ಸಾರಾಂಶ
ನವದೆಹಲಿ: ಇದುವರೆಗೂ ತೆರಿಗೆದಾರನಿಗೆ ಸೇರಿದ ಎಲೆಕ್ಟ್ರಾನಿಕ್ ಉಪಕರಣಗಳ ಪರಿಶೀಲನೆ ಅಧಿಕಾರ ಹೊಂದಿದ್ದ ಆದಾಯ ತೆರಿಗೆ ಅಧಿಕಾರಿಗಳು ಇನ್ನು ಯಾವುದೇ ತೆರಿಗೆದಾರನ ಇ-ಮೇಲ್, ಟ್ರೇಡಿಂಗ್ ಖಾತೆ ಮತ್ತು ಸಾಮಾಜಿಕ ಜಾಲತಾಣಗಳ ಪ್ರೊಫೈಲ್‌ಗಳನ್ನು ಭೇದಿಸಿ ಪರಿಶೀಲಿಸುವ ಅಧಿಕಾರವನ್ನೂ ಪಡೆಯಲಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೊಳಿಸಲುದ್ದೇಶಿಸಿರುವ ಹೊಸ ಆದಾಯ ತೆರಿಗೆ ಕಾಯ್ದೆಯಲ್ಲಿ ಇಂಥದ್ದೊಂದು ಅಂಶವಿರುವುದು ಬೆಳಕಿಗೆ ಬಂದಿದೆ. ಆದರೆ ನಿರ್ದಿಷ್ಟ ಪ್ರಕರಣಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ನೀಡಿರುವ ಈ ‘ಸೂಪರ್ ಪವರ್’ ದುರ್ಬಳಕೆಗೆ ಕಾರಣವಾಗುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ ಎಂಬ ಕಳವಳ ವ್ಯಕ್ತವಾಗಿದೆ.
ಐಟಿ ರೇಡ್:
ಆರು ದಶಕಗಳಷ್ಟು ಹಳೆಯ ತೆರಿಗೆ ಕಾಯ್ದೆ ಬದಲು ಸರಳವಾದ ಹೊಸ ತೆರಿಗೆ ಕಾನೂನು ಜಾರಿಗೆ ಕೇಂದ್ರ ಸರ್ಕಾರ ಉದ್ದೇಶಿಸಿದೆ. ಈ ಸಂಬಂಧ ನೂತನ ಆದಾಯ ತೆರಿಗೆ ವಿಧೇಯಕ-2025 ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಮಂಡಿಸಿದ್ದಾರೆ. ಸದ್ಯ ಸಂಸತ್ತಿನ ಆಯ್ಕೆ ಸಮಿತಿಯ ಪರಿಶಿಲನೆಗೆ ಒಳಪಟ್ಟಿರುವ ಹೊಸ ಕಾಯ್ದೆಯಲ್ಲಿ ತೆರಿಗೆ ಅಧಿಕಾರಿಗಳಿಗೆ ವರ್ಚುವಲ್ ಡಿಜಿಟಲ್ ಸ್ಪೇಸ್‌ನಲ್ಲೂ ತನಿಖೆಗೆ ಅವಕಾಶ ಮಾಡಿಕೊಡುವ ಅಧಿಕಾರ ನೀಡಲಾಗಿದೆ.
ಹಳೆ ಕಾಯ್ದೆ ಹೇಗಿತ್ತು?:
ಹಾಲಿ ತೆರಿಗೆ ಕಾಯ್ದೆ ಪ್ರಕಾರ ತೆರಿಗೆ ಅಧಿಕಾರಿಗಳು ಲ್ಯಾಪ್‌ಟಾಪ್, ಹಾರ್ಡ್‌ಡ್ರೈವ್, ಇ-ಮೇಲ್‌ಗಳ ಪರಿಶೀಲನೆಗೆ ಅವಕಾಶ ಕೇಳಬಹುದು. ಕಾಯ್ದೆಯಲ್ಲಿ ಎಲ್ಲೂ ಡಿಜಿಟಲ್ ರೆಕಾರ್ಡ್‌ಗಳ ಕುರಿತು ಸ್ಪಷ್ಟ ಉಲ್ಲೇಖವಿಲ್ಲ. ಡಿಜಿಟಲ್ ರೆಕಾರ್ಡ್‌ಗಳ ಪರಿಶೀಲನೆಯ ಬೇಡಿಕೆ ಕಾನೂನು ಸಮಸ್ಯೆಗೂ ದಾರಿ ಮಾಡಿಕೊಡುವ ಅವಕಾಶ ಇತ್ತು.
ಹೊಸ ಕಾಯ್ದೆ ಹೇಗಿದೆ?:
ಆದರೆ ಹೊಸ ತೆರಿಗೆ ಕಾನೂನಲ್ಲಿ ಡಿಜಿಟಲ್ ದಾಖಲೆಗಳ ಪರಿಶೀಲನೆಗೂ ಬೇಡಿಕೆ ಇಡಬಹುದು. ಅವಕಾಶ ಸಿಗದಿದ್ದರೆ ಪಾಸ್‌ವರ್ಡ್, ಸೆಕ್ಯುರಿಟಿ ಸೆಟ್ಟಿಂಗ್ಸ್‌ಗಳನ್ನು ಮುರಿದು ಫೈಲ್‌ಗಳನ್ನು ಪರಿಶೀಲಿಸುವ ಅಧಿಕಾರವೂ ಅಧಿಕಾರಿಗಳಿಗೆ ಇರುತ್ತದೆ.
ಹೊಸ ತೆರಿಗೆ ವಿಧೇಯಕದ 247ನೇ ಕಲಂ ಪ್ರಕಾರ, ತೆರಿಗೆ ಕಳ್ಳತನದ ಅನುಮಾನ ಬಂದರೆ ಇ-ಮೇಲ್‌ಗಳು, ಸಾಮಾಜಿಕ ಜಾಲತಾಣ, ಬ್ಯಾಂಕ್ ಮಾಹಿತಿ, ಹೂಡಿಕೆ ಖಾತೆಗಳನ್ನು ಕೆಲ ಪ್ರಕರಣಗಳಲ್ಲಿ ಪರಿಶೀಲಿಸಬಹುದು. ತೆರಿಗೆದಾರನ ವರ್ಚುವಲ್ ಡಿಜಿಟಲ್ ಸ್ಪೇಸ್‌ನಲ್ಲಿರುವ ದಾಖಲೆಗಳನ್ನು ಬಲವಂತವಾಗಿಯೂ ಪರಿಶೀಲಿಸಲೂ ಇದು ಅವಕಾಶ ಮಾಡಿಕೊಡುತ್ತದೆ.
ಕಳವಳ:
ಆದರೆ ಕಾನೂನು ತಜ್ಞರು ಈ ಕಲಂ ಕುರಿತು ಆತಂಕ ವ್ಯಕ್ತಪಡಿಸಿದ್ದು, ಸರಿಯಾದ ನಿಯಂತ್ರಣ ಇಲ್ಲದಿದ್ದರೆ ಇದು ದುರುಪಯೋಗ ಆಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.