ಕಪಿಲ್‌ ಕೆಫೆ ಮೇಲೆ ದಾಳಿ ಮಾಡಿದ್ದು ಬಿಷ್ಣೋಯಿ ಗ್ಯಾಂಗ್‌

| N/A | Published : Aug 09 2025, 12:00 AM IST / Updated: Aug 09 2025, 04:56 AM IST

Salman Khan/Kapil Sharma

ಸಾರಾಂಶ

ಕೆನಡಾದ ಸರ್ರೆಯಲ್ಲಿ ಇರುವ ಹಾಸ್ಯ ಕಲಾವಿದ ಕಪಿಲ್‌ ಶರ್ಮಾ ಅವರ ‘ಕ್ಯಾಪ್ಸ್‌ ಕೆಫೆ’ ಮೇಲೆ ಗುರುವಾರ ಬೆಳಗಿನ ಜಾವ ಗುಂಡಿನ ದಾಳಿ ನಡೆದಿತ್ತು. ಇದರ ಹಿಂದೆ ಪಾತಕಿ ಲಾರೆನ್ಸ್‌ ಬಿಷ್ಣೋಯಿ ತಂಡದ ಕೈವಾಡವಿರುವುದು ಬೆಳಕಿಗೆ ಬಂದಿದೆ.

 ನವದೆಹಲಿ: ಕೆನಡಾದ ಸರ್ರೆಯಲ್ಲಿ ಇರುವ ಹಾಸ್ಯ ಕಲಾವಿದ ಕಪಿಲ್‌ ಶರ್ಮಾ ಅವರ ‘ಕ್ಯಾಪ್ಸ್‌ ಕೆಫೆ’ ಮೇಲೆ ಗುರುವಾರ ಬೆಳಗಿನ ಜಾವ ಗುಂಡಿನ ದಾಳಿ ನಡೆದಿತ್ತು. ಇದರ ಹಿಂದೆ ಪಾತಕಿ ಲಾರೆನ್ಸ್‌ ಬಿಷ್ಣೋಯಿ ತಂಡದ ಕೈವಾಡವಿರುವುದು ಬೆಳಕಿಗೆ ಬಂದಿದೆ.

ಇಂಡಿಯಾ ಟುಡೆ ವರದಿ ಪ್ರಕಾರ, ಈ ದಾಳಿಗೆ ಸಂಬಂಧಿಸಿದಂತೆ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯಿ ತಂಡದವನಾದ ಹ್ಯಾರಿ ಬಾಕ್ಸರ್‌ ವಿಡಿಯೋವೊಂದನ್ನು ಮಾಡಿದ್ದು, ಅದರಲ್ಲಿ ಸಲ್ಮಾನ್‌ ಖಾನ್‌ ಜತೆ ಕೆಲಸ ಮಾಡುವ ನಿರ್ದೇಶಕರು, ನಿರ್ಮಾಪಕರು ಅಥವಾ ನಟರ ಎದೆಗೆ ಗುಂಡು ಹೊಡೆಯುವುದಾಗಿ ಬೆದರಿಸಿದ್ದಾನೆ. ಅತ್ತ ಬಿಷ್ಣೋಯಿ ಆಪ್ತನಾದ ಇನ್ನೊಬ್ಬ ಗ್ಯಾಂಗ್‌ಸ್ಟರ್‌ ಗೋಲ್ಡಿ ಬ್ರಾರ್‌ ಪ್ರತಿಕ್ರಿಯಿಸಿ, ‘ಕಪಿಲ್‌ರನ್ನು ಸಂಪರ್ಕಿಸಲು ಯತ್ನಿಸಿದರೂ ಅದು ಸಾಧ್ಯವಾಗಿರಲಿಲ್ಲ. ಹಾಗಾಗಿ ಕೆಫೆ ಮೇಲೆ ದಾಳಿಯಾಯಿತು. ಅವರು ಇದನ್ನೂ ನಿರ್ಲಕ್ಷಿಸಿದರೆ, ಮುಂದಿನ ದಾಳಿ ಮುಂಬೈನಲ್ಲೇ ನಡೆಯುತ್ತದೆ’ ಎಂದು ಎಚ್ಚರಿಸಿದ್ದಾನೆ. 

