ಸಾರಾಂಶ
ಮುಂಬೈ: ಪಾತಕಿ ಲಾರೆನ್ಸ್ ಬಿಷ್ಣೋಯಿಯಿಂದ ಬೆದರಿಕೆಗೆ ಒಳಗಾಗಿರುವ ನಟ ಸಲ್ಮಾನ್ ಖಾನ್ ಮೊದಲ ಬಾರಿ ಆ ಬಗ್ಗೆ ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ‘ಜೀವನದಲ್ಲಿ ಎದುರಾದ ಸವಾಲನ್ನು ಎದುರಿಸಲೇಬೇಕು. ಎಲ್ಲ ದೇವರ ಇಚ್ಛೆ’ ಎಂದಿದ್ದಾರೆ. ಬಿಗ್‌ಬಾಸ್ ಸ್ಪರ್ಧೆಯ ನಿರೂಪಕರಾಗಿರುವ ಸಲ್ಮಾನ್ ಅವರು ಸ್ಪರ್ಧಾಳುಗಳನ್ನು ಉದ್ದೇಶಿಸಿ ಮಾತನಾಡುವಾಗ ಸ್ಪರ್ಧಿಗಳ ನಡುವಿನ ಜಗಳದ ಬಗ್ಗೆ ಪ್ರಸ್ತಾಪವಾಯಿತು. ಆಗ ಸಲ್ಮಾನ್, ‘ನನಗೆ ಜೀವನದಲ್ಲಿ ಕೆಲವು ಸವಾಲು ಎದುರಾಗಿವೆ. ಅವನ್ನು ಎದುರಿಸಲೇಬೇಕು. ಎಲ್ಲ ದೇವರ ಇಚ್ಛೆ’ ಎಂದರು.
ಕೆಲವು ತಿಂಗಳ ಹಿಂದೆ ಬಿಷ್ಣೋಯಿ ಗ್ಯಾಂಗ್, ಸಲ್ಮಾನ್ ಹತ್ಯೆಗೆ ವಿಫಲ ಯತ್ನ ನಡೆಸಿತ್ತು. ಇತ್ತೀಚೆಗೆ ನಟನ ಆಪ್ತರಾದ ಎನ್‌ಸಿಪಿ ಮುಖಂಡ ಬಾಬಾ ಸಿದ್ದಿಕಿಯನ್ನು ಹತ್ಯೆ ಮಾಡಿತ್ತು.
ಸಲ್ಮಾನ್ ಖಾನ್ ಅವರು ಬಿಷ್ಣೋಯಿ ಸಮುದಾಯದ ಪೂಜ್ಯ ಪ್ರಾಣಿಯಾದ ಕೃಷ್ಣಮೃಗವನ್ನು ಕೆಲವು ವರ್ಷ ಹಿಂದೆ ಸಾಯಿಸಿದ್ದರು. ಹೀಗಾಗಿ ಆ ಸಮುದಾಯದ ಪಾತಕಿ ಲಾರೆನ್ಸ್ ಬಿಷ್ಣೋಯಿ, ಸಲ್ಮಾನ್ ವಿರುದ್ಧ ಹಗೆ ಸಾಧಿಸುತ್ತಿದ್ದಾನೆ.
ಶಾಂತಿ ಮಾತುಕತೆ: ಬಿಷ್ಣೋಯಿಗೆ ಸಲ್ಲು ಮಾಜಿ ಪ್ರೇಯಸಿ ಸೋಮಿ ಅಲಿ ಆಹ್ವಾನ
ಮುಂಬೈ: ನಟ ಸಲ್ಮಾನ್ ಖಾನ್ ಹತ್ಯೆ ಮಾಡುವ ಬೆದರಿಕೆ ಹಾಕಿರುವ ಪಾತಕಿ ಲಾರೆನ್ಸ್ ಬಿಷ್ಣೋಯಿಗೆ ‘ಝೂಮ್ ಕಾಲ್ ಮೂಲಕ ಶಾಂತಿ ಮಾತುಕತೆಗೆ ಬನ್ನಿ’ ಎಂದು ಸಲ್ಲು ಮಾಜಿ ಪ್ರೇಯಸಿ ಹಾಗೂ ನಟಿ ಸೋಮಿ ಅಲಿ ಆಹ್ವಾನ ನೀಡಿದ್ದಾರೆ.ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ಅಲಿ ಶಾಂತಿ ಕಾಯ್ದುಕೊಳ್ಳುವ ಮಾತು ಆಡಿದ್ದಾರೆ. ಆದರೆ ನಂತರ ಆ ಪೋಸ್ಟ್ ಡಿಲೀಟ್ ಮಾಡಿದ್ದಾರೆ.
ಆದರೆ ಈ ಬಗ್ಗೆ ಮಾಧ್ಯಮದ ಜತೆ ಮಾತನಾಡಿದ ಅವರು, ‘ಸಲ್ಮಾನ್‌ಗೆ ಬೆದರಿಕೆ ಬರುತ್ತಿರುವುದು ಕಳವಳಕಾರಿ. ಹೀಗಾಗಿ ಲಾರೆನ್ಸ್‌ಗೆ ಶಾಂತಿ ಕಾಯ್ದುಕೊಳ್ಳುವ ಅಗತ್ಯ ಇದೆ. ದ್ವೇಷ ಬೇಡ ಎಂದು ಮನವಿ ಮಾಡಿದ್ದೆ’ ಎಂದರು.ಬಿಷ್ಣೋಯಿ ಈಗ ಗುಜರಾತ್ ಜೈಲಿನಲ್ಲಿದ್ದಾನೆ. ಆದರೆ ಜೈಲಿನಿಂದಲೇ ಆತ ಅಕ್ರಮವಾಗಿ ಮೊಬೈಲ್ ಬಳಸಿ ತನ್ನ ಚೇಲಾಗಳ ಜತೆ ಮಾತನಾಡುತ್ತಾನೆ ಹಾಗೂ ಪಾತಕ ಚಟುವಟಿಕೆ ಮುಂದುವರಿಸಿದ್ದಾನೆ ಎಂಬ ಶಂಕೆ ಇದೆ.