹಲ್ಗಾಂ ದಾಳಿ ನಡೆದಾಗಲೂ ಪಾಕ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಳು.
ಇನ್ನು 2024ರ ನವೆಂಬರ್‌ನಲ್ಲಿ ಈಕೆ ಒಡಿಶಾದ ಪುರಿಗೆ ಭೇಟಿ ನೀಡಿ, ಜಗನ್ನಾಥ ದೇವಸ್ಥಾನ, ಸಮುದ್ರತೀರ ಮತ್ತು ಊರಿನ ಫೋಟೋಗಳನ್ನು ಹಂಚಿಕೊಂಡಿದ್ದಳು. ಈ ಹಿನ್ನೆಲೆಯಲ್ಲಿ, ಆಕೆ ಪುರಿ ಕುರಿತ ಮಾಹಿತಿಯನ್ನೂ ಪಾಕ್ ಜತೆ ಹಂಚಿಕೊಂಡಿರುವ ಶಂಕೆ ವ್ಯಕ್ತವಾಗುತ್ತಿದೆ.