ಸಾರಾಂಶ
ಶ್ರೀನಗರ: ಭಯೋತ್ಪಾದನೆಗೆ ನಲುಗಿರುವ ಕಾಶ್ಮೀರದಲ್ಲಿ ಬದಲಾವಣೆಯ ಸಂಕೇತ ಎಂಬಂತೆ ಮೊಟ್ಟ ಮೊದಲ ಅಂತಾರಾಷ್ಟ್ರೀಯ ಮ್ಯಾರಥಾನ್ ಓಟ ಭಾನುವಾರ ನಡೆದಿದೆ. 2000 ಜನ ಭಾಗಿಯಾಗಿದ್ದ ಈ ಮ್ಯಾರಥಾನ್‌ನಲ್ಲಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಕೂಡ ಪಾಲ್ಗೊಂಡು 2 ತಾಸಿನಲ್ಲಿ 21 ಕಿ.ಮೀ ಓಡಿ ಗಮನ ಸೆಳೆದಿದ್ದಾರೆ.
ಶ್ರೀನಗರದ ಪೋಲೋ ಸ್ಟೇಡಿಯಂನಲ್ಲಿ ಕಾಶ್ಮೀರದ ಮೊದಲ ಅಂತಾರಾಷ್ಟ್ರೀಯ ಮ್ಯಾರಥಾನ್ ನಡೆಯಿತು. 59 ವಿದೇಶಿ ಅಥ್ಲೀಟ್‌ಗಳು ಸೇರಿ ಸುಮಾರು 2000 ಜನರು ಭಾಗಿಯಾಗಿದ್ದರು. ಸಿಎಂ ಒಮರ್ ಅಬ್ದುಲ್ಲಾ ಅಲ್ಲದೆ, ಬಾಲಿವುಡ್ ನಟ ಸುನೀಲ್ ಶೆಟ್ಟಿ ಕೂಡ ಭಾಗಿಯಾಗಿದ್ದರು.
ಅಥ್ಲೀಟ್ಸ್ ಜೊತೆಗೆ ಮ್ಯಾರಥಾನ್ ಓಟದಲ್ಲಿ ಭಾಗಿಯಾಗಿದ್ದ ಒಮರ್ ಅಬ್ದುಲ್ಲಾ, 2 ಗಂಟೆಯಲ್ಲಿ 21 ಕಿ.ಮೀ ಓಡಿದರು. ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಈ ಹಿಂದೆ ಒಂದು ಬಾರಿ 13 ಕಿ.ಮೀ ಓಡಿದ್ದೆ. ಅದಕ್ಕಿಂತ ಜಾಸ್ತಿ ಎಂದೂ ಓಡಿರಲಿಲ್ಲ. ಆದರೆ ಇಂದು ಮ್ಯಾರಥಾನ್‌ನಲ್ಲಿ ಪ್ರತಿ 5 ನಿಮಿಷ 54 ಸೆಕೆಂಡ್‌ಗೆ 1 ಕಿ.ಮೀ ಸರಾಸರಿಯಲ್ಲಿ 21 ಕಿಮೀ ಓಡಿದ್ದೇನೆ. ಇದು ಸಂತಸ ತಂದಿದೆ’ ಎಂದಿದ್ದಾರೆ.