ಕರ್ಕಿ ಸ್ತ್ರೀ ಸಬಲೀಕರಣದ ಪ್ರತೀಕ : ಪ್ರಧಾನಿ ಮೋದಿ

| N/A | Published : Sep 14 2025, 01:04 AM IST

ಕರ್ಕಿ ಸ್ತ್ರೀ ಸಬಲೀಕರಣದ ಪ್ರತೀಕ : ಪ್ರಧಾನಿ ಮೋದಿ
Share this Article
  • FB
  • TW
  • Linkdin
  • Email

ಸಾರಾಂಶ

‘ಸುಶೀಲಾ ಕರ್ಕಿ ಅವರು ನೇಪಾಳ ಮಧ್ಯಂತರ ಸರ್ಕಾರದ ಪ್ರಧಾನಿಯಾಗಿ ಆಯ್ಕೆಯಾಗಿರುವುದು ಮಹಿಳಾ ಸಬಲೀಕರಣದ ಪ್ರತೀಕ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇದೇ ವೇಳೆ, ಬದಲಾವಣೆಗೆ ಹೋರಾಟ ಮಾಡಿದ ನೇಪಾಳಿ ಯುವಕರನ್ನೂ ಶ್ಲಾಘಿಸಿದ್ದಾರೆ.

 ಇಂಫಾಲ :  ‘ಸುಶೀಲಾ ಕರ್ಕಿ ಅವರು ನೇಪಾಳ ಮಧ್ಯಂತರ ಸರ್ಕಾರದ ಪ್ರಧಾನಿಯಾಗಿ ಆಯ್ಕೆಯಾಗಿರುವುದು ಮಹಿಳಾ ಸಬಲೀಕರಣದ ಪ್ರತೀಕ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇದೇ ವೇಳೆ, ಬದಲಾವಣೆಗೆ ಹೋರಾಟ ಮಾಡಿದ ನೇಪಾಳಿ ಯುವಕರನ್ನೂ ಶ್ಲಾಘಿಸಿದ್ದಾರೆ.

ಮಣಿಪುರ ರಾಜಧಾನಿ ಇಂಫಾಲದಲ್ಲಿ ರ್‍ಯಾಲಿ ವೇಳೆ ಮಾತನಾಡಿದ ಅವರು , ‘140 ಕೋಟಿ ಭಾರತೀಯರ ಪರವಾಗಿ ಕರ್ಕಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅವರು ನೇಪಾಳದಲ್ಲಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯನ್ನು ತರಲಿದ್ದಾರೆ ಎನ್ನುವ ವಿಶ್ವಾಸ ನನಗಿದೆ. ದೇಶದ ಅತ್ಯುನ್ನತ ಹುದ್ದೆಯನ್ನು ಅಲಂಕರಿಸುವ ಮೂಲಕ ಅವರು ಮಹಿಳಾ ಸಬಲೀಕರಣಕ್ಕೆ ಉತ್ತಮ ಉದಾಹರಣೆಯಾಗಿದ್ದಾರೆ’ ಎಂದರು.

ರಾಜಕೀಯ ಅಸ್ಥಿರತೆ ನಡುವೆಯೂ ಕಳೆದ ಕೆಲ ದಿನಗಳಿಂದ ನಾಗರಿಕರು ವಿಶೇಷವಾಗಿ ಯುವ ಸಮುದಾಯ ನೇಪಾಳದಲ್ಲಿ ಸ್ವಚ್ಛತೆ ಮತ್ತು ಕಟ್ಟಡಗಳಿಗೆ ಬಣ್ಣ ಬಳಿವ ಕಾರ್ಯದಲ್ಲಿ ತೊಡಗಿಕೊಂಡಿರುವುದಕ್ಕೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು. ‘ಇಂತಹ ಪ್ರಕ್ಷುಬ್ಧ ಸಮಯದ ನಡುವೆಯೂ ಪ್ರಜಾಪ್ರಭುತ್ವ ಮೌಲ್ಯಗಳನ್ನು ಉಳಿಸಿಕೊಂಡಿರುವ ನೇಪಾಳದ ಜನರನ್ನು ಅಭಿನಂದಿಸಲು ಬಯಸುತ್ತೇನೆ’ ಎಂದು ಹೇಳಿದರು.

