ಸಾರಾಂಶ
ತಿರುವನಂತಪುರಂ: ಕೇರಳದ ಮುಖ್ಯ ಕಾರ್ಯದರ್ಶಿ ಶಾರದಾ ಮುರಳೀಧರನ್ ತಾವು ಎದುರಿಸುತ್ತಿರುವ ವರ್ಣ ತಾರತಮ್ಯದ ವಿರುದ್ಧ ಫೇಸ್‌ಬುಕ್‌ನಲ್ಲಿ ಬೇಸರ ಹೊರಹಾಕಿದ್ದಾರೆ. ಇದು ಚರ್ಚೆ ಹುಟ್ಟುಹಾಕಿದೆ.
ಈ ಹಿಂದೆ ಕೇರಳದ ಮುಖ್ಯ ಕಾರ್ಯದರ್ಶಿಯಾಗಿ ಶಾರದಾ ಅವರ ಪತಿ ಡಾ. ವಿ. ವೇಣು ಕರ್ತವ್ಯದಲ್ಲಿದ್ದರು. ಅವರ ನಿವೃತ್ತಿ ಬಳಿಕ ಶಾರದಾ ಅದೇ ಸ್ಥಾನಕ್ಕೆ ನಿಯೋಜನೆಗೊಂಡಿದ್ದಾರೆ. ಇತ್ತೀಚೆಗೆ ವ್ಯಕ್ತಿಯೊಬ್ಬ, ‘ಪತಿ ಬೆಳ್ಳಗೆ, ಪತ್ನಿ ಕಪ್ಪಗೆ’ ಎಂದು ಶಾರದಾ ವರ್ಣದ ಕುರಿತು ಅಪಹಾಸ್ಯ ಮಾಡಿದ್ದ.
ಇದನ್ನು ಉಲ್ಲೇಖಿಸಿ, ತಾವು ಕಪ್ಪಾಗಿರುವುದರಿಂದ ಚಿಕ್ಕಂದಿನಿಂದಲೂ ಅನುಭವಿಸುತ್ತ ಬಂದಿರುವ ಅವಮಾನದ ಕುರಿತು ಅವರು ನೋವು ತೋಡಿಕೊಂಡಿದ್ದಾರೆ.
‘ಕಪ್ಪು ಬಣ್ಣ ಎಲ್ಲವನ್ನೂ ಹೀರಿಕೊಳ್ಳಬಲ್ಲದು. ಕಪ್ಪು ಬಣ್ಣದ ಉಡುಗೆ ಎಲ್ಲೆಡೆಯೂ ಒಪ್ಪುತ್ತದೆ. ಕಪ್ಪು ಮಾನವಕುಲಕ್ಕೆ ತಿಳಿದಿರುವ ಶಕ್ತಿಯ ಪ್ರಬಲ ನಾಡಿ’ ಎಂದು ಬರೆದುಕೊಂಡಿದ್ದಾರೆ. ಅವರ ದಿಟ್ಟ ಪೋಸ್ಟ್‌ಗೆ ಮೆಚ್ಚುಗೆ ವ್ಯಕ್ತವಾಗಿದೆ.
