ತೆರಿಗೆ ವ್ಯಾಜ್ಯ ತಗ್ಗಿಸಲು ಹೊಸ ಆದಾಯ ಮಸೂದೆ - ಕಾನೂನಿನಲ್ಲಿ ಸರಳತೆ, ಸ್ಪಷ್ಟತೆ ಹಾಗೂ ಪಾರದರ್ಶಕತೆ

| N/A | Published : Feb 15 2025, 10:42 AM IST

income tax investigation

ಸಾರಾಂಶ

ಆರೂವರೆ ದಶಕಗಳಷ್ಟು ಹಳೆಯದಾದ ಆದಾಯ ತೆರಿಗೆ ಕಾಯ್ದೆ-1961ರ ಬದಲಿಗೆ ಆದಾಯ ತೆರಿಗೆ ಕಾನೂನಿಗೆ ಸರಳತೆ, ಸ್ಪಷ್ಟತೆ ಹಾಗೂ ಪಾರದರ್ಶಕತೆ ತರುವುದರ ಜತೆಗೆ ಜನಸಾಮಾನ್ಯರಿಗೂ ಅರ್ಥವಾಗುವಂತೆ ಸರಳ ಭಾಷೆಯಲ್ಲಿ ಒದಗಿಸಲು ಕೇಂದ್ರ ಸರ್ಕಾರವು ‘ಆದಾಯ ತೆರಿಗೆ ಮಸೂದೆ-2025’ ಮಂಡಿಸಿದೆ.

  ಬೆಂಗಳೂರು : ಆರೂವರೆ ದಶಕಗಳಷ್ಟು ಹಳೆಯದಾದ ಆದಾಯ ತೆರಿಗೆ ಕಾಯ್ದೆ-1961ರ ಬದಲಿಗೆ ಆದಾಯ ತೆರಿಗೆ ಕಾನೂನಿಗೆ ಸರಳತೆ, ಸ್ಪಷ್ಟತೆ ಹಾಗೂ ಪಾರದರ್ಶಕತೆ ತರುವುದರ ಜತೆಗೆ ಜನಸಾಮಾನ್ಯರಿಗೂ ಅರ್ಥವಾಗುವಂತೆ ಸರಳ ಭಾಷೆಯಲ್ಲಿ ಒದಗಿಸಲು ಕೇಂದ್ರ ಸರ್ಕಾರವು ‘ಆದಾಯ ತೆರಿಗೆ ಮಸೂದೆ-2025’ ಮಂಡಿಸಿದೆ.

ಚಾಲ್ತಿಯಲ್ಲಿದ್ದ ಕಾಯ್ದೆಯಲ್ಲಿನ ಅನಗತ್ಯ ನಿಬಂಧನೆ, ವ್ಯಾಖ್ಯಾನಗಳನ್ನು ತೆಗೆದು ಸರಳ ಭಾಷೆಯಲ್ಲಿ ಮಸೂದೆ ರೂಪಿಸಿದ್ದು, ಕಾನೂನುಗಳ ಅನಗತ್ಯ ವ್ಯಾಖ್ಯಾನದಿಂದ ಉಂಟಾಗುತ್ತಿದ್ದ ವ್ಯಾಜ್ಯಗಳ ಸಂಖ್ಯೆ ನಿವಾರಿಸುವುದೇ ಇದರ ಮೂಲ ಉದ್ದೇಶ ಎಂದು ಆದಾಯ ತೆರಿಗೆ ಇಲಾಖೆಯ ಮೂಲಗಳು ತಿಳಿಸಿವೆ.

