ಅಯೋಧ್ಯೆ ಸ್ಥಿರಾಸ್ತಿ ಮೌಲ್ಯ 4 ವರ್ಷದಲ್ಲಿ 400% ಏರಿಕೆ!

| Published : Feb 04 2024, 01:33 AM IST / Updated: Feb 04 2024, 08:19 AM IST

Income
ಅಯೋಧ್ಯೆ ಸ್ಥಿರಾಸ್ತಿ ಮೌಲ್ಯ 4 ವರ್ಷದಲ್ಲಿ 400% ಏರಿಕೆ!
Share this Article
  • FB
  • TW
  • Linkdin
  • Email

ಸಾರಾಂಶ

ರಾಮಜನ್ಮಭೂಮಿಯಲ್ಲಿ ರಾಮಮಂದಿರ ಪರ ಸುಪ್ರೀಂ ಕೋರ್ಟ್‌ ತೀರ್ಪು ಬಂದು, ಮಂದಿರ ನಿರ್ಮಾಣ ಕಾಮಗಾರಿ ಪ್ರಾರಂಭ ಆಗುತ್ತಿದ್ದಂತೆಯೇ ಭೂಮಿಗೆ ಚಿನ್ನದ ಬೆಲೆ ಬಂದಿದೆ. ಸ್ಥಿರಾಸ್ತಿ ಮೌಲ್ಯವು 4 ವರ್ಷಗಳ ಅವಧಿಯಲ್ಲಿ ಬರೋಬ್ಬರಿ ನಾಲ್ಕು ಪಟ್ಟು (ಶೇ.400) ಹೆಚ್ಚಳವಾಗಿದೆ.

ಅಯೋಧ್ಯೆ: ರಾಮಜನ್ಮಭೂಮಿಯಲ್ಲಿ ರಾಮಮಂದಿರ ಪರ ಸುಪ್ರೀಂ ಕೋರ್ಟ್‌ ತೀರ್ಪು ಬಂದು, ಮಂದಿರ ನಿರ್ಮಾಣ ಕಾಮಗಾರಿ ಪ್ರಾರಂಭ ಆಗುತ್ತಿದ್ದಂತೆಯೇ ಭೂಮಿಗೆ ಚಿನ್ನದ ಬೆಲೆ ಬಂದಿದೆ. ಸ್ಥಿರಾಸ್ತಿ ಮೌಲ್ಯವು 4 ವರ್ಷಗಳ ಅವಧಿಯಲ್ಲಿ ಬರೋಬ್ಬರಿ ನಾಲ್ಕು ಪಟ್ಟು (ಶೇ.400) ಹೆಚ್ಚಳವಾಗಿದೆ.

2019ರಲ್