ಸಾರಾಂಶ
ಚೆನ್ನೈ : ತಮಿಳುನಾಡು ರಾಜಕಾರಣದ ಪಿತಾಮಹ, ಡಿಎಂಕೆ ಧುರೀಣ ಕರುಣಾನಿಧಿಯ ಪುತ್ರಿ ಕನಿಮೋಳಿ ತೂತ್ತುಕುಡಿ ಕ್ಷೇತ್ರದಲ್ಲಿ ಎರಡನೇ ಬಾರಿಗೆ ಸ್ಪರ್ಧೆಗೆ ಸಜ್ಜಾಗಿದ್ದಾರೆ. ಅವರಿಗೆ ಎಐಎಡಿಎಂಕೆಯ ಅಭ್ಯರ್ಥಿಯಾಗಿರುವ ನಾಟಿವೈದ್ಯ ಶಿವಸ್ವಾಮಿ ವೇಲುಮಣಿ ಪ್ರಬಲ ಸ್ಪರ್ಧೆ ನೀಡುತ್ತಿದ್ದಾರೆ. ಅಲ್ಲದೆ ಈ ಬಾರಿ ಬಿಜೆಪಿ ತಮಿಳ್ ಮಾನಿಲ ಕಾಂಗ್ರೆಸ್-ಮೂಪನಾರ್ ಜೊತೆಗೆ ತ್ರಿ ಮಾಡಿಕೊಂಡು ರೈತ ಮುಖಂಡ ವಿಜಯಸೀಲನ್ ಅವರನ್ನು ಕಣಕ್ಕಿಳಿಸಿರುವುದು ಕಣವನ್ನು ಮತ್ತಷ್ಟು ರೋಚಕವಾಗಿಸಿದೆ.
2009ರಲ್ಲಷ್ಟೇ ಹೊಸದಾಗಿ ಸೃಷ್ಟಿಯಾದ ಈ ಕ್ಷೇತ್ರದಲ್ಲಿ 14 ಲಕ್ಷ ಮತದಾರರು ಇದ್ದಾರೆ. 2 ಬಾರಿ ಡಿಎಂಕೆ, ಒಂದು ಬಾರಿ ಎಐಎಡಿಎಂಕೆ ಕ್ಷೇತ್ರದಲ್ಲಿ ಗೆಲುವು ಸಾಧಿಸಿವೆ. ಕ್ಷೇತ್ರದ ವ್ಯಾಪ್ತಿಯಲ್ಲಿ 6 ವಿಧಾನಸಭಾ ಕ್ಷೇತ್ರಗಳಿದ್ದು 5ರಲ್ಲಿ ಡಿಎಂಕೆ, ಒಂದರಲ್ಲಿ ಎಐಎಡಿಎಂಕೆ ಶಾಸಕರಿದ್ದಾರೆ.
ಮೊದಲ ಗೆಲುವು:
ಕನಿಮೋಳಿ, 2019ರ ಚುನಾವಣೆಯಲ್ಲಿ ಮೊದಲ ಬಾರಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಬಿಜೆಪಿಯ ತಮಿಳ್‌ಸಾಯ್ ಸೌಂದರರಾಜನ್ ವಿರುದ್ಧ ಭರ್ಜರಿ ಜಯ ಸಾಧಿಸಿದ್ದರು. ಈ ಬಾರಿ ಅವರಿಗೆ ಬಿಜೆಪಿ ಎದುರಾಳಿಯಾಗಿ ಇಲ್ಲದಿದ್ದರೂ ಎಐಎಡಿಎಂಕೆಯ ಪ್ರಬಲ ಸವಾಲು ಎದುರಾಗಿದೆ.
ಕನಿಮೋಳಿ ಅವರು ಲೋಕಸಭೆಯಲ್ಲಿ ಡಿಎಂಕೆಯ ಪರವಾಗಿ ಘಂಟಾಘೋಷವಾಗಿ ಮಾತನಾಡಿ ಸೈ ಎನಿಸಿಕೊಂಡಿದ್ದರೂ ಕ್ಷೇತ್ರದಲ್ಲಿ ಜನತೆಯ ಕೈಗೆ ಸುಲಭವಾಗಿ ಸಿಗುವುದಿಲ್ಲ ಎಂಬ ಆರೋಪ ಅವರ ಮೇಲಿದ್ದು ಚುನಾವಣೆ ಗೆಲುವಿಗೆ ತೊಡಕಾಗುವ ಸಾಧ್ಯತೆಯಿದೆ. ಆದಾಗ್ಯೂ ತಮಿಳುನಾಡಿನಲ್ಲಿ ಅವರದೇ ಸರ್ಕಾರವಿದ್ದು, ಕ್ಷೇತ್ರಕ್ಕೆ ರಸ್ತೆ, ಒಳಚರಂಡಿ ಮುಂತಾದ ಮೂಲಸೌಕರ್ಯಕ್ಕೆ ಅಗಾಧ ಹಣವನ್ನು ಬಿಡುಗಡೆ ಮಾಡಿಸಿ ಒಂದಷ್ಟು ಕೆಲಸಗಳನ್ನು ಮಾಡಿಸಿರುವುದು ಅವರ ಕೈಹಿಡಿಯುವ ಸಾಧ್ಯತೆ ಹೆಚ್ಚಿದೆ.