ಟಿಡಿಎಸ್‌ ಹಾಗೂ ಟಿಸಿಎಸ್‌ ಸರಳೀಕರಣ, ಸರ್ಕಾರೇತರ ಸಂಸ್ಥೆಗಳ (ಎನ್‌ಜಿಒ) ತೆರಿಗೆ ಅಧ್ಯಾಯ ಸರಳೀಕರಣ ಮಾಡಲಾಗಿದೆ. ಒಟ್ಟು 150 ಅಧಿಕಾರಿಗಳ ತಂಡ ಬರೋಬ್ಬರಿ 60,000 ಗಂಟೆಗಳ ಅವಧಿಯ ಶ್ರಮ ಹಾಕಿ ಸರಳ ಭಾಷೆಯಲ್ಲಿ ಮಸೂದೆ ಮಾಡಲಾಗಿದೆ. ಇದರಲ್ಲಿ ಮುಖ್ಯ ಅಂಶವೆಂದರೆ ‘ಮೌಲ್ಯಮಾಪನ ವರ್ಷ’ (ಅಸೆಸ್ಮೆಂಟ್‌ ಇಯರ್) ಹಾಗೂ ‘ಹಿಂದಿನ ವರ್ಷ’ (ಪ್ರೀವಿಯಸ್‌ ಇಯರ್) ಬದಲಿಗೆ ‘ತೆರಿಗೆ ವರ್ಷ’ (ಟ್ಯಾಕ್ಸ್‌ ಇಯರ್) ಪದ ಪರಿಚಯಿಸಲಾಗಿದೆ.

ಹೊಸ ತೆರಿಗೆ ನೀತಿ, ತೆರಿಗೆ ದರ ಪ್ರಸ್ತಾಪವಿಲ್ಲ:

ಹೊಸ ಆದಾಯ ತೆರಿಗೆ ಮಸೂದೆಯಲ್ಲಿ ಪ್ರಮುಖ ತೆರಿಗೆ ನೀತಿ ಬದಲಾವಣೆಯಿಲ್ಲ. ಯಾವುದೇ ತೆರಿಗೆ ದರಗಳ ಮಾರ್ಪಾಡುಗಳೂ ಇಲ್ಲ. ಆದರೆ, ಕಾನೂನುಗಳಲ್ಲಿ ಸ್ಪಷ್ಟತೆ ತರಲು ಭಾಷಾ ಸರಳೀಕರಣ ಹಾಗೂ ರಚನಾತ್ಮಕ ಬದಲಾವಣೆ ಮಾಡಲಾಗಿದೆ.

ಹೆಚ್ಚುವರಿ ವ್ಯಾಖ್ಯಾನ ತಪ್ಪಿಸಿ ಸ್ಪಷ್ಟತೆ ನೀಡುವುದರಿಂದ ಅನಗತ್ಯವಾಗಿ ಬರುತ್ತಿದ್ದ ವ್ಯಾಜ್ಯಗಳನ್ನು ತಪ್ಪಿಸಬಹುದು. ಅನಗತ್ಯ ಗೊಂದಲ ನಿವಾರಿಸಿ ಸ್ಪಷ್ಟತೆ ಹಾಗೂ ಪಾರದರ್ಶಕತೆ ತರುವುದು. ಇದರಿಂದ ಆದಾಯ ತೆರಿಗೆ ನಿಯಮಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವುದು ನೂತನ ಮಸೂದೆಯ ಉದ್ದೇಶ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

ಹಾಲಿ ಆದಾಯ ತೆರಿಗೆ ಕಾಯ್ದೆಯನ್ನು 1961ರಲ್ಲಿ ಮಾಡಿದ್ದು, 1962ರ ಏ.1ರಿಂದ ಇದು ಅನುಷ್ಠಾನದಲ್ಲಿದೆ. ಬಳಿಕ 65 ಪ್ರಮುಖ ತಿದ್ದುಪಡಿ ಹಾಗೂ 4,000 ಇತರ ತಿದ್ದುಪಡಿಗಳನ್ನು ಮಾಡಲಾಗಿದೆ. ಸಾಂಪ್ರದಾಯಿಕ ಕರಡು ರಚನೆ, ಭಾಷೆಯಲ್ಲಿನ ಸಂಕೀರ್ಣತೆ, ಕಾನೂನು ಪರಿಭಾಷೆ, ಸ್ಪಷ್ಟನೆಗಳು, ತೆರಿಗೆಯ ಆದ್ಯತೆಗಳ ಬದಲಾವಣೆ, ಬಳಕೆಯಿಲ್ಲದ ಹಲವು ನಿಬಂಧನಗಳಿಂದಾಗಿ ಗಾತ್ರ ತುಂಬಾ ಹಿಗ್ಗಿತ್ತು. ಹೀಗಾಗಿ, ಇದನ್ನು ಸರಳೀಕರಣ ಮಾಡಲು ನೂತನ ಮಸೂದೆ ಮಾಡಲಾಗಿದೆ ಎಂದು ಅಧಿಕಾರಿಗಳು ಸಮರ್ಥನೆ ನೀಡಿದ್ದಾರೆ.