ಉಭಯ ರಾಷ್ಟ್ರಗಳ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ ಪ್ರಧಾನಿ, ‘ ಭಾರತ ಮತ್ತು ನೇಪಾಳ ಇತಿಹಾಸ, ನಂಬಿಕೆ ಮತ್ತು ಸಾಂಸ್ಕೃತಿಕ ಸಂಬಂಧಗಳಿಂದ ಬದ್ಧವಾಗಿರುವ ಆಪ್ತ ಸ್ನೇಹಿತರು. ಭಾರತವು ನೆರೆ ದೇಶದ ಪರಿವರ್ತನೆಯ ಹಂತದಲ್ಲಿ ಅಲ್ಲಿನ ಜನರೊಂದಿಗೆ ದೃಢವಾಗಿ ನಿಂತಿದೆ. ಎರಡೂ ರಾಷ್ಟ್ರಗಳು ಒಟ್ಟಿಗೆ ಮುಂದುವರೆಯುತ್ತಿವೆ’ ಎಂದು ನುಡಿದರು.

ವಿಮಾನ ಅಪಹರಿಸಿದ್ದ ಸುಶೀಲಾ ಪತಿ! 

ಕಾಠ್ಮಂಡು: ನೇಪಾಳ ಮಧ್ಯಂತರ ಪ್ರಧಾನಿ ಅಭ್ಯರ್ಥಿ ಸುಶೀಲಾ ಕರ್ಕಿ ಅವರ ಪತಿ 1973 ರಲ್ಲಿ ವಿಮಾನ ಅಪಹರಣ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಸೇರಿದ್ದರು ಎಂಬ ಕುತೂಹಲದ ವಿಷಯ ಈಗ ಬಹಿರಂಗವಾಗಿದೆ.

ರಾಜಕಾರಣಿ ದುರ್ಗಾ ಪ್ರಸಾದ್ ಸುಬೇದಿ ಅವರನ್ನು ಕರ್ಕಿ ವಿವಾಹವಾಗಿದ್ದರು. 1973ರಲ್ಲಿ ರಾಜ ಮಹೇಂದ್ರ ಅವರ ವಿರುದ್ಧದ ರಾಜಪ್ರಭುತ್ವದ ವಿರುದ್ಧ, 3 ಬಾರಿ ಪ್ರಧಾನಿ ಆಗಿದ್ದ ಗಿರಿಜಾಪ್ರಸಾದ್ ಕೊಯಿರಾಲ ಸಿಡಿದೆದ್ದಿದ್ದರು. ಆಗ ಕೊಯಿರಾಲ ಅವರ ಆಪ್ತರಾಗಿದ್ದ ಸುಬೇದಿ ಸೇರಿ ಮೂವರು ಸಶಸ್ತ್ರ ಹೋರಾಟಕ್ಕೆ ನಿಧಿ ಸಂಗ್ರಹ ನಡೆಸುತ್ತಿದ್ದರು. ಇದಕ್ಕಾಗಿ ದಿಲ್ಲಿಯಿಂದ ಕಾಠ್ಮಂಡುವಿಗೆ ಹೊರಟ ವಿಮಾನ ಅಪಹರಣಕ್ಕೆ ನಿರ್ಧರಿಸಿದ್ದರು. ಏಕೆಂದರೆ ಅದರಲ್ಲಿ ನೇಪಾಳಕ್ಕೆ ಭಾರತ ನೀಡುತ್ತಿದ್ದ 30 ಲಕ್ಷ ರು. ನೆರವಿನ ಹಣ ಸಾಗಿಸಲಾಗುತ್ತಿತ್ತು.ಆ ವಿಮಾನದಲ್ಲಿ ಸುಬೇದಿ ಸೇರಿ ಮೂವರು ಹತ್ತಿದರು. ಆ ವಿಮಾನದ ಪ್ರಯಾಣಿಕರಲ್ಲಿ ನೇಪಾಳದ ನಟ ಸಿ.ಪಿ. ಲೋಹಾನಿ ದಂಪತಿ ಮತ್ತು ಭಾರತೀಯ ಚಲನಚಿತ್ರ ತಾರೆ ಮಾಲಾ ಸಿನ್ಹಾ ಕೂಡ ಇದ್ದರು. ವಿಮಾನ ಆಗಸಕ್ಕೇರಿದ ಬಳಿಕ ಸಿಬ್ಬಂದಿಗೆ ಬೆದರಿಸಿದ ಸುಬೇದಿ ಬಿಹಾರದ ಫೋರ್ಬ್ಸ್‌ಗಂಜ್‌ನಲ್ಲಿ ಬಲವಂತವಾಗಿ ಇಳಿಸಿದರು. ಅಲ್ಲಿ 30 ಲಕ್ಷ ರು.ನೊಂದಿಗೆ ಪರಾರಿ ಆದರು.

