ಸಾರಾಂಶ
ನವದೆಹಲಿ: ದೆಹಲಿಯ ಹಿಂದಿನ ಅಬಕಾರಿ ನೀತಿ ಹಗರಣದ ತನಿಖೆಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ (ಇ.ಡಿ) ನೀಡಿದ್ದ ಸತತ 6ನೇ ಸಮನ್ಸ್‌ಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೈರಾಗಿದ್ದಾರೆ.
ಹಿಂದಿನ ಸತತ ಐದೂ ಸಮನ್ಸ್‌ಗಳಿಗೂ ಹಾಜರಾಗದ ಹಿನ್ನೆಲೆಯಲ್ಲಿ ಕೇಜ್ರಿವಾಲ್, ತನಿಖೆಗೆ ಸಹಕರಿಸುತ್ತಿಲ್ಲ ಹಾಗೂ ತನಿಖಾ ಸಂಸ್ಥೆಗೆ ಅಗೌರವ ತೋರುತ್ತಿದ್ದಾರೆ ಎಂದು ಆರೋಪಿಸಿ ಇ.ಡಿ. ಕೋರ್ಟ್ ಮೊರೆ ಹೋಗಿತ್ತು.
ಈ ವೇಳೆ ಕೇಜ್ರಿವಾಲ್ ತನಿಖಾ ಸಂಸ್ಥೆಯ ಆದೇಶ ಪಾಲಿಸುತ್ತಿಲ್ಲ ಎಂಬುದರ ಬಗ್ಗೆ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿತ್ತಾದರೂ ಅವರ ಖುದ್ದು ಹಾಜರಿಗೆ ವಿನಾಯಿತಿ ನೀಡಿತ್ತು.
ಈ ನಡುವೆ ಅವರಿಗೆ ಫೆ.19 ರಂದು ವಿಚಾರಣೆಗೆ ಹಾಜರಾಗುವಂತೆ 6ನೇ ಬಾರಿ ಸಮನ್ಸ್ ನೀಡಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಕೇಜ್ರಿವಾಲ್ ‘ನಾವು ಕಾನೂನಿನ ಪ್ರಕಾರವಾಗಿ ಉತ್ತರಿಸುತ್ತೇವೆ.
ಇ.ಡಿಯು ನ್ಯಾಯಾಲಯದ ಮೊರೆ ಹೋಗಿದೆ. ಅದು ನ್ಯಾಯಾಲಯದ ತೀರ್ಪು ಬರುವವರೆಗೂ ನನಗೆ ಮತ್ತೆ ಹೊಸ ಸಮನ್ಸ್ ನೀಡಬಾರದು. ಅಲ್ಲಿವರೆಗೆ ಕಾಯಬೇಕು’ ಎಂದಿದ್ದಾರೆ. ಈ ನಡುವೆ ಕೇಜ್ರಿಗೆ ಇ.ಡಿ 7ನೇ ಬಾರಿ ಸಮನ್ಸ್ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.