ಸಿನಿಮಾಕ್ಕೆ ಕೋವಿಡ್‌ ಲಸಿಕೆ ಕಂಪನಿ ಸೀರಂ ಎಂಟ್ರಿ : ಕರಣ್‌ ಕಂಪನಿಗೆ 1000 ಕೋಟಿ ಹೂಡಿಕೆ

| Published : Oct 22 2024, 12:07 AM IST / Updated: Oct 22 2024, 05:05 AM IST

ಸಾರಾಂಶ

ವಿಶ್ವದ ಅತಿದೊಡ್ಡ ಲಸಿಕೆ ಉತ್ಪಾದನಾ ಕಂಪನಿಯಾದ ಪುಣೆ ಮೂಲದ ಸೀರಂ ಇನ್‌ಸ್ಟಿಟ್ಯೂಟ್‌ ಇದೀಗ ಚಿತ್ರರಂಗಕ್ಕೂ ಕಾಲಿಟ್ಟಿದೆ.

ನವದೆಹಲಿ: ವಿಶ್ವದ ಅತಿದೊಡ್ಡ ಲಸಿಕೆ ಉತ್ಪಾದನಾ ಕಂಪನಿಯಾದ ಪುಣೆ ಮೂಲದ ಸೀರಂ ಇನ್‌ಸ್ಟಿಟ್ಯೂಟ್‌ ಇದೀಗ ಚಿತ್ರರಂಗಕ್ಕೂ ಕಾಲಿಟ್ಟಿದೆ. 

ಕೋವಿಡ್‌ ಲಸಿಕೆ ಮೂಲಕ ಜಗದ್ವಿಖ್ಯಾತಿ ಹೊಂದಿದ ಸೀರಂ ಕಂಪನಿಯ ಮಾಲೀಕ ಅದಾರ್‌ ಪೂನಾವಾಲ, ಕರಣ್‌ ಜೋಹರ್‌ ಒಡೆತನದ ಧರ್ಮ ಪ್ರೊಡಕ್ಷನ್‌ನಲ್ಲಿ ಶೇ.50ರಷ್ಟು ಪಾಲು ಖರೀದಿಗೆ ಮುಂದಾಗಿದ್ದಾರೆ. ಇದಕ್ಕಾಗಿ ಅವರು ತಮ್ಮ ಸೆರೇನ್‌ ಎಂಟಟೇನ್‌ಮೆಂಟ್‌ ಮೂಲಕ 1000 ಕೋಟಿ ರು. ಹೂಡಿಕೆ ಮಾಡಲು ನಿರ್ಧರಿಸಿದ್ದಾರೆ.

ಬಿಷ್ಣೋಯ್‌ ಮುಂದಿನ ಗುರಿ ರಾಹುಲ್‌, ಓವೈಸಿ: ಒಡಿಯಾ ನಟ ವಿವಾದ

ನವದೆಹಲಿ: ಖಲಿಸ್ತಾನಿ ಉಗ್ರ ಲಾರೆನ್ಸ್‌ ಬಿಷ್ಣೋಯಿ ತಂಡದಿಂದ ಎನ್‌ಸಿಪಿಯ ಬಾಬಾ ಸಿದ್ದಿಕಿ ಹತ್ಯೆಯಾದ ಬೆನ್ನಲ್ಲೇ, ಆತನ ಮುಂದಿನ ಗುರಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮತ್ತು ಎಂಐಎಂ ನಾಯಕ ಅಸಾದುದ್ದೀನ್‌ ಒವೈಸಿ ಆಗಿರಬೇಕು ಎಂದು ಹೇಳುವ ಮೂಲಕ ಒಡಿಯಾ ನಟ ಬುದ್ಧಾದಿತ್ಯ ಮೊಹಾಂತಿ ವಿವಾದ ಸೃಷ್ಟಿಸಿದ್ದಾರೆ.

 ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಮೊಹಾಂತಿ, ‘ಜರ್ಮನ್‌ ಬಳಿ ಗೆಸ್ಟಾಪೋ, ಇಸ್ರೇಲ್‌ ಬಳಿ ಮೊಸಾದ್‌, ಅಮೆರಿಕದ ಬಳಿ ಸಿಐಎ ಇರುವಂತೆ ಭಾರತದಲ್ಲೀಗ ಲಾರೆನ್ಸ್‌ ಬಿಷ್ಣೋಯ್‌ ಇದ್ದು, ಆತನ ಪಟ್ಟಿಯಲ್ಲಿ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಹಾಗೂ ರಾಹುಲ್‌ ಗಾಂಧಿ ಇರಬಹುದು’ ಎಂದು ಬರೆದಿದ್ದರು. ಈ ಪೋಸ್ಟ್‌ ವಿವಾದ ಸೃಷ್ಟಿಯಾಗುತ್ತಿದ್ದಂತೆ ಅದನ್ನು ಅಳಿಸಿಹಾಕಿರುವ ಮೊಹಾಂತಿ, ‘ರಾಹುಲ್‌ ಅವರನ್ನು ಗುರಿಯಾಗಿಸುವ ಅಥವ ಅವರ ವಿರುದ್ಧ ಬರೆಯುವ ಉದ್ದೇಶ ಇರಲಿಲ್ಲ’ ಎನ್ನುತ್ತಾ ಸಾಮಾಜಿಕ ಜಾಲತಾಣದಲ್ಲಿ ಕ್ಷಮೆ ಯಾಚಿಸಿದ್ದಾರೆ.

ಮಾಲ್ಡೀವ್ಸ್‌ನಲ್ಲೂ ಭಾರತದ ಯುಪಿಐ ವ್ಯವಸ್ಥೆ ಅಳವಡಿಕೆ ಮಾಡಲು ಸರ್ಕಾರ ಸೂಚನೆ

ಮಾಲೆ: ಭಾರತದತ್ತ ಸ್ನೇಹಹಸ್ತ ಚಾಚುತ್ತಿರುವ ದ್ವೀಪರಾಷ್ಟ್ರ ಮಾಲ್ಡೀವ್ಸ್‌ನ ಆರ್ಥಿಕತೆಗೆ ಬಲ ತುಂಬುವ ಸಲುವಾಗಿ ಭಾರತ ಅಭಿವೃದ್ಧಿಪಡಿಸಿರುವ ಆನ್‌ಲೈನ್‌ ಪಾವತಿ ವ್ಯವಸ್ಥೆ ಯುಪಿಐ ಅನ್ನು ಪರಿಚಯಿಸಲು ಅಧ್ಯಕ್ಷ ಮೊಹಮ್ಮದ್‌ ಮುಯಿಜು ಮುಂದಾಗಿದ್ದಾರೆ. ತಮ್ಮ ಸಚಿವ ಸಂಪುಟದ ಶಿಫಾರಸಿನ ಅನ್ವಯ ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ದೇಶದ ಎಲ್ಲಾ ಬ್ಯಾಂಕು, ಟೆಲೆಕಾಂ ಕಂಪನಿ, ಸರ್ಕಾರಿ ಒಡೆತನದ ಕಂಪನಿ ಹಾಗೂ ಫಿನ್‌ಟೆಕ್‌ ಕಂಪನಿಗಳಿಗೆ ಈ ಒಕ್ಕೂಟ ಸೇರಿಕೊಳ್ಳುವಂತೆ ಸೂಚಿಸಿದ್ದಾರೆ. ‘ಈ ಬದಲಾವಣೆಯಿಂದ ಆರ್ಥಿಕ ಒಳಗೊಳ್ಳುವಿಕೆ ಹೆಚ್ಚಳ, ಹಣಕಾಸಿನ ವಹಿವಾಟುಗಳಲ್ಲಿ ಸುಧಾರಣೆ, ಡಿಜಿಟಲ್ ಮೂಲಸೌಕರ್ಯ ವರ್ಧನೆ ಸೇರಿದಂತೆ ಮಾಲ್ಡೀವ್ಸ್‌ನ ಆರ್ಥಿಕತೆಗೆ ಅನೇಕ ಲಾಭಗಳಾಗಲಿದೆ’ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ದೀದಿ ಭೇಟಿ ಬೆನ್ನಲ್ಲೇ ವೈದ್ಯರ ಉಪವಾಸ ಸತ್ಯಾಗ್ರಹ ಅಂತ್ಯ