ಬಳಿಕ ಸುಬೇದಿ ಸೇರಿ ಇಬ್ಬರು ಸಿಕ್ಕಿಬಿದ್ದರು. ಅವರನ್ನು ಭಾರತದ ಜೈಲಿಗೆ ಹಾಕಲಾಯಿತು. ಬಳಿಕ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿ ನೇಪಾಳಕ್ಕೆ ಕಳಿಸಿಕೊಡಲಾಯಿತು.

ಸಹಜ ಸ್ಥಿತಿಯತ್ತ ನೇಪಾಳ: ಕರ್ಫ್ಯೂ ವಾಪಸ್‌

ಕಾಠ್ಮಂಡು: ಯುವ ಸಮುದಾಯದವರ ಆಕ್ರೋಶ ಹಿಂಸಾಚಾರಕ್ಕೆ ತಿರುಗಿ ನಲುಗಿದ್ದ ನೇಪಾಳವು ಹೊಸ ಪ್ರಧಾನಿ ಆಯ್ಕೆ ಬೆನ್ನಲ್ಲೇ ಸಹಜ ಸ್ಥಿತಿಗೆ ಮರಳಿದೆ. ದೇಶದಲ್ಲಿ ಸದ್ಯ ಶಾಂತಿ ನಿಧಾನಗತಿಯಲ್ಲಿ ಮರಳುತ್ತಿದ್ದು, ಕರ್ಫ್ಯೂ, ನಿಷೇಧಾಜ್ಞೆ ವಾಪಸ್‌ ತೆಗೆದುಕೊಳ್ಳಲಾಗಿದೆ.ಮಾಧ್ಯಮಗಳ ವರದಿ ಪ್ರಕಾರ, ನೇಪಾಳದಲ್ಲಿ ಕರ್ಫ್ಯೂ ಶನಿವಾರ ಮುಂಜಾನೆ 6 ಗಂಟೆಗೆ ಅಂತ್ಯಗೊಂಡಿದೆ. ಸೇನೆ ಮತ್ತೆ ವಿಸ್ತರಿಸಲಿಲ್ಲ.ಇನ್ನು ದೇಶದಲ್ಲಿ ಬಹುತೇಕ ಕಡೆಗಳಲ್ಲಿ ವಿಧಿಸಲಾಗಿದ್ದ ನಿರ್ಬಂಧ ತೆರವುಗೊಳಿಸಲಾಗಿದ್ದು, ಕೆಲ ಸೂಕ್ಷ್ಮ ವಲಯಗಳಲ್ಲಿ ಮುಂದುವರೆದಿದೆ. ದೇಶದಲ್ಲಿ ಸಾರ್ವಜನಿಕ ಸಾರಿಗೆ ಸಂಚಾರ ಪುನಾರಂಭಗೊಂಡಿದೆ. ಕಾಠ್ಮಂಡುವಿನಿಂದ ಹಲವು ಭಾಗಗಳಿಗೆ ಬಸ್‌ ಪ್ರಯಾಣ ಆರಂಭಗೊಂಡಿದೆ.

ಇಂದು ಕರ್ಕಿ ಸಂಪುಟ ವಿಸ್ತರಣೆ?:ಶುಕ್ರವಾರ ರಾತ್ರಿ ಮಧ್ಯಂತರ ಪ್ರಧಾನಿ ಆಗಿ ಸುಶೀಲಾ ಕರ್ಕಿ ಪ್ರಮಾಣ ವಚನ ಸ್ವೀಕರಿಸಿದ್ದರು. ಭಾನುವಾರ ಅವರು ಸಂಪುಟ ವಿಸ್ತರಣೆ ಮಾಡುವ ನಿರೀಕ್ಷೆ ಇದೆ.

Read more Articles on