 1998ರಲ್ಲಿ ಸಲ್ಮಾನ್‌ ರಾಜಸ್ಥಾನದಲ್ಲಿ ಕೃಷ್ಣಮೃಗವನ್ನು ಕೊಂದಿದ್ದರು. ಹೀಗಾಗಿ ಅದನ್ನು ಪೂಜ್ಯಭಾವದಿಂದ ಕಾಣುವ ಬಿಷ್ಣೋಯಿಗಳು ಸಲ್ಲು ಮೇಲೆ ಕೆಂಗಣ್ಣು ಬೀರಿದ್ದರು. ಸಲ್ಲು ಹತ್ಯೆಗೂ ಯತ್ನ ನಡೆದಿತ್ತು ಮತ್ತು ಸಲ್ಮಾನ್‌ ಆಪ್ತ ಉದ್ಯಮಿ ಬಾಬಾ ಸಿದ್ದಿಖಿಯನ್ನು ಸಾಯಿಸಿದ್ದರು. ಇದೀಗ ಕಪಿಲ್‌ ತಮ್ಮ ಕೆಫೆ ಉದ್ಘಾಟನೆಗೆ ಸಲ್ಮಾನ್‌ರನ್ನು ಆಹ್ವಾನಿಸಿದ್ದರಿಂದ ಬಿಷ್ಣೋಯಿ ಗ್ಯಾಂಗ್‌ ದಾಳಿ ನಡೆದಿದೆ ಎನ್ನಲಾಗಿದೆ.ಈ ಮೊದಲು, ಕಪಿಲ್‌, ಕಾರ್ಯಕ್ರಮವೊಂದರಲ್ಲಿ ಸಿಖ್ಖರಿಗೆ ಅವಮಾನ ಮಾಡಿದ್ದರೆಂದು ಆರೋಪಿಸಿ ಖಲಿಸ್ತಾನಿಗಳು ಕೆಫೆ ಆರಂಭವಾದ ಕೆಲ ದಿನಗಳಲ್ಲಿ ಅದರ ಮೇಲೆ ದಾಳಿ ಮಾಡಿದ್ದರು.

ಪಾರ್ಕಿಂಗ್‌ ವಿಚಾರಕ್ಕೆ ಜಗಳ: ನಟಿ ಹುಮಾ ಖುರೇಷಿ ಸೋದರ ಹತ್ಯೆ

  ನವದೆಹಲಿಪಾರ್ಕಿಂಗ್‌ ವಿಚಾರಕ್ಕೆ ಆರಂಭವಾದ ಜಗಳ ತಾರಕಕ್ಕೆ ತಿರುಗಿ ಇಬ್ಬರು ಹದಿಹರೆಯದ ಯುವಕರು, ನಟಿ ಹುಮಾ ಖುರೇಷಿ ಅವರ ಸೋದರ ಸಂಬಂಧಿ ಆಸಿಫ್‌ ಖುರೇಷಿಯನ್ನು ಕೊಚ್ಚಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ದೆಹಲಿಯ ಭೋಗಲ್‌ ಎಂಬಲ್ಲಿ ನಡೆದಿದೆ.

ಆರೋಪಿಗಳಾದ ಉಜ್ವಲ್‌ (19) ಮತ್ತು ಗೌತಂ (18) ಹುಮಾ ಸೋದರ ಸಂಬಂಧಿ ಆಸಿಫ್‌ ಅವರ ಮನೆ ಎದುರು ಬೈಕ್‌ ನಿಲ್ಲಿಸಿದ್ದರು. ಇದನ್ನು ಆಸಿಫ್‌ ಪ್ರಶ್ನಿಸಿದಾಗ, ವಾಗ್ವಾದ ನಡೆದಿದೆ. ಈ ವೇಳೆ ಆರೋಪಿಗಳು ಹರಿತವಾದ ಆಯುಧದಿಂದ ಕೊಚ್ಚಿ ಹಾಕಿದ್ದಾರೆ. ತಕ್ಷಣವೇ ಆಸಿಫ್‌ರನ್ನು ಆಸ್ಪತ್ರೆಗೆ ದಾಖಲಿಸಿತಾದರೂ, ಅಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಆರೋಪಿಗಳನ್ನು ಬಂಧಿಸಲಾಗಿದೆ.ಇಬ್ಬರೂ ಆರೋಪಿಗಳು ಆಸಿಫ್‌ ಮನೆ ಸಮೀಪದ ನಿವಾಸಿಗಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಥೆನಾಲ್‌ನಿಂದ ಮೈಲೇಜ್‌ ಕಡಿಮೆ ಆಗಿದೆ ಎಂದು ಸಾಬೀತು ಮಾಡಿ: ಗಡ್ಕರಿ