ಯಾವುದು ‘ತೆರಿಗೆ ವರ್ಷ’?:

ನೂತನ ಮಸೂದೆಯಲ್ಲಿ ‘ಹಿಂದಿನ ವರ್ಷ’ ಹಾಗೂ ‘ಮೌಲ್ಯಮಾಪನ ವರ್ಷ’ ಎಂಬ ಪದಗಳ ಬಳಕೆ ಬದಲಿಗೆ ‘ತೆರಿಗೆ ವರ್ಷ’ ಎಂಬ ಪದ ಬಳಕೆಯನ್ನು ಪರಿಚಯಿಸಲಾಗಿದೆ. ಒಂದು ಆರ್ಥಿಕ ವರ್ಷದಲ್ಲಿನ 12 ತಿಂಗಳ ಅವಧಿಯನ್ನು ‘ತೆರಿಗೆ ವರ್ಷ’ ಎಂದು ಪರಿಗಣಿಸಬೇಕು. 1961ರ ಕಾಯಿದೆಯಲ್ಲಿದ್ದ ಹಿಂದಿನ ವರ್ಷ ಎಂಬ ಪದ ಹಾಗೂ ಬಳಕೆಯಲ್ಲಿದ್ದ ಮೌಲ್ಯಮಾಪನ ವರ್ಷ ಪದ ಬಳಕೆಯ ಅವಕಾಶವನ್ನು ಹಿಂಪಡೆಯಲಾಗಿದೆ. ಈ ಎರಡೂ ಪದ ಜನಸಾಮಾನ್ಯರಲ್ಲಿ ಯಾವ ವರ್ಷ ಎಂದು ತಿಳಿಯಲು ಗೊಂದಲ ಉಂಟು ಮಾಡುತ್ತಿತ್ತು.

ಇನ್ನು ಮಸೂದೆಯಲ್ಲಿ ಆರ್ಥಿಕ ವರ್ಷ ಎಂಬ ಪ್ರಸ್ತಾವನೆ ತೆಗೆಯಲಾಗಿದೆ. ತೆರಿಗೆ ವರ್ಷ ಎಂಬುದು ಕೆಲವೊಮ್ಮೆ (ಹೊಸ ಉದ್ಯಮ ಶುರು ಮಾಡಿದಾಗ) ಆರ್ಥಿಕ ವರ್ಷಕ್ಕಿಂತ ಕಡಿಮೆ ಅವಧಿಯೂ ಇರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

20, 976 ಸಲಹೆ ಪಡೆದು ಹೊಸ ಬಿಲ್:

