ಜಾಗತಿಕ ಮಟ್ಟದಲ್ಲಿ ಕರ್ನಾಟಕದ ಸ್ಪರ್ಧೆ - ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಿಂದ ಕ್ಲೀನ್‌ ಮೊಬಿಲಿಟಿ ನೀತಿ ಬಿಡುಗಡೆ : ಡಿಕೆಶಿ

| N/A | Published : Feb 15 2025, 10:37 AM IST

dk shivakumar
ಜಾಗತಿಕ ಮಟ್ಟದಲ್ಲಿ ಕರ್ನಾಟಕದ ಸ್ಪರ್ಧೆ - ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಿಂದ ಕ್ಲೀನ್‌ ಮೊಬಿಲಿಟಿ ನೀತಿ ಬಿಡುಗಡೆ : ಡಿಕೆಶಿ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕವು ನೆರೆಹೊರೆಯ ರಾಜ್ಯಗಳೊಂದಿಗೆ ಸ್ಪರ್ಧಿಸುತ್ತಿಲ್ಲ. ಬದಲಿಗೆ ವಿಶ್ವಮಟ್ಟದಲ್ಲಿ ಸ್ಪರ್ಧೆ ನಡೆಸುತ್ತಿದೆ. ಅದಕ್ಕೆ ಪೂರಕವಾಗಿ ಇನ್ವೆಸ್ಟ್‌ ಕರ್ನಾಟಕ ಯಶಸ್ವಿಯಾಗಿದ್ದು, ರಾಜ್ಯದ ಆರ್ಥಿಕ ಪ್ರಗತಿ ಮತ್ತಷ್ಟು ಹೆಚ್ಚಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು.

 ಬೆಂಗಳೂರು : ಕರ್ನಾಟಕವು ನೆರೆಹೊರೆಯ ರಾಜ್ಯಗಳೊಂದಿಗೆ ಸ್ಪರ್ಧಿಸುತ್ತಿಲ್ಲ. ಬದಲಿಗೆ ವಿಶ್ವಮಟ್ಟದಲ್ಲಿ ಸ್ಪರ್ಧೆ ನಡೆಸುತ್ತಿದೆ. ಅದಕ್ಕೆ ಪೂರಕವಾಗಿ ಇನ್ವೆಸ್ಟ್‌ ಕರ್ನಾಟಕ ಯಶಸ್ವಿಯಾಗಿದ್ದು, ರಾಜ್ಯದ ಆರ್ಥಿಕ ಪ್ರಗತಿ ಮತ್ತಷ್ಟು ಹೆಚ್ಚಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಬೆಂಗಳೂರು ಅರಮನೆಯಲ್ಲಿ ಶುಕ್ರವಾರ ಇನ್ವೆಸ್ಟ್‌ ಕರ್ನಾಟಕದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕರ್ನಾಟಕಕ್ಕೆ ಯಾರೇ ಬಂದರೂ ಅವರನ್ನು ಖಾಲಿ ಕೈಯಲ್ಲಿ ಕಳುಹಿಸುವುದಿಲ್ಲ. ಅದು ಎಲ್ಲ ಕ್ಷೇತ್ರಕ್ಕೂ ಅನ್ವಯಿಸುತ್ತದೆ. ಈಗ ಹೂಡಿಕೆದಾರರು ರಾಜ್ಯಕ್ಕೆ ಬಂದಿದ್ದು ಅವರು ಮಾಡುವ ಹೂಡಿಕೆಗೆ ಸಂಪೂರ್ಣ ಲಾಭ ಕೊಟ್ಟು ಕಳುಹಿಸಲಾಗುತ್ತದೆ. ಇನ್ವೆಸ್ಟ್‌ ಕರ್ನಾಟಕದಲ್ಲಿ ದೇಶ-ವಿದೇಶಗಳಿಂದ ಹೂಡಿಕೆದಾರರು ಆಗಮಿಸಿ, ರಾಜ್ಯದಲ್ಲಿ ಹೂಡಿಕೆಗೆ ಆಸಕ್ತಿ ತೋರಿದ್ದಾರೆ. ಅವರಿಗೆ ಬಿಯಾಂಡ್‌ ಬೆಂಗಳೂರಿನಲ್ಲಿ ಹೂಡಿಕೆಗೆ ಕೋರಿದ್ದೆ. ಅದರಂತೆ ಅವರು ಹೂಡಿಕೆಯನ್ನೂ ಮಾಡಿದ್ದಾರೆ ಎಂದು ಹೇಳಿದರು.