ನವದೆಹಲಿ: ‘ಎಥೆನಾಲ್‌ ಮಿಶ್ರಿತ ಪೆಟ್ರೋಲ್‌ ಮತ್ತು ಡೀಸೆಲ್‌ನಿಂದ ವಾಹನದ ಮೈಲೇಜ್‌ ಕಡಿಮೆಯಾಗಿರುವ ಬಗ್ಗೆ ಉದಾಹರಣೆ ಇದ್ದರೆ ನೀಡಿ’ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಸವಾಲು ಹಾಕಿದ್ದಾರೆ.ಎಥೆನಾಲ್‌ ಮಿಶ್ರಿತ ಇಂಧನದಿಂದ ವಾಹನಗಳ ಮೈಲೇಜ್‌ ಕಡಿಮೆ ಆಗುತ್ತಿದೆ ಎಂದು ವರದಿಗಳು ಪ್ರಕಟವಾಗಿದ್ದವು. ಈ ಬಗ್ಗೆ ಬ್ಯುಸಿನೆಸ್‌ ಸ್ಟಾಂಡರ್ಡ್‌ನ ಕಾರ್ಯಕ್ರಮದಲ್ಲಿ ಪ್ರಶ್ನೆಗೆ ಉತ್ತರಿಸಿದ ಗಡ್ಕರಿ, ‘ಇದು ಚರ್ಚೆಯ ವಿಷಯವೇ ಅಲ್ಲ. ಇದನ್ನು ರಾಜಕೀಯವಾಗಿ ಹೇಳಬೇಕೋ ಬೇಡವೋ ಗೊತ್ತಿಲ್ಲ. ಪೆಟ್ರೋಲಿಯಂ ಲಾಬಿ ಇದನ್ನು ಕುಶಲತೆಯಿಂದ ಬಳಸುತ್ತಿರುವಂತೆ ತೋರುತ್ತಿದೆ. ವಿಶ್ವಾದ್ಯಂತ ಎಥೆನಾಲ್‌ನಿಂದ ತೊಂದರೆಗೊಳಗಾಗಿರುವ ಒಂದಾದರೂ ವಾಹನ ಇದ್ದರೆ ತೋರಿಸಿ. ನಾನು ಓಪನ್‌ ಚಾಲೆಂಜ್ ಹಾಕುತ್ತೇವೆ. ಅಂಥಹ ಯಾವುದೇ ವಾಹನವಿಲ್ಲ’ ಎಂದರು.