ಅಣ್ಣಾಮಲೈ ಅಧಿಕಾರ ಕಿತ್ತುಕೊಂಡ್ರೆ ಮೈತ್ರಿ : ಅಣ್ಣಾ ಡಿಎಂಕೆ ಷರತ್ತು
ಚೆನ್ನೈ: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜತೆ ಮತ್ತೆ ಮೈತ್ರಿ ಮಾಡಿಕೊಳ್ಳಲು ಚಿಂತಿಸುತ್ತಿರುವ ಅಣ್ಣಾ ಡಿಎಂಕೆ, ಇದಕ್ಕಾಗಿ ಕೇಸರಿ ಪಕ್ಷಕ್ಕೆ ಷರತ್ತು ವಿಧಿಸಿದೆ. ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅಧಿಕಾರಕ್ಕೆ ಕಡಿವಾಣ ಹಾಕಿದರೆ ಹಾಗೂ ಸೀಟುಗಳಲ್ಲಿ ತನಗೇ ಸಿಂಹಪಾಲು ಕೊಟ್ಟರೆ ಮೈತ್ರಿಗೆ ಸಿದ್ಧ ಎಂದಿದೆ.ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ದಿಲ್ಲಿಯಲ್ಲಿ ಭೇಟಿ ಮಾಡಿದ್ದ ಅಣ್ಣಾಡಿಎಂಕೆ ನಾಯಕ ಎಡಪ್ಪಾಡಿ ಪಳನಿಸ್ವಾಮಿ ಈ ಷರತ್ತು ಹಾಕಿದ್ದಾರೆ ಎಂದು ಮೂಲಗಳು ಹೇಳಿವೆ.
ಇದೇ ವೇಳೆ ಮೈತ್ರಿ ವೇಳೆ, ಅಣ್ಣ ಡಿಎಂಕೆಯನ್ನು ಈ ಹಿಂದೆ ತೊರೆದಿದ್ದ ಟಿಟಿವಿ ದಿನಕರನ್, ವಿಕೆ ಶಶಿಕಲಾ ಅಥವಾ ಓ ಪನ್ನೀರ್‌ಸೆಲ್ವಂ ಅವರಂತಹ ವ್ಯಕ್ತಿಗಳನ್ನು ತಾವು ಪರಿಗಣಿಸಲ್ಲ ಎಂದು ಎಡಪ್ಪಾಡಿ ಹೇಳಿದ್ದಾರೆ ಎಂದು ಅವು ಹೇಳಿವೆ.ಈ ಹಿಂದೆ ಅಣ್ನಾಡಿಎಂಕೆ-ಬಿಜೆಪಿ ನಡುವಿನ ಮೈತ್ರಿ ಮುರಿದು ಬೀಳಲು ಅಣ್ಣಾಮಲೈ-ಪಳನಿಸ್ವಾಮಿ ಸಂಘರ್ಷವೇ ಕಾರಣವಾಗಿತ್ತು.
‘ಪೈಜಾಮ ಎಳೆಯುವುದು ರೇಪ್ ಅಲ್ಲ’ ತೀರ್ಪಿಗೆ ತಡೆ
ನವದೆಹಲಿ: ‘ಅಪ್ರಾಪ್ತ ಬಾಲಕಿಯ ಸ್ತನಗಳನ್ನು ಹಿಡಿದುಕೊಳ್ಳುವುದು ಮತ್ತು ಆಕೆಯ ಪೈಜಾಮದ ದಾರವನ್ನು ಎಳೆಯುವುದು ಅತ್ಯಾಚಾರ ಅಪರಾಧದ ಅಡಿ ಬರುವುದಿಲ್ಲ’ ಎಂಬ ಅಲಹಾಬಾದ್ ಹೈಕೋರ್ಟ್‌ನ ವಿವಾದಿತ ತೀರ್ಪಿಗೆ ಸುಪ್ರೀಂ ಕೋರ್ಟ್ ಬುಧವಾರ ತಡೆ ನೀಡಿದೆ.
ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಹಾಗೂ ಆಗಸ್ಟಿನ್ ಜಾರ್ಜ್ ಮಸೀಹ್ ನೇತೃತ್ವದ ಪೀಠವು ಈ ಸಂಬಂಧ ಪ್ರತಿಕ್ರಿಯಿಸಿದ್ದು, ‘ಅಲಹಾಬಾದ್ ಹೈಕೋರ್ಟ್‌ನ ಅವಲೋಕನಗಳು ಸಂಪೂರ್ಣ ಸಂವೇದನಾರಹಿತ ಮತ್ತು ಅಮಾನವೀಯ ವಿಧಾನವನ್ನು ಚಿತ್ರಿಸಿವೆ’ ಎಂದು ಬೇಸರ ಹೊರಹಾಕಿದೆ.ಅಲ್ಲದೆ, ಹೈಕೋರ್ಟ್‌ನ ಆದೇಶದ ಬಗ್ಗೆ ಸ್ವಯಂಪ್ರೇರಣೆಯಿಂದ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ, ಉತ್ತರ ಪ್ರದೇಶ ಸರ್ಕಾರ ಮತ್ತು ಇತರ ಸಂಬಂಧಪಟ್ಟವರಿಗೆ ನೋಟಿಸ್ ಜಾರಿ ಮಾಡಿದೆ.
ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ಕಾನೂನು ತಜ್ಞರು ಸೇರಿದಂತೆ ಹಲವರು ಆಕ್ರೋಶ ಹೊರಹಾಕಿದ್ದರು. ‘ವಿ ದಿ ವುಮೆನ್ ಆಫ್ ಇಂಡಿಯಾ’ ಎಂಬ ಸಂಘಟನೆ ತೀರ್ಪನ್ನು ಸುಪ್ರೀಂ ಕೋರ್ಟ್ ಗಮನಕ್ಕೆ ತಂದ ಬಳಿಕ ಈ ಬೆಳವಣಿಗೆ ನಡೆದಿದೆ.
ದೇಶಾದ್ಯಂತ ಯುಪಿಐ ಸೇವೆ ಡೌನ್: ಜನರ ಪರದಾಟ
ನವದೆಹಲಿ: ಭಾರತದಾದ್ಯಂತ ಯುಪಿಐ ಬಳಕೆದಾರರು ಬುಧವಾರ ಸಂಜೆಯಿಂದ ರಾತ್ರಿವರೆಗೆ ವಹಿವಾಟುಗಳಲ್ಲಿ ಅನಿರೀಕ್ಷಿತ ತಾಂತ್ರಿಕ ಸಮಸ್ಯೆಗಳನ್ನು ಎದುರಿಸಿ ಪರದಾಡಿದ ಪ್ರಸಂಗ ನಡೆದಿದೆ.ಗೂಗಲ್ ಪೇ, ಫೋನ್ ಪೇ, ಭೀಮ್ ಯುಪಿಐ ಮೊದಲಾದ ಜನಪ್ರಿಯ ಅಪ್ಲಿಕೇಶನ್‌ಗಳಲ್ಲಿ ಪಾವತಿ ಮಾಡಲು ಪ್ರಯತ್ನಿಸುವಾಗ ಹಣದ ವಹಿವಾಟುಗಳು ನಡೆಯುತ್ತಿಲ್ಲ. ಬಹುತೇಕ ಬ್ಯಾಂಕ್‌ಗಳ ನೆಟ್‌ವರ್ಕ್ ಡೌನ್ ಎಂಬ ಸಂದೇಶ ಬರುತ್ತಿತ್ತು ಮತ್ತು ಪಾವತಿ ಫೇಲ್ ಆಗಿತ್ತಿತ್ತು ಎಂದು ದೂರಿದ್ದಾರೆ.
ಟ್ರ್ಯಾಕಿಂಗ್ ವೆಬ್‌ಸೈಟ್ ಡೌನ್‌ಡೆಕ್ಟರ್‌ನ ದತ್ತಾಂಶವು ಸಂಜೆ 6 ಗಂಟೆಯಿಂದ ಯುಪಿಐ ಪಾವತಿಗಳ ಕುರಿತು 3,000 ಕ್ಕೂ ಹೆಚ್ಚು ದೂರುಗಳನ್ನು ತೋರಿಸಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲೂ ಜನರು ಆಕ್ರೋಶ ಹೊರಹಾಕಿದ್ದಾರೆ.

;Resize=(128,128))
;Resize=(128,128))
;Resize=(128,128))