ಕರ್ನಾಟಕ ನಮ್ಮ ನೆರೆಯ ರಾಜ್ಯಗಳೊಂದಿಗೆ ಯಾವತ್ತೂ ಸ್ಪರ್ಧೆ ಮಾಡಿಲ್ಲ. ಬದಲಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾವು ಸ್ಪರ್ಧಿಸುತ್ತಿದ್ದೇವೆ. ಅದಕ್ಕಾಗಿ ದೇಶದಲ್ಲಿ ಮೊದಲ ಬಾರಿಗೆ ಇವಿ ಪಾಲಿಸಿ ಜಾರಿಗೆ ತಂದಿದ್ದು ನಾವು. ಇದೀಗ ಕ್ಲೀನ್‌ ಮೊಬಿಲಿಟಿ ಪಾಲಿಸಿ ಜಾರಿಗೊಳಿಸಿದ್ದೇವೆ. ಹೀಗೆ ಹಲವು ಕ್ಷೇತ್ರಗಳಲ್ಲಿ ಕರ್ನಾಟಕ ಮೊದಲ ಪ್ರಯತ್ನ ಮಾಡಿದ್ದು, ಅದರಲ್ಲಿ ಸಫಲವಾಗಿದೆ. ಇನ್ವೆಸ್ಟ್‌ ಕರ್ನಾಟಕ ಮುಕ್ತಾಯವಾಗುತ್ತಿದೆ ಎಂಬ ಕಾರಣಕ್ಕಾಗಿ ಹೂಡಿಕೆದಾರರು ರಾಜ್ಯದ ಕಡೆ ಬರಬಾರದು ಎಂದೇನಿಲ್ಲ. ವರ್ಷದ 365 ದಿನವೂ ಹೂಡಿಕೆದಾರರಿಗೆ ರಾಜ್ಯದ ಬಾಗಿಲು ತೆರೆದಿರುತ್ತದೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ಮಾತನಾಡಿ, ರಾಜ್ಯದಲ್ಲಿ ಮೂರು ವರ್ಷಗಳ ನಂತರ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆದಿದ್ದು, ಅದು ಯಶಸ್ವಿಯಾಗಿದೆ. 10.27 ಲಕ್ಷ ಕೋಟಿ ರು. ಬಂಡವಾಳ ಹೂಡಿಕೆಯ ಭರವಸೆ ದೊರೆತಿದ್ದು, 6 ಲಕ್ಷ ಉದ್ಯೋಗ ಸೃಷ್ಟಿ ಅಂದಾಜಿಸಲಾಗಿದೆ. ನೂತನ ಕೈಗಾರಿಕಾ ನೀತಿ, ಪರಿಸರ ಸ್ನೇಹಿ ಸಾರಿಗೆ ನೀತಿ, ಎಐ ಆಧರಿತ ಏಕಗವಾಕ್ಷಿ ಪೋರ್ಟಲ್‌, ಎಸ್‌ಎಂಇ ಕನೆಕ್ಟ್ ತಂತ್ರಾಂಶಗಳನ್ನು ಹೂಡಿಕೆದಾರರಿಗೆ ಕೊಡುಗೆಯಾಗಿ ನೀಡಿದ್ದೇವೆ ಎಂದು ವಿವರಿಸಿದರು.

ಕ್ಲೀನ್‌ ಮೊಬಿಲಿಟಿ ನೀತಿ 2025-30 ಬಿಡುಗಡೆ:

ದೇಶದಲ್ಲಿ ಇದೇ ಮೊದಲ ಬಾರಿಗೆ ಕ್ಲೀನ್‌ ಮೊಬಿಲಿಟಿ ನೀತಿಯನ್ನು ಕರ್ನಾಟಕ ರೂಪಿಸಿದ್ದು, ಶುಕ್ರವಾರ ಇನ್ವೆಸ್ಟ್‌ ಕರ್ನಾಟಕ ಸಮಾರೋಪ ಸಮಾರಂಭದಲ್ಲಿ ಇಂಧನ ಸಚಿವ ಕೆ.ಜೆ. ಜಾರ್ಜ್‌ ನೂತನ ನೀತಿಯನ್ನು ಬಿಡುಗಡೆ ಮಾಡಿದರು.

ನೂತನ ನೀತಿಯಂತೆ ಕ್ಲೀನ್‌ ಮೊಬಿಲಿಟಿಗೆ ಸಂಬಂಧಿಸಿದಂತೆ ಮುಂದಿನ 5 ವರ್ಷಗಳಲ್ಲಿ 50 ಸಾವಿರ ಕೋಟಿ ರು. ಹೂಡಿಕೆ ಮತ್ತು 1 ಲಕ್ಷ ಉದ್ಯೋಗ ಸೃಷ್ಟಿಯ ಗುರಿ ಹೊಂದಲಾಗಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯಲ್ಲಿ ಕ್ಲೀನ್‌ ಮೊಬಿಲಿಟಿಯಲ್ಲಿ ಹೂಡಿಕೆಗೆ ಶೇ. 20ರಷ್ಟು ಹಾಗೂ ಇತರ ಭಾಗಗಳಲ್ಲಿ ಹೂಡಿಕೆಗೆ ಶೇ. 25ರಷ್ಟು ಸಬ್ಸಿಡಿ ನೀಡಲಾಗುವುದು.

ರಾಜ್ಯದಲ್ಲಿ ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ 2,600 ಕಡೆ ಎಲೆಕ್ಟ್ರಿಕ್‌ ವಾಹನ ಚಾರ್ಜಿಂಗ್‌ ಕೇಂದ್ರಗಳ ಸ್ಥಾಪನೆ, ಗೌರಿಬಿದನೂರು, ಧಾರವಾಡ ಮತ್ತು ಹಾರೋಹಳ್ಳಿಯಲ್ಲಿ ಜಾಗತಿಕ ಮಟ್ಟದ ಮೊಬಿಲಿಟಿ ಕ್ಲಸ್ಟರ್‌ ಸ್ಥಾಪನೆ, ಜಾಗತಿಕ ಕಂಪನಿಗಳ ಸಹಯೋಗದಲ್ಲಿ ವಿಶ್ವವಿದ್ಯಾಲಯ, ಐಟಿಐ, ಪಾಲಿಟೆಕ್ನಿಕ್‌ಗಳಲ್ಲಿ ಇವಿ- ಕೇಂದ್ರಿತ ತರಬೇತಿ ಕಾರ್ಯಕ್ರಮ ಅನುಷ್ಠಾನಗೊಳಿಸುವ ಅಂಶಗಳನ್ನು ನೂತನ ನೀತಿಯಲ್ಲಿ ಅಳವಡಿಸಲಾಗಿದೆ.

ವೆಂಚುರೈಸ್‌ ಪ್ರಶಸ್ತಿ ಪ್ರದಾನ:

ಇನ್ವೆಸ್ಟ್‌ ಕರ್ನಾಟಕ ಸಮಾರೋಪ ಸಮಾರಂಭದಲ್ಲಿ ನವೋದ್ಯಮ ಸೇರಿದಂತೆ ಇನ್ನಿತರ ಕ್ಷೇತ್ರದಲ್ಲಿ ಉತ್ತಮ ಬೆಳವಣಿಗೆ ತೋರಿದ ಸಂಸ್ಥೆಗಳಿಗೆ ವೆಂಚುರೈಸ್‌ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಪ್ರಶಸ್ತಿಯನ್ನು ಮೂರು ವಿಭಾಗಗಳಲ್ಲಿ ನೀಡಲಾಗಿದ್ದು, ಪ್ರತಿ ವಿಭಾಗದ ಪ್ರಶಸ್ತಿಯು 3 ಲಕ್ಷ ಡಾಲರ್‌ ಮೊತ್ತದಾಗಿದೆ.

ಏರೋಸ್ಪೋಸ್‌ ಮತ್ತು ಡಿಫೆನ್ಸ್‌ ವಿಭಾಗ: ನಾಟಿಕಲ್‌ ವಿಂಗ್ಸ್‌ ಏರೋಸ್ಪೇಸ್‌ (ಪ್ರಥಮ), ಸಿರಿನೋರ್‌ ಟೆಕ್ನಾಲಜೀಸ್‌ ಇಂಡಿಯಾ (ದ್ವಿತೀಯ), ಭದ್ರಿಷ್ಟಿ ಏರೊಸ್ಪೇಸ್‌ (ತೃತೀಯ).

ಎಲೆಕ್ಟ್ರಾನಿಕ್ಸ್ ಸಿಸ್ಟಮ್ಸ್‌ ಡಿಸೈನ್‌ ಆ್ಯಂಡ್‌ ಮ್ಯಾನುಫ್ಯಾಕ್ಷರಿಂಗ್‌ ವಿಭಾಗ: ಜೆಪ್ಕೊ ಟೆಕ್ನಾಲಜೀಸ್‌ (ಪ್ರಥಮ), ಮೆಡ್‌ಬ್ಲ್ಯೂ ಇನ್ನೋವೇಷನ್ಸ್‌ (ದ್ವಿತೀಯ), ವ್ಯೂಹಾ ಮೆಡ್‌ ಡೇಟಾ (ತೃತೀಯ).

ಎಲೆಕ್ಟ್ರಿಕ್‌ ವಾಹನ ಮತ್ತು ಕ್ಲೀನ್‌ ಮೊಬಿಲಿಟಿ: ಇನ್ಫಿನಿಟಿಎಕ್ಸ್‌ ಇನ್ನೋವೇಷನ್ಸ್‌ (ಪ್ರಥಮ), ಲಿ- ಸರ್ಕಲ್‌ (ದ್ವಿತೀಯ), ಇ2ಎಸ್‌ವಿಡಿ (ತೃತೀಯ).