ಜಡ್ಜ್‌ ವಿರುದ್ಧ ಶಿಸ್ತುಕ್ರಮ ಆದೇಶ ಸುಪ್ರೀಂನಿಂದ ರದ್ದು

ನವದೆಹಲಿ: ಅಲಹಾಬಾದ್ ಹೈಕೋರ್ಟ್‌ನ ನ್ಯಾಯಾಧೀಶ ಪ್ರಶಾಂತ್‌ ಕುಮಾರ್‌ ಅವರನ್ನು ನಿವೃತ್ತಿಯವರೆಗೆ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯಿಂದ ತೆಗೆದುಹಾಕಬೇಕು ಮತ್ತು ಕಡ್ಡಾಯವಾಗಿ ಇನ್ನೊಬ್ಬ ಹಿರಿಯ ನ್ಯಾಯಾಧೀಶರೊಂದಿಗೆ ಕಲಾಪ ನಡೆಸಬೇಕು ಎಂಬ ತನ್ನದೇ ಆ.4 ರ ಆದೇಶವನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಹಿಂಪಡೆದಿದೆ.ಹೈಕೋರ್ಟಲ್ಲಿ ಕ್ರಿಮಿನಲ್ ಪ್ರಕರಣವೊಂದನ್ನು ರದ್ದುಗೊಳಿಸಲು ನ್ಯಾ। ಪ್ರಶಾಂತ್ ಕುಮಾರ್ ನಿರಾಕರಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟು, ಆ.4ರಂದು ನ್ಯಾ। ಕುಮಾರ್‌ ಮೇಲೆ ಶಿಸ್ತುಕ್ರಮಕ್ಕೆ ಆದೇಶಿಸಿತ್ತು.

ಆದರೆ ಸುಪ್ರೀಂ ಕೋರ್ಟ್‌ ಆದೇಶದ ಬಗ್ಗೆ ಹೈಕೋರ್ಟ್‌ ನ್ಯಾಯಾಧೀಶರಿಂದಲೇ ವಿರೋಧ ವ್ಯಕ್ತವಾದ ಕಾರಣ, ಕೋರ್ಟ್ ನ್ಯಾಯಾಧೀಶರ ಮೇಲೆ ವಿಧಿಸಲಾದ ನಿರ್ಬಂಧ ಮರುಪರಿಶೀಲಿಸುವಂತೆ ಖುದ್ದು ಭಾರತದ ಮುಖ್ಯ ನ್ಯಾ। ಬಿ.ಆರ್. ಗವಾಯಿ, ಪೀಠವನ್ನು ಕೋರಿದ್ದರು.ಹೀಗಾಗಿ ನಿರ್ಬಂಧ ಹಿಂಪಡೆದಿರುವ ನ್ಯಾ। ಪರ್ದಿವಾಲಾ ಅವರ ಪೀಠ, ‘ನ್ಯಾಯಾಧೀಶರನ್ನು ಮುಜುಗರಕ್ಕೀಡು ಮಾಡುವ ಅಥವಾ ಅವಹೇಳನ ಮಾಡುವ ಉದ್ದೇಶ ನಮಗಿರಲಿಲ್ಲ. ಹೈಕೋರ್ಟ್‌ ಅಧಿಕಾರ ವ್ಯಾಪ್ತಿಯಲ್ಲಿ ಮೂಗು ತೂರಿಸುವ ಉದ್ದೇಶವೂ ಇಲ್ಲ’ ಎಂದು ಸ್ಪಷ್ಟಪಡಿಸಿತು.

ದಿಲ್ಲಿ: ಖಾಸಗಿ ಶಾಲೆ ಫೀ ನಿಯಂತ್ರಣಕ್ಕೆ ಕಾನೂನು

ನವದೆಹಲಿ: ಮಾನ್ಯತೆ ಪಡೆದ ಖಾಸಗಿ ಅನುದಾನರಹಿತ ಶಾಲೆಗಳ ಶುಲ್ಕ ಹೆಚ್ಚಳವನ್ನು ನಿಯಂತ್ರಿಸುವ ಮಸೂದೆಯನ್ನು ಶುಕ್ರವಾರ ದೆಹಲಿ ವಿಧಾನಸಭೆ ಶುಕ್ರವಾರ ಅಂಗೀಕರಿಸಿದೆ.ರಾಷ್ಟ್ರ ರಾಜಧಾನಿಯಲ್ಲಿ ಖಾಸಗಿ ಅನುದಾನರಹಿತ ಶಾಲೆಗಳು ಬೇಕಾಬಿಟ್ಟಿ ಶುಲ್ಕ ಹೆಚ್ಚಳ ಮಾಡುತ್ತಿವೆ ಎಂದು ಪೋಷಕರು ಕಿಡಿಕಾರುತ್ತಿದ್ದರು. ಹೀಗಾಗಿ ಇದಕ್ಕೆ ಬ್ರೇಕ್‌ ಹಾಕಲು ಮಸೂದೆ ತರಲಾಗಿದೆ

Read more Articles on