ಸಾರಾಂಶ
ನವದೆಹಲಿ: ಕೋಲ್ಕತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸಂಭವಿಸಿದ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಎಫ್‌ಐಆರ್ ದಾಖಲಿಸಲು ವಿಳಂಬ ಮಾಡಿದ್ದಕ್ಕಾಗಿ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವನ್ನು ಹಾಗೂ ಕಾಲೇಜು ಪ್ರಾಚಾರ್ಯ ಡಾ। ಸಂದೀಪ್ ಘೋಷ್‌ರನ್ನು ಸುಪ್ರೀಂ ಕೋರ್ಟ್ ಮಂಗಳವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಪ್ರಕರಣದ ಸ್ವಯಂಪ್ರೇರಿತ ವಿಚಾರಣೆ ಆರಂಭಿಸಿದ ಮುಖ್ಯ ನ್ಯಾ। ಡಿ.ವೈ. ಚಂದ್ರಚೂಡ ಅವರಿದ್ದ ಪೀಠ, ‘ಕೊಲೆ ನಡೆದಿದ್ದರೂಪ್ರಾಂಶುಪಾಲ ಘೋಷ್ ಇದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿದರು. ಇದು ಸರಿಯೇ? ಅಲ್ಲದೆ, ಎಫ್ಐಆರ್ ದಾಖಲಿಸಲು ಪೊಲೀಸರು ವಿಳಂಬ ಮಾಡಿದರು. ಮೃತದೇಹವನ್ನು ಅಂತ್ಯಸಂಸ್ಕಾರಕ್ಕೆ ನೀಡಿದ 3 ಗಂಟೆಗಳ ಬಳಿಕ ಎಫ್‌ಐಆರ್ ದಾಖಲಿಸಲಾಗಿದೆ. ಇದು ಗಂಭೀರ ವಿಷಯ’ ಎಂದ ಪೀಠ, ಮುಂದಿನ ವಿಚಾರಣೆಯ ದಿನಾಂಕವಾದ ಆ.22ರ ಗುರುವಾರದೊಳಗೆ ಸ್ಥಿತಿಗತಿ ವರದಿ ಸಲ್ಲಿಸುವಂತೆ ಈಗ ತನಿಖೆ ನಡೆಸುತ್ತಿರುವ ಸಿಬಿಐಗೆ ಆದೇಶಿಸಿತು.
ಅಲ್ಲದೆ, ‘ಪ್ರಾಚಾರ್ಯ ಘೋಷ್ ಈ ಘಟನೆಯ ಬಳಿಕ ರಾಜೀನಾಮೆ ನೀಡಿದರು. ಘಟನೆಯಲ್ಲಿ ಅವರ ಪಾತ್ರದ ಬಗ್ಗೆ ಅನುಮಾನ ಇದ್ದರೂ ಕೂಡಲೇ ಅವರನ್ನು ಬೇರೆ ಆಸ್ಪತ್ರೆಯ ಮುಖ್ಯಸ್ಥರನ್ನಾಗಿ ಸರ್ಕಾರ ನೇಮಿಸಿತು. ಇದು ನಾನಾ ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ’ ಎಂದು ಮಮತಾ ಸರ್ಕಾರಕ್ಕೆ ಚಾಟಿ ಬೀಸಿತು.ವಿಧ್ವಂಸಕ ಕೃತ್ಯ ನಡೆದಿದ್ದು ಹೇಗೆ?:
ಇನ್ನು ವೈದ್ಯರ ಪ್ರತಿಭಟನೆ ವೇಳೆ ಸುಮಾರು 7000 ಜನರು ಆರ್‌ಜಿ ಕರ್ ಆಸ್ಪತ್ರೆಗೆ ನುಗ್ಗಿ ದಾಂಧಲೆ ಮಾಡಿದ್ದಕ್ಕೂ ಕಿಡಿಕಾರಿದ ಪೀಠ, ‘ಆಸ್ಪತ್ರೆಗೆ ಭದ್ರತೆ ಇದ್ದರೂ ಇಷ್ಟೊಂದು ಜನರು ನುಗ್ಗಿದ್ದು ಹೇಗೆ? ದಾಳಿ ನಡೆಯಬಹುದು ಎಂಬ ಮುನ್ಸೂಚನೆ ಪೊಲೀಸರಿಗೆ ಇರಲಿಲ್ಲವೆ?’ ಎಂದಿತು ಹಾಗೂ ವಿಧ್ವಂಸಕ ಕೃತ್ಯದ ಬಗ್ಗೆ ಪ್ರತ್ಯೇಕ ಸ್ಥಿತಿ ವರದಿಯನ್ನು ಒದಗಿಸುವಂತೆ ಪ. ಬಂಗಾಳ ಸರ್ಕಾರಕ್ಕೆ ಸೂಚಿಸಿತು.ಅಲ್ಲದೆ, ಪ್ರತಿಭಟನಾನಿರತ ವೈದ್ಯರ ಮೇಲೆ ಬಲಪ್ರಯೋಗ ಮಾಡದಂತೆ ಸರ್ಕಾರಕ್ಕೆ ನಿರ್ದೇಶಿಸಿತು.
ವೈದ್ಯೆಯ ಹೆಸರು ಬಹಿರಂಗಕ್ಕೆ ಕಿಡಿ:ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಮೃತ ವೈದ್ಯೆಯ ಹೆಸರು ಹಾಗೂ ಇತರ ವಿವರ ಬಹಿರಂಗ ಆಗಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಪೀಠ, ಇದು ಸಂತ್ರಸ್ತೆಯ ಗೌರವಕ್ಕೆ ಚ್ಯುತಿ ತರುವ ವಿಷಯ ಎಂದು ಚಾಟಿ ಬೀಸಿತು.
