ಜಮ್ಮು- ಕಾಶ್ಮೀರ ಸಿಎಂ ಆಗಿ ಒಮರ್‌ ಆಯ್ಕೆ ಸಾಧ್ಯತೆ - ಕಾಂಗ್ರೆಸ್‌ - ಎನ್‌ಸಿ ಮೈತ್ರಿಕೂಟ ಸಭೆ

| Published : Oct 10 2024, 06:26 AM IST

Omar Abdullah

ಸಾರಾಂಶ

ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಸರಳ ಬಹುಮತ ಪಡೆದಿರುವ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಮತ್ತು ಕಾಂಗ್ರೆಸ್ ಮೈತ್ರಿಕೂಟವು ಗುರುವಾರ ಸಭೆ ಸೇರಿ ಮೈತ್ರಿಕೂಟದ ನಾಯಕನನ್ನು ಆಯ್ಕೆ ಮಾಡಲಿದೆ.

ಶ್ರೀನಗರ: ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಸರಳ ಬಹುಮತ ಪಡೆದಿರುವ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಮತ್ತು ಕಾಂಗ್ರೆಸ್ ಮೈತ್ರಿಕೂಟವು ಗುರುವಾರ ಸಭೆ ಸೇರಿ ಮೈತ್ರಿಕೂಟದ ನಾಯಕನನ್ನು ಆಯ್ಕೆ ಮಾಡಲಿದೆ. ಎನ್‌ಸಿ ನಾಯಕ ಒಮರ್‌ ಅಬ್ದುಲ್ಲಾ ಅವರೇ ಮುಖ್ಯಮಂತ್ರಿ ಆಗುವುದು ಖಚಿತವಾಗಿದ್ದು, ಸಭೆ ಕೇವಲ ಔಪಚಾರಿಕ ಎನ್ನಿಸಲಿದೆ.

ಸಭೆ ಬಳಿಕ, ಲೆಫ್ಟಿನೆಂಟ್ ಗವರ್ನರ್ ಮನೋಜ ಸಿನ್ಹಾ ಅವರನ್ನು ಭೇಟಿ ಮಾಡಿ ಪ್ರಮಾಣ ವಚನ ದಿನಾಂಕ ನಿಗದಿ ಬಗ್ಗೆ ಒಮರ್‌ ಹಾಗೂ ಮೈತ್ರಿಕೂಟದ ನಾಯಕರು ಚರ್ಚೆ ನಡೆಸಲಿದ್ದಾರೆ.

ಈ ನಡುವೆ ಬುಧವಾರ ಮಾತನಾಡಿದ ಒಮರ್‌, ‘ನಮ್ಮ ತಂದೆ ನಾನೇ ಮುಂದಿನ ಸಿಎಂ ಎಂದಿರಬಹುದು. ಆದರೆ ನಾನು ಪಕ್ಷ ಮತ್ತು ಮೈತ್ರಿಯ ಪುಸ್ತಕದ ಕಾರ್ಯವಿಧಾನದ ಪ್ರಕಾರ ನಡೆಯುವೆ. ಮೈತ್ರಿಕೂಟವು ನಾಯಕನನ್ನು ನಿರ್ಧರಿಸುತ್ತದೆ. ಬಳಿಕ ರಾಜ್ಯಪಾಲರನ್ನು ಭೇಟಿ ಮಾಡಿ ಪ್ರಮಾಣ ವಚನ ದಿನಾಂಕ ನಿಗದಿಪಡಿಸಲಾಗುತ್ತದೆ’ ಎಂದರು.

5 ನಾಮಾಂಕಿತ ಶಾಸಕರು ಅನಗತ್ಯ:

ಈ ನಡುವೆ, ರಾಜ್ಯಪಾಲರು 5 ನಾಮನಿರ್ದೇಶಿತ ಶಾಸಕರನ್ನು ನೇಮಿಸಬಹುದು ಎಂಬ ವರದಿಗೆ ಒಮರ್‌ ಪ್ರತಿಕ್ರಿಯಿಸಿ, ‘ನಾವು ಸಂಪೂರ್ಣ ಬಹುಮತ ಹೊಂದಿದ್ದೇವೆ. 5 ಶಾಸಕರ ನೇಮಿಸಿದರೆ ಅವರು ವಿಪಕ್ಷದ ಸಾಲಲ್ಲಿ ಕೂರುತ್ತಾರಷ್ಟೇ. ನಮಗೇನೂ ಆತಂಕವಿಲ್ಲ’ ಎಂದರು.

ಒಬ್ಬ ಪಕ್ಷೇತರನ ಬೆಂಬಲ:

ಈ ನಡುವೆ, ಕಾಶ್ಮೀರದ ಇಂದರ್ವಾಲ್‌ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿರುವ ಪ್ಯಾರೆಲಾಲ್‌ ಶರ್ಮಾ ಅವರು ನ್ಯಾಷನಲ್‌ ಕಾನ್ಫರೆನ್ಸ್‌ (ಎನ್‌ಸಿ)ಗೆ ಸೇರುವ ಸಾಧ್ಯತೆಗಳಿವೆ.