ಸಾರಾಂಶ
ನವದೆಹಲಿ: ಕಚತೀವು ದ್ವೀಪವನ್ನು ಕಾಂಗ್ರೆಸ್ ಸರ್ಕಾರ ನಿರ್ಲಕ್ಷ್ಯದಿಂದ ಶ್ರೀಲಂಕೆಗೆ ಬಿಟ್ಟುಕೊಟ್ಟಿದೆ ಎಂಬ ಮಾಹಿತಿ ಬಹಿರಂಗವಾದ ಬೆನ್ನಲ್ಲೇ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಚುನಾವಣೆಯ ಹೊತ್ತಿನಲ್ಲಿ ಪರಸ್ಪರ ಆರೋಪ ಪ್ರತ್ಯಾರೋಪಗಳನ್ನು ಆರಂಭಿಸಿವೆ. ಈ ಮೂಲಕ ಕಾಂಗ್ರೆಸ್ ಭಾರತವನ್ನು ರಕ್ಷಿಸಲ್ಲ ಎಂದು ಮೋದಿ ಆರೋಪಿಸಿದ್ದರೆ ಸೌಹಾರ್ದ ದೇಣಿಗೆ ಎಂಬುದಾಗಿ ಮಲ್ಲಿಕಾರ್ಜುನ ಖರ್ಗೆ ಸಮರ್ಥಿಸಿಕೊಂಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ‘ಕಚತೀವು ದ್ವೀಪದ ಕುರಿತು ಸತ್ಯಾಂಶ ಹೊರಬಂದಿದ್ದು, ಕಾಂಗ್ರೆಸ್ ಎಷ್ಟು ಕಠೋರ ಮನಸ್ಸಿನಿಂದ ಭಾರತದ ಭೂಭಾಗವನ್ನು ಮತ್ತೊಂದೆ ದೇಶಕ್ಕೆ ಬಿಟ್ಟುಕೊಟ್ಟಿದೆ ಎಂಬುದನ್ನು ಬಯಲು ಮಾಡಿದೆ. ಈ ಮೂಲಕ ಭಾರತದ ಏಕತೆ, ಸಮಗ್ರತೆಯನ್ನು ಕಾಂಗ್ರೆಸ್ ಪಕ್ಷ ಕುಂಠಿತಗೊಳಿಸುವುದೇ ತನ್ನ ಮೂಲ ಮಂತ್ರವಾಗಿರಿಸಿಕೊಂಡುತ್ತು’ ಎಂದು ಟೀಕಿಸಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಮಲ್ಲಿಕಾರ್ಜುನ ಖರ್ಗೆ, ‘ಬಿಜೆಪಿಯು 2015ರಲ್ಲಿ ಬಾಂಗ್ಲಾದೇಶದ ಜೊತೆ ಸೌಹಾರ್ದ ಗಡಿ ಒಪ್ಪಂದ ಮಾಡಿಕೊಂಡಂತೆ ನಾವು 1974ರಲ್ಲಿ ಶ್ರೀಲಂಕೆಗೆ ನಮ್ಮ ಭೂಭಾಗವನ್ನು ಸ್ನೇಹದ ಸಂಕೇತವಾಗಿ ಬಿಟ್ಟುಕೊಟ್ಟಿದ್ದೇವೆ. ಈ ವಿಷಯವನ್ನು 10 ವರ್ಷಗಳ ಕಾಲ ಮುಚ್ಚಿಟ್ಟು ಈಗ ಬಯಲು ಮಾಡಿರುವುದು ಚುನಾವಣಾ ಲಾಭ ಪಡೆಯುವ ಉದ್ದೇಶದಿಂದ ಎಂಬುದನ್ನು ಸಾಬೀತು ಮಾಡಿದೆ’ ಎಂದು ಸಮರ್ಥಿಸಿಕೊಂಡಿದ್ದಾರೆ.