ಕೋಲ್ಕತಾ: ಇಲ್ಲಿನ ಆರ್‌ಜಿ ಕರ್‌ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಅತ್ಯಾಚಾರ ಖಂಡಿಸಿ ಹಲವು ವಾರಗಳಿಂದ ರಾಜ್ಯಾದ್ಯಂತ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವನ್ನು ನಿಲ್ಲಿಸಲು ಕಿರಿಯ ವೈದ್ಯರು ನಿರ್ಧರಿಸಿದ್ದಾರೆ. ಸಿಎಂ ಮಮತಾ ಬ್ಯಾನರ್ಜಿ ಅವರೊಂದಿಗೆ ನಡೆದ ಸುದೀರ್ಘ ಚರ್ಚೆಯ ಬೆನ್ನಲ್ಲೇ ಈ ಬೆಳವಣಿಗೆಯಾಗಿದೆ.‘ಇಂದಿನ ಸಭೆಯಲ್ಲಿ ಕೆಲ ನಿರ್ದೇಶನಗಳನ್ನು ನೀಡುವ ಭರವಸೆಯನ್ನು ಸಿಎಂ ನೀಡಿದ್ದಾರೆ. ಆದರೆ ಸರ್ಕಾರದ ಧೋರಣೆ ಧನಾತ್ಮಕವಾಗಿರಲಿಲ್ಲ. ಜನಸಾಮಾನ್ಯರು ನಮ್ಮನ್ನು ಬೆಂಬಲಿಸಿದ್ದರು. ನಮ್ಮ ಹದಗೆಡುತ್ತಿರುವ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಮೃತ ವೈದ್ಯೆಯ ಪೋಷಕರು ಸೇರಿದಂತೆ ಅನೇಕರು ಉಪವಾಸ ಕೈಬಿಡುವಂತೆ ಒತ್ತಾಯಿಸುತ್ತಿರುವ ಕಾರಣ ನಾವು ಅದಕ್ಕೆ ಒಪ್ಪಿದ್ದೇವೆ. ಜೊತೆಗೆ ಮಂಗಳವಾರ ಆರೋಗ್ಯ ವಲಯವನ್ನು ಸಂಪೂರ್ಣ ಸ್ಥಿಗಿತಗೊಳಿಸುವ ನಿರ್ಣಯವನ್ನೂ ಹಿಂಪಡೆಯುತ್ತೇವೆ’ ಎಂದು ಕಿರಿಯ ವೈದ್ಯರು ಹೇಳಿದ್ದಾರೆ.

ಹಿಮಾಚಲದ ವಿವಾದಿತ ಸಂಜೌಲಿ ಮಸೀದಿಯ ಅನಧಿಕೃತ ಭಾಗ ತೆರವು

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ವಿವಾದಕ್ಕೆ ಕಾರಣವಾಗಿದ್ದ ಶಿಮ್ಲಾದ ಸಂಜೌಲಿ ಮಸೀದಿಯ ಅನಧಿಕೃತ ಭಾಗವನ್ನು ಸೋಮವಾರ ತೆರವುಗೊಳಿಸಲಾಗಿದೆ. ವಕ್ಫ್‌ ಮಂಡಳಿ ಅನುಮತಿ ನೀಡಿದ ಮಸೀದಿಯ ಮೂರು ಅಂತಸ್ತಿನ ಕಟ್ಟಡವನ್ನು ಕೆಡವಲಾಗಿದೆ. ಐದು ಅಂತಸ್ತಿನ ವಿವಾದಿತ ಕಟ್ಟಡದ ಮೂರು ಅಂತಸ್ತನ್ನು ಕೆಡವಲು ಮುನ್ಸಿಪಾಲ್ ಕಾರ್ಪೋರೆಷನ್ ಆದೇಶಿಸಿತ್ತು. ಈ ಆದೇಶದ ಪ್ರಕಾರ ವಕ್ಫ್‌ ಮಂಡಳಿ ಹಾಗೂ ಮಸೀದಿಯ ಸಮಿತಿ ಅಧ್ಯಕ್ಷ ಅನುಮತಿ ಬೆನ್ನಲ್ಲೇ ಪೊಲೀಸರ ಬಿಗಿ ಭದ್ರತೆಯೊಂದಿಗೆ ವಿವಾದಿತ ಮಸೀದಿಯ ಮೇಲ್ಛಾವಣಿಯನ್ನು ತೆರವುಗೊಳಿಸಿದ್ದಾರೆ. ಸೆ.12ರಂದು ಮಸೀದಿಯ ಅನಧಿಕೃತ ಮಹಡಿಗಳು ಕಟ್ಟಡಗಳನ್ನು ತೆರವುಗೊಳಿಸಲು ಒತ್ತಾಯಿಸಿ ಬೃಹತ್‌ ಪ್ರತಿಭಟನೆ ನಡೆದಿತ್ತು. ಘಟನೆಯಲ್ಲಿ 10 ಮಂದಿ ಗಾಯಗೊಂಡಿದ್ದರು.