ಪ್ರತಿಪಕ್ಷ ನಾಯಕನಾಗಿ ಖಾದಿ ತೊಟ್ಟು ರಾಹುಲ್‌ ಆಗಮನ

| Published : Jun 27 2024, 01:04 AM IST / Updated: Jun 27 2024, 04:51 AM IST

ಪ್ರತಿಪಕ್ಷ ನಾಯಕನಾಗಿ ಖಾದಿ ತೊಟ್ಟು ರಾಹುಲ್‌ ಆಗಮನ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭೆ ಪ್ರತಿಪಕ್ಷ ನಾಯಕನಾಗಿ ರಾಹುಲ್‌ ಗಾಂಧಿ ಬುಧವಾರ ಪದಾರ್ಪಣೆ ಮಾಡಿದರು. ಮೊದಲ ದಿನವೇ ಅವರು ತಮ್ಮ ನೆಚ್ಚಿನ ಬಳೀ ಟೀಶರ್ಟ್‌ ಹಾಗೂ ಕಪ್ಪು ಪ್ಯಾಂಟ್‌ ಬಿಟ್ಟು, ಖಾದಿ ಧರಿಸಿ ಲೋಕಸಭೆಗೆ ಆಗಮಿಸಿ ಮಿಂಚಿದರು.

ನವದೆಹಲಿ: ಲೋಕಸಭೆ ಪ್ರತಿಪಕ್ಷ ನಾಯಕನಾಗಿ ರಾಹುಲ್‌ ಗಾಂಧಿ ಬುಧವಾರ ಪದಾರ್ಪಣೆ ಮಾಡಿದರು. ಮೊದಲ ದಿನವೇ ಅವರು ತಮ್ಮ ನೆಚ್ಚಿನ ಬಳೀ ಟೀಶರ್ಟ್‌ ಹಾಗೂ ಕಪ್ಪು ಪ್ಯಾಂಟ್‌ ಬಿಟ್ಟು, ಖಾದಿ ಧರಿಸಿ ಲೋಕಸಭೆಗೆ ಆಗಮಿಸಿ ಮಿಂಚಿದರು.ಕಾಂಗ್ರೆಸ್‌ಗೆ ಪ್ರತಿಪಕ್ಷ ಆಗಲು ಬೇಕಾದಷ್ಟು ಸ್ಥಾನ ಸಿಗದ ಕಾರಣ ಲೋಕಸಭೆಗೆ ಕಳೆದ 10 ವರ್ಷ ಪ್ರತಿಪಕ್ಷ ನಾಯಕನೇ ಇರಲಿಲ್ಲ. 

ಆದರೆ ಈ ಸಲ 99 ಸ್ಥಾನ ಸಿಕ್ಕ ಕಾರಣ ಲೋಕಸಭೆಯಲ್ಲಿ ಕಾಂಗ್ರೆಸ್‌ಗೆ ಪ್ರತಿಪಕ್ಷ ಮಾನ್ಯತೆ ಸಿಕ್ಕಿದೆ ಹಾಗೂ ಮಂಗಳವಾರ ವಿಪಕ್ಷ ನಾಯಕನಾಗಿ ರಾಹುಲ್‌ ಆಯ್ಕೆ ಆಗಿದ್ದಾರೆ. ಇದು ರಾಹುಲ್‌ ರಾಜಕೀಯ ಜೀವನದ ಮೊದಲ ಸಾಂವಿಧಾನಿಕ ಹುದ್ದೆ. ಇದರೊಂದಿಗೆ ಸದನದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಹುಲ್‌ ಮಧ್ಯೆ ನೇರಾನೇರ ಸಮರಕ್ಕೆ ವೇದಿಕೆ ಸಜ್ಜಾಗಿದೆ.

ವಿವಿಧ ನೇಮಕಗಳಲ್ಲಿ ರಾಹುಲ್‌ ಪಾತ್ರ ಹಿರಿದು:

ಇದೇ ವೇಳೆ, ರಾಹುಲ್‌ ಅವರು ಚುನಾವಣಾ ಮುಖ್ಯ ಆಯುಕ್ತರ ನೇಮಕ, ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಾಧೀಶರ ನೇಮಕ, ವಿಚಕ್ಷಕ ಆಯೋಗದ ಮುಖ್ಯಸ್ಥರ ನೇಮಕ, ಸಿಬಿಐ ಮುಖ್ಯಸ್ಥರ ನೇಮಕದಂಥ ಸಾಂವಿಧಾನಿಕ ಸಮಿತಿಗಳ ಸದಸ್ಯರೂ ಆಗಿರುತ್ತಾರೆ. ಅನೇಕ ಸದನ ಸಮಿತಿಗಳಲ್ಲೂ ಇವರಿಗೆ ಹೆಚ್ಚಿನ ಅಧಿಕಾರ ಇದೆ. ಹೀಗಾಗಿ ಅವರ ನೇಮಕದಲ್ಲಿ ರಾಹುಲ್‌ ಮಾತು ಪ್ರಮುಖ ಪಾತ್ರ ವಹಿಸಲಿದೆ.

ಸದನದಲ್ಲಿ ಭಾರತ ಜನರ ದನಿ ಆಗುವೆ:

ಈ ನಡುವೆ, ಬುಧವಾರ ತಮ್ಮ ಆಯ್ಕೆಗೆ ಕೃತಜ್ಞತೆ ಸಲ್ಲಿಸಿರುವ ರಾಹುಲ್‌, ‘ನನ್ನನ್ನು ಆಯ್ಕೆ ಮಾಡಿದ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾರ್ಯಕರ್ತರಿಗೆ ಕೃತಜ್ಞತೆ. ಎಲ್ಲರೂ ಸೇರಿ ಎನ್‌ಡಿಎ ಸರ್ಕಾರವನ್ನು ಅದರ ಕಾರ್ಯ ನೋಡಿಕೊಂಡು ಇಕ್ಕಟ್ಟಿಗೆ ಸಿಲುಕಿಸೋಣ. ಸಮಸ್ತ ಭಾರತೀಯರ ಜನರ ಪರ ನಾನು ದನಿ ಎತ್ತುವೆ. ಸಂವಿಧಾನ ರಕ್ಷಿಸುವೆ’ ಎಂದಿದ್ದಾರೆ.