==ನಮ್ಮನ್ನು ನಂಬಿ, ಮುಷ್ಕರ ನಿಲ್ಲಿಸಿ: ವೈದ್ಯರಿಗೆ ಸುಪ್ರೀಂ ಮನವಿಪಿಟಿಐ ನವದೆಹಲಿ
ಕೋಲ್ಕತಾ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಖಂಡಿಸಿ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿರುವ ವೈದ್ಯರಿಗೆ ಮುಷ್ಕರ ಕೈಬಿಟ್ಟು ಕೆಲಸಕ್ಕೆ ಮರಳುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಮನವಿ ಮನವಿ ಮಾಡಿದೆ. ಇದೇ ವೇಳೆ ‘ನಮ್ಮನ್ನು ನಂಬಿ’ ಎಂದು ಪೀಠವು ವೈದ್ಯರಿಗೆ ಕೋರಿದೆ.ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾ। ಡಿ.ವೈ. ಚಂದ್ರಚೂಡ ಅವರ ಪೀಠ, ‘ವೈದ್ಯರು ಕೆಲಸದಿಂದ ದೂರವಿರುವುದು ರೋಗಿಗಳ ಪರಿಣಾಮ ಬೀರುತ್ತದೆ’ ಎಂದು ಹೇಳಿತು.‘ನಿಮ್ಮ ಸುರಕ್ಷತೆ ಮತ್ತು ರಕ್ಷಣೆ ಅತ್ಯುನ್ನತ ರಾಷ್ಟ್ರೀಯ ಕಾಳಜಿಯ ವಿಷಯವಾಗಿದೆ. ಅದನ್ನು ಖಚಿತಪಡಿಸಿಕೊಳ್ಳಲೆಂದೇ ನಾವು ಇಲ್ಲಿ ಇದ್ದೇವೆ. ಅದಕ್ಕಾಗಿಯೇ ನಾವು ವಿಷಯವನ್ನು ಹೈಕೋರ್ಟ್‌ಗೆ ಬಿಡಲಿಲ್ಲ. ನಾವೇ (ಸುಪ್ರೀಂ ಕೋರ್ಟ್) ಈ ವಿಷಯವನ್ನು ಕೈಗೆತ್ತಿಕೊಳ್ಳುವುದು ಅಗತ್ಯವಾಗಿದೆ. ದಯವಿಟ್ಟು ನಮ್ಮನ್ನು ನಂಬಿರಿ. ಕೆಲಸಕ್ಕೆ ಮರಳಿ’ ಎಂದು ಕೋರಿತು.
==ವೈದ್ಯರ ಸುರಕ್ಷತಾ ಕ್ರಮ ಜಾರಿಗೆ ರೇಪ್‌ಗಾಗಿ ಕಾಯಲು ಆಗದು: ಸುಪ್ರೀಂ
ಪಿಟಿಐ ನವದೆಹಲಿಆಸ್ಪತ್ರೆಗಳಲ್ಲಿನ ಸುರಕ್ಷತೆಯ ಕೊರತೆಯ ಬಗ್ಗೆ ಸುಪ್ರೀಂ ಕೋರ್ಟ್ ಮಂಗಳವಾರ ಕಳವಳ ವ್ಯಕ್ತಪಡಿಸಿದೆ ಮತ್ತು ಸುರಕ್ಷತಾ ಕ್ರಮಗಳು ಜಾರಿ ಆಗಲು ಅತ್ಯಾಚಾರ ಅಥವಾ ಹತ್ಯೆಗಾಗಿ ಕಾಯಲು ಸಾಧ್ಯವಿಲ್ಲ ಎಂದು ಹೇಳಿದೆ.ಕೋಲ್ಕತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿನ ವೈದ್ಯೆಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ವಿಚಾರಣೆ ಆರಂಭಿಸಿದ ಮುಖ್ಯ ನ್ಯಾ। ಡಿ.ವೈ. ಚಂದ್ರಚೂಡ ಅವರ ಪೀಠ, ‘ಈ ಘಟನೆಯ ಬಳಿಕ ನಡೆದಿರುವ ಪ್ರತಿಭಟನೆಗಳು ಮತ್ತೆ ಆಸ್ಪತ್ರೆಗಳಲ್ಲಿನ ಸುರಕ್ಷತಾ ವಿಷಯವನ್ನು ಮುನ್ನೆಲೆಗೆ ತಂದಿವೆ. ಆಸ್ಪತ್ರೆಗಳು ಹಗಲಿರುಳು ತೆರೆದಿರುತ್ತವೆ ಮತ್ತು ಅಲ್ಲಿನ ಎಲ್ಲ ವಿಭಾಗಕ್ಕೆ ಅನಿಯಂತ್ರಿತ ಪ್ರವೇಶಾವಕಾಶ ಇರುತ್ತದೆ. ಇದು ವೈದ್ಯರನ್ನು ಹಿಂಸಾಚಾರಕ್ಕೆ ಗುರಿಯಾಗುವಂತೆ ಮಾಡಿದೆ. ಆದರೆ ವೈದ್ಯ ಸಿಬ್ಬಂದಿಯ ಆರೋಗ್ಯ, ಯೋಗಕ್ಷೇಮ ಮತ್ತು ಸುರಕ್ಷತೆಯ ಬಗ್ಗೆ ರಾಜಿ ಸಾಧ್ಯವಿಲ್ಲ. ಸುರಕ್ಷತಾ ಕ್ರಮ ಜರುಗಿಸಲು ರಾಷ್ಟ್ರವು ಅತ್ಯಾಚಾರ ಅಥವಾ ಕೊಲೆಗಾಗಿ ಕಾಯಲು ಸಾಧ್ಯವಿಲ್ಲ’ ಎಂದಿತು.