ಎಐಎಡಿಎಂಕೆ ಅಚ್ಚರಿ ಅಭ್ಯರ್ಥಿ:
ಕಳೆದ ಬಾರಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ಎಐಎಡಿಎಂಕೆ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ. ಇದು ಕನಿಮೋಳಿಯ ಗೆಲುವನ್ನು ಸುಲಭಗೊಳಿಸಿತ್ತು. ಆದರೆ ಈ ಬಾರಿ ಅಚ್ಚರಿ ಎಂಬಂತೆ ಜಿಲ್ಲೆಯ ಶ್ರೀವೈಕುಂಠಂ ಮೂಲದ ನಾಟಿ ವೈದ್ಯ ಶಿವಸ್ವಾಮಿ ವೇಲುಮಣಿ ಅವರನ್ನು ಪಕ್ಷ ಕಣಕ್ಕಿಳಿಸಿದೆ. ಇವರು ಸ್ಥಳೀಯವಾಗಿ ಬಹಳ ಜನಪ್ರಿಯರಾಗಿರುವ ಹಿನ್ನೆಲೆಯಲ್ಲಿ ಕನಿಮೋಳಿಗೆ ಪ್ರಬಲ ಪೈಪೋಟಿ ನೀಡುವ ಮೂಲಕ ಕ್ಷೇತ್ರವನ್ನು ಸ್ಟಾರ್ ಕಣ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ.
ಇವರು ಕೇವಲ ಎಂಟನೆ ತರಗತಿ ಓದಿದ್ದರೂ ತಮ್ಮ ತಾತನ ಬಳಿ ನಾಟಿ ವೈದ್ಯಕೀಯ ಶಾಸ್ತ್ರ ಕಲಿತು ಸಿದ್ಧ ವೈದ್ಯಕೀಯ ಪದ್ಧತಿಯಲ್ಲಿ ಡಾಕ್ಟರ್ ಪದವಿ ಪೂರೈಸಿದವರನ್ನು ನೇಮಿಸಿಕೊಂಡು ಆಸ್ಪತ್ರೆಯನ್ನು ತೆರೆದು ಮೂಳೆ ಶಸ್ತ್ರಚಿಕಿತ್ಸೆಯಲ್ಲಿ ಭಾರೀ ಮೆಚ್ಚುಗೆ ಗಳಿಸಿದ್ದಾರೆ. ಇವರಿಗೆ ಕ್ಷೇತ್ರದ ಆರು ಶಾಸಕರ ಪೈಕಿ ನಾಲ್ವರ ಬೆಂಬಲವೂ ಇದೆ.
ಸೈಕಲ್ ಏರಿ ಬಂದ ಸೀಲನ್:
ಬಿಜೆಪಿ ಮತ್ತು ಟಿಎಂಸಿ (ಎಂ) ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ವಿಜಯಸೀಲನ್ ಸ್ಥಳೀಯ ರೈತ ಮುಖಂಡರಾಗಿದ್ದು, ಸರಳತೆಯಿಂದ ಕ್ಷೇತ್ರದಲ್ಲಿ ಭಾರೀ ಮೆಚ್ಚುಗೆ ಗಳಿಸಿದ್ದಾರೆ. ಇದರ ಮೊದಲ ದ್ಯೋತಕವಾಗಿ ಅವರು ನಾಮಪತ್ರ ಸಲ್ಲಿಕೆಗೆ ಸೈಕಲ್‌ನಲ್ಲೇ ಬಂದಿದ್ದು ಗಮನ ಸೆಳೆದಿತ್ತು. ಕ್ಷೇತ್ರದಲ್ಲಿ ತಮಿಳ್ ಮಾನಿಲ ಕಾಂಗ್ರೆಸ್-ಮೂಪನಾರ್ ಪಕ್ಷಕ್ಕೆ ಹೇಳಿಕೊಳ್ಳುವಂತಹ ನೆಲೆ ಇಲ್ಲದಿದ್ದರೂ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವುದು ಅದರ ಬಲವನ್ನು ಹೆಚ್ಚಿಸಿದೆ. ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದ ತಮಿಳ್‌ಸಾಯ್ ಬರೋಬ್ಬರಿ 2 ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದುಕೊಂಡಿದ್ದರು. ಈ ಮತಗಳನ್ನು ಗಣನೆಗೆ ತೆಗೆದುಕೊಂಡಾಗ ಇವರು ಡಿಎಂಕೆ ಮತ್ತು ಎಐಎಡಿಎಂಕೆ ಮತಗಳನ್ನು ವಿಭಜನೆ ಇಬ್ಬರ ಪೈಕಿ ಒಬ್ಬರ ಸೋಲಿಗೆ ಕಾರಣವಾಗಬಹುದು ಎಂಬುದನ್ನು ಅಲ್ಲಗಳೆಯುವಂತಿಲ್ಲ. ಒಟ್ಟಾರೆ ಚುನಾವಣೆಯಲ್ಲಿ ತೂತ್ತುಕುಡಿಯಲ್ಲಿ ಒಟ್ಟು 31 ಅಭ್ಯರ್ಥಿಗಳು ಕಣದಲ್ಲಿದ್ದು, ಆರೋಪ ಪ್ರತ್ಯಾರೋಪಗಳು ಆರಂಭವಾಗಿವೆ.