ಸಾರಾಂಶ
ಚಂಡೀಗಢ: ಪದ್ಮ ಪ್ರಶಸ್ತಿ ಮತ್ತು 4 ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತ ನಟಿ ಹಾಗೂ ಮಂಡಿ ಕ್ಷೇತ್ರದ ನೂತನ ಸಂಸದೆ ಕಂಗನಾ ರಾಣಾವತ್ ಮೇಲೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಮಹಿಳಾ ಸಿಐಎಸ್‌ಎಫ್ ಸಿಬ್ಬಂದಿಯೊಬ್ಬರು ಕಪಾಳಮೋಕ್ಷ ಮಾಡಿದ ಆಘಾತಕಾರಿ ಘಟನೆ ಗುರುವಾರ ನಡೆದಿದೆ.
ದೆಹಲಿಯಲ್ಲಿ ಈ ಹಿಂದೆ ನಡೆದ ರೈತ ಪ್ರತಿಭಟನೆ ಕುರಿತು ಕಂಗನಾ ಆಡಿದ್ದ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿ ತಾನು ದಾಳಿ ನಡೆಸಿದ್ದಾಗಿ ದಾಳಿ ನಡೆಸಿದ ಮಹಿಳಾ ಸಿಬ್ಬಂದಿ ತನ್ನ ವರ್ತನೆ ಸಮರ್ಥಿಸಿಕೊಂಡಿದ್ದಾಳೆ. ಅದೃಷ್ಟವಶಾತ್ ದಾಳಿಯಲ್ಲಿ ಯಾವುದೇ ತೊಂದರೆ ಇಲ್ಲದೆ ಕಂಗನಾ ಪಾರಾಗಿದ್ದು, ಮುಂಬೈನಿಂದ ದೆಹಲಿಗೆ ಸುರಕ್ಷಿತವಾಗಿ ಬಂದಿಳಿದಿದ್ದಾರೆ.
ಈ ನಡುವೆ ಹಲ್ಲೆ ಮಾಡಿದ ಮಹಿಳಾ ಸಿಐಎಸ್‌ಎಫ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದ್ದು, ಪ್ರಕರಣ ದಾಖಲಿಸಲಾಗಿದೆ. ಇನ್ನೊಂದೆಡೆ ಸಿಐಎಸ್‌ಎಫ್ ಕೂಡಾ ಆಂತರಿಕ ತನಿಖೆಗೆ ಆದೇಶಿಸಿದೆ.
ಘಟನೆಯ ಕುರಿತು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ತೀವ್ರ ವಿಷಾದ ವ್ಯಕ್ತಪಡಿಸಿ, ಹಲ್ಲೆ ನಡೆದ ಮಹಿಳೆಯ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಿದ್ದಾರೆ.ದೇಶದ ಅತ್ಯಂತ ಮಹತ್ವದ ಕಟ್ಟಡಗಳು, ಸಂಸ್ಥೆಗಳು, ವಿಮಾನ ನಿಲ್ದಾಣಗಳ ಭದ್ರತೆ ಉಸ್ತುವಾರಿ ಹೊತ್ತಿರುವ ಸಿಐಎಸ್‌ಎಫ್ ಸಿಬ್ಬಂದಿ ಅತ್ಯಾಧುನಿಕ ಗನ್‌ಗಳನ್ನು ಹೊಂದಿರುತ್ತಾರೆ. ಅಂಥ ಸಿಬ್ಬಂದಿಯೇ ನೂತನ ಸಂಸದೆ ಮೇಲೆ ಹಲ್ಲೆ ನಡೆಸಿರುವುದು ಭಾರೀ ಭದ್ರತಾ ಲೋಪ ಎಂಬ ಟೀಕೆಗೆ ಗುರಿಯಾಗಿದೆ.
ಏನಾಯ್ತು?:
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಮುಂಬೈಗೆ ಆಗಮಿಸಿದ್ದ ಕಂಗನಾ ದೆಹಲಿ ವಿಮಾನ ಏರಲು ಭದ್ರತಾ ತಪಾಸಣೆಗೆ ಒಳಗಾಗುತ್ತಿದ್ದರು. ಈ ವೇಳೆ ಅವರತ್ತ ಬಂದ ಮಹಿಳಾ ಸಿಐಎಸ್‌ಎಫ್ ಸಿಬ್ಬಂದಿ ಕಪಾಳಕ್ಕೆ ಹೊಡೆದಿದ್ದೂ ಅಲ್ಲದೆ, ನಟಿಯನ್ನು ನಿಂದಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ ನಾನು ರೈತರ ಹೋರಾಟ ಬೆಂಬಲಿಸುತ್ತೇನೆ ಎಂದು ಹೇಳಿದ್ದಾರೆ.
ಈ ವೇಳೆ ಸುತ್ತಲೂ ಇದ್ದ ಕಂಗನಾ ಆಪ್ತರು ಮತ್ತು ಇತರೆ ಸಿಐಎಸ್‌ಎಫ್ ಸಿಬ್ಬಂದಿ, ಕಂಗನಾರನ್ನು ರಕ್ಷಣೆ ಮಾಡಿ ಸುರಕ್ಷಿತವಾಗಿ ಕರೆದೊಯ್ದಿದ್ದಾರೆ.ಘಟನೆ ಬಳಿಕ ಸಮೀಪದಲ್ಲೇ ಇದ್ದ ಇತರೆ ಪ್ರಯಾಣಿಕರ ಬಳಿ ಬಂದ ದಾಳಿ ನಡೆಸಿದ ಮಹಿಳಾ ಸಿಬ್ಬಂದಿ ‘ದೆಹಲಿಯಲ್ಲಿ ಪ್ರತಿಭಟನಾ ನಿರತ ರೈತರು 100-200 ರುಪಾಯಿಗೆ ಇಲ್ಲಿ ಬಂದು ಕುಳಿತಿದ್ದಾರೆ ಎಂದು ಕಂಗನಾ ಹೇಳಿದ್ದರು.
ಆ ಪ್ರತಿಭಟನೆಯಲ್ಲಿ ನನ್ನ ತಾಯಿ ಕೂಡಾ ಭಾಗಿಯಾಗಿದ್ದರು’ ಎಂದು ದಾಳಿಗೆ ಕಾರಣ ಬಹಿರಂಗಪಡಿಸಿದ್ದಾರೆ.ಪಂಜಾಬ್‌ನಲ್ಲಿ ಭಯೋತ್ಪಾದನೆ ಹೆಚ್ಚಳ: ತಮ್ಮ ಮೇಲೆ ಹಲ್ಲೆ ನಡೆದಿರುವ ಕುರಿತು ಕಂಗನಾ ಎಕ್ಸ್‌ನಲ್ಲಿ ವಿಡಿಯೋ ಸಂದೇಶ ಕಳುಹಿಸಿ ತಾವು ಆರೋಗ್ಯವಾಗಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ಪಂಜಾಬ್‌ನಲ್ಲಿ ಹೆಚ್ಚುತ್ತಿರುವ ಉಗ್ರಕೃತ್ಯದ ಕುರಿತು ಕಳವಳಗೊಂಡಿರುವುದಾಗಿ ತಿಳಿಸಿದ್ದಾರೆ.