ಸಾರಾಂಶ
ವಾರಾಣಸಿ : ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಸ್ವಜನಪಕ್ಷಪಾತ ಮತ್ತು ಓಲೈಕೆ ರಾಜಕಾರಣದಿಂದ ವಾರಾಣಸಿಯ ಅಭಿವೃದ್ಧಿಯನ್ನು ಕಡೆಗಣಿಸಿದ್ದವು ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ. ಅಲ್ಲದೆ, ವಂಶಪರಂಪರೆ ರಾಜಕೀಯಕ್ಕೆ ಮತ್ತೆ ಆಕ್ಷೇಪಿಸಿರುವ ಅವರು, ರಾಜಕೀಯ ಕುಟುಂಬದ ಹಿನ್ನೆಲೆ ಇರದ ಯುವಕರು ರಾಜಕೀಯ ಸೇರಬೇಕು ಎಂದು ಕರೆ ನೀಡಿದ್ದಾರೆ.
ಭಾನುವಾರ ತಮ್ಮ ಲೋಕಸಭಾ ಕ್ಷೇತ್ರ ವಾರಾಣಸಿಯಲ್ಲಿ 6700 ಕೋಟಿ ರು. ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು,‘10 ವರ್ಷಗಳ ಹಿಂದೆ ಈ ಕ್ಷೇತ್ರದಲ್ಲಿ ಕೋಟ್ಯಂತರ ಹಗರಣಗಳು ಮುಖ್ಯವಾಹಿನಿಯಲ್ಲಿದ್ದವು. ಆದರೆ ಈಗ ಎಲ್ಲಾ ಬದಲಾಗಿದೆ. ಉನ್ನತಿಗಾಗಿ ಹಂಬಲಿಸುತ್ತಿದ್ದ ಕಾಶಿಯನ್ನು ಅಭಿವೃದ್ಧಿಯಿಂದ ದೂರ ಮಾಡಿದ ಮನಸ್ಥಿತಿ ಯಾವುದು?’ ಎಂದು ಪ್ರಶ್ನಿಸಿದರು.
‘ಉತ್ತರ ಪ್ರದೇಶವನ್ನು ಸುದೀರ್ಘ ಅವಧಿಗೆ ಆಳಿದವರು (ಎಸ್‌ಪಿ) ಮತ್ತು ದೆಹಲಿಯಲ್ಲಿ ದಶಕಗಳ ಕಾಲ ಅಧಿಕಾರದಲ್ಲಿದ್ದವರು (ಕಾಂಗ್ರೆಸ್) ಕಾಶಿಯ ಬಗ್ಗೆ ಏಕೆ ಕಾಳಜಿ ವಹಿಸಲಿಲ್ಲ? ಏಕೆಂದರೆ ಅದು ಅವರಲ್ಲಿನ ಸ್ವಜನ ಪಕ್ಷಪಾತ ಮತ್ತು ಓಲೈಕೆ ರಾಜಕಾರಣ. ಸಮಾಜವಾದಿ ಪಕ್ಷವಾಗಲಿ ಅಥವಾ ಕಾಂಗ್ರೆಸ್‌ಗಾಗಲಿ ಅಭಿವೃದ್ಧಿಯು ಪ್ರಾಧಾನ್ಯತೆಯೇ ಆಗಿರಲಿಲ್ಲ, ಮುಂದೆಯೂ ಆಗುವುದಿಲ್ಲ. ಆದರೆ ಬಿಜೆಪಿ ತನ್ನ ‘ಸಬ್ ಕಾ ವಿಕಾಸ್’ ತತ್ವದ ಮೂಲಕ ಅಭಿವೃದ್ಧಿಯನ್ನು ಮಾಡುತ್ತಿದೆ’ ಎಂದರು.
ಶಂಕರ ಕಣ್ಣಿನ ಆಸ್ಪತ್ರೆ ಉದ್ಘಾಟನೆ:
ಇದಕ್ಕೂಮುನ್ನ ಕಂಚಿ ಶಂಕರ ಮಠ ನಿರ್ಮಿಸಿರುವ ಆರ್‌ಜೆ ಶಂಕರ ಕಣ್ಣಿನ ಆಸ್ಪತ್ರೆಯನ್ನು ಉದ್ಘಾಟಿಸಿದರು. ಆರೋಗ್ಯ ಕ್ಷೇತ್ರದ ಕೇಂದ್ರವಾಗಿ ಕಾಶಿ ಹೊರಹೊಮ್ಮುತ್ತಿದೆ ಎಂದು ಹರ್ಷಿಸಿದರು.
ಮೋದಿ ಬಗ್ಗೆ ಕಂಚಿ ಶ್ರೀ ಭಾರಿ ಪ್ರಶಂಸೆ
ವಾರಾಣಸಿ: ಕಂಚಿ ಕಾಮಕೋಟಿ ಪೀಠದ ಶಂಕರಾಚಾರ್ಯ ಶಂಕರ ವಿಜಯೇಂದ್ರ ಸರಸ್ವತಿ ಸ್ವಾಮಿಗಳು ಭಾನುವಾರ ‘ಪ್ರಧಾನಿ ನರೇಂದ್ರ ಮೋದಿಗೆ ದೇವರೇ ಆಶೀರ್ವದಿಸಿದ್ದಾನೆ’ ಎಂದು ಹಾಡಿ ಹೊಗಳಿದ್ದಾರೆ ಹಾಗೂ ‘ಎನ್‌ಡಿಎ’ ಅಂದರೆ ‘ನರೇಂದ್ರ ದಾಮೋದರ್ ದಾಸ್ ಕಾ ಅನುಶಾಸನ’ (ನರೇಂದ್ರ ದಾಮೋದರದಾಸ್ ಅವರ ಆಚರಣೆ/ಶಿಸ್ತು) ಎಂದು ಕೊಂಡಾಡಿದ್ದಾರೆ.
ವಾರಣಾಸಿಯಲ್ಲಿ ತಮ್ಮ ಮಠ ನಿರ್ಮಿಸಿರುವ ಆರ್‌ಜೆ ಶಂಕರ ನೇತ್ರಾಲಯ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.