ನೀತಿ, ಭಾಷೆ ಸರಳೀಕರಣ, ಅನಗತ್ಯ ನಿಬಂಧನೆ ತೆಗೆಯುವುದರ ಬಗ್ಗೆ ಒಟ್ಟು 20,976 ಆನ್‌ಲೈನ್‌ ಸಲಹೆಗಳನ್ನು ಪಡೆಯಲಾಗಿದೆ. ಉದ್ಯಮಿಗಳು, ವೃತ್ತಿಪರರು ಹಾಗೂ ಸ್ಥಳೀಯ ಮಟ್ಟದಲ್ಲಿ ಜನಾಭಿಪ್ರಾಯ ಸಂಗ್ರಹ ಕಾರ್ಯಕ್ರಮಗಳ ಮೂಲಕ ಸಲಹೆ-ಸೂಚನೆ ಪಡೆದು ಮಸೂದೆ ರಚಿಸಲಾಗಿದೆ. 1,200 ನಿಬಂಧನೆ ಹಾಗೂ 900 ಸ್ಪಷ್ಟನೆಗಳನ್ನು ತೆಗೆಯಲಾಗಿದೆ. ವಿಷಯವನ್ನು ಸರಳವಾಗಿ ಅರ್ಥೈಸಲು ಅನುವಾಗುವಂತೆ ಕೋಷ್ಠಕಗಳ ಸಂಖ್ಯೆಯನ್ನು 18ರಿಂದ 57ಕ್ಕೆ ಹೆಚ್ಚಳ ಮಾಡಲಾಗಿದೆ.

ಬದಲಾವಣೆಗಳೇನು?:

ಬದಲಾವಣೆ - 1961 ಐಟಿ ಕಾಯ್ದೆ- ನೂತನ ಮಸೂದೆ

ಅಧ್ಯಾಯ- 47 - 23

ಸೆಕ್ಷನ್‌- 819 - 536

ಪದಗಳು - 5.12 ಲಕ್ಷ - 2.60 ಲಕ್ಷ

ವಿನಾಯಿತಿಗಳ ಕುರಿತ ನಿಬಂಧನೆ- 30,000 ಪದ - 13,500 ಪದ

ಟಿಡಿಎಸ್‌/ಟಿಸಿಎಸ್ - 27,453-14,606

ಎನ್‌ಜಿಒ- 12,800-7600

2.6 ಲಕ್ಷ ಪದಗಳು:

ಆದಾಯ ತೆರಿಗೆ ದಾವೆಗಳ ಸಂಖ್ಯೆ ತಗ್ಗಿಸುವುದೇ ಹೊಸ ಮಸೂದೆಯ ಉದ್ದೇಶವಾಗಿದೆ.

ಹೊಸ ಅರ್ಥ ವಿವರಣೆ ಸಹಿತ ಜನಸಾಮಾನ್ಯರಿಗೆ ತೆರಿಗೆ ಬಗ್ಗೆ ಸರಳವಾಗಿ ವಿವರಿಸಲಾಗಿದೆ. 1961ರ ಆದಾಯ ತೆರಿಗೆ ಕಾಯ್ದೆಯಲ್ಲಿ 5.12 ಲಕ್ಷ ಪದಗಳಿವೆ. ಹೊಸ ಮಸೂದೆಯಲ್ಲಿ ಇವುಗಳನ್ನು 2.6 ಲಕ್ಷಕ್ಕೆ ಇಳಿಸಲಾಗಿದೆ.

ವಿವರಣೆ, ನಿಬಂಧನೆ ಕಡಿತ:

ಹಳೆಯ ಕಾಯ್ದೆಯಲ್ಲಿ ಒಟ್ಟು 47 ಅಧ್ಯಾಯಗಳಿವೆ. ಇವುಗಳನ್ನು 23ಕ್ಕೆ ಇಳಿಸಲಾಗಿದೆ. ಕೋಷ್ಠಕ (ಟೇಬಲ್‌) ಸಂಖ್ಯೆಯನ್ನು 18 ರಿಂದ 57ಕ್ಕೆ ಹೆಚ್ಚಿಸಲಾಗಿದೆ.

1,200 ನಿಬಂಧನೆ ಹಾಗೂ 900 ವಿವರಣೆಗಳನ್ನು ಕೈಬಿಡಲಾಗಿದೆ. ಮಸೂದೆಯಲ್ಲಿ ಗಣನೀಯ ಬದಲಾವಣೆ ಮಾಡಲಾಗಿದೆ.