ಸಾರಾಂಶ
ದೇಶದಲ್ಲಿ ವೈದ್ಯ ಪದವಿ ಪ್ರವೇಶಕ್ಕಾಗಿ ನಡೆವ ಪರೀಕ್ಷೆ ‘ನೀಟ್’ ಹಾಗೂ ಪ್ರಾಧ್ಯಾಪಕ ಹುದ್ದೆಯ ಅರ್ಹತಾ ಪರೀಕ್ಷೆ ‘ನೆಟ್’ನಲ್ಲಿ ವ್ಯಾಪಕ ಅಕ್ರಮಗಳು ನಡೆದಿವೆ ಎಂಬ ವಿವಾದ ಭುಗಿಲೆದ್ದಿರುವ ನಡುವೆಯೇ ಕೇಂದ್ರ ಸರ್ಕಾರ ಇದೇ ಮೊದಲ ಬಾರಿ ಅತ್ಯಂತ ಕಠಿಣ ಕ್ರಮ ಕೈಗೊಂಡಿದೆ.
ನವದೆಹಲಿ: ದೇಶದಲ್ಲಿ ವೈದ್ಯ ಪದವಿ ಪ್ರವೇಶಕ್ಕಾಗಿ ನಡೆವ ಪರೀಕ್ಷೆ ‘ನೀಟ್’ ಹಾಗೂ ಪ್ರಾಧ್ಯಾಪಕ ಹುದ್ದೆಯ ಅರ್ಹತಾ ಪರೀಕ್ಷೆ ‘ನೆಟ್’ನಲ್ಲಿ ವ್ಯಾಪಕ ಅಕ್ರಮಗಳು ನಡೆದಿವೆ ಎಂಬ ವಿವಾದ ಭುಗಿಲೆದ್ದಿರುವ ನಡುವೆಯೇ ಕೇಂದ್ರ ಸರ್ಕಾರ ಇದೇ ಮೊದಲ ಬಾರಿ ಅತ್ಯಂತ ಕಠಿಣ ಕ್ರಮ ಕೈಗೊಂಡಿದೆ.
ಈ ಪರೀಕ್ಷೆಗಳನ್ನು ನಡೆಸುವ ಹೊಣೆ ಹೊತ್ತಿರುವ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ (ಎನ್‌ಟಿಎ) ಮುಖ್ಯಸ್ಥ ಸುಬೋಧ್ ಕುಮಾರ್ ಸಿಂಗ್ ಅವರಿಗೆ ಎತ್ತಂಗಡಿ ಶಿಕ್ಷೆ ವಿಧಿಸಿದೆ ಹಾಗೂ ಅವರ ಸ್ಥಾನಕ್ಕೆ ಕರ್ನಾಟಕ ಕೇಡರ್ ನಿವೃತ್ತ ಐಎಎಸ್ ಅಧಿಕಾರಿ ಪ್ರದೀಪ್ ಸಿಂಗ್ ಖರೋಲಾ ಅವರನ್ನು ತಾತ್ಕಾಲಿಕ ಅವಧಿಗೆ ನೇಮಿಸಿದೆ.
ಎನ್‌ಟಿಎ ಮುಖ್ಯಸ್ಥರ ವಜಾಗೆ ಪ್ರತಿಪಕ್ಷಗಳು ಆಗ್ರಹಿಸುತ್ತಲೇ ಇದ್ದವು. ಈ ಆಗ್ರಹಕ್ಕೆ ಸಕಾರ ಕೊನೆಗೂ ಮಣಿದಿದೆ.ಎನ್‌ಟಿಎಯ ಮಹಾನಿರ್ದೇಶಕರಾಗಿದ್ದ ಸುಬೋಧ್ ಕುಮಾರ್ ಸಿಂಗ್ ಅವರನ್ನು ಶನಿವಾರ ರಾತ್ರಿ ಹೊರಡಿಸಿದ ಆದೇಶದಲ್ಲಿ ಸರ್ಕಾರ ವರ್ಗಾವಣೆ ಮಾಡಿದೆ ಹಾಗೂ ಅವರಿಗೆ ಯಾವುದೇ ಹುದ್ದೆಯನ್ನು ತೋರಿಸದೇ ಕಾಯುವಂತೆ ಸೂಚಿಸಿದೆ.
ಇದೇ ವೇಳೆ, ಅವರ ಸ್ಥಾನಕ್ಕೆ ಕರ್ನಾಟಕ ಕೇಡರ್ ನಿವೃತ್ತ ಐಎಎಸ್ ಅಧಿಕಾರಿ ಅಧಿಕಾರಿ ಪ್ರದೀಪ್ ಸಿಂಗ್ ಖರೋಲಾ ಅವರನ್ನು ನೇಮಿಸಿದೆ.ಪ್ರಸ್ತುತ ಖರೋಲಾ ಅವರು ಇಂಡಿಯಾ ಟ್ರೇಡ್ ಪ್ರಮೋಷನ್ ಆರ್ಗನೈಸೇಶನ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಖರೋಲಾ ಅವರಿಗೆ ನಿಯಮಿತ ಪದಾಧಿಕಾರಿಯನ್ನು ನೇಮಿಸುವವರೆಗೆ ಅಥವಾ ಮುಂದಿನ ಆದೇಶದವರೆಗೆ ಎನ್‌ಟಿಎ ಎಂಡಿ ಆಗಿ ಹೆಚ್ಚುವರಿಯಾಗಿ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ.
ಖರೋಲಾ ಅವರು ಕರ್ನಾಟಕದಲ್ಲಿ ಐಎಎಸ್ ಅಧಿಕಾರಿಯಾಗಿದ್ದಾಗ ಬೆಂಗಳೂರು ಮೆಟ್ರೋ ಮುಖ್ಯಸ್ಥರಾಗಿದ್ದರು ಹಾಗೂ ಹಲವಾರು ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ್ದರು. ಬಳಿಕ ಕೇಂದ್ರ ಸೇವೆಗೆ ವರ್ಗಾವಣೆ ಆಗಿ ವಿಮಾನಯಾನ ಇಲಾಖೆಯ ಕಾರ್ಯದರ್ಶಿ ಆಗಿದ್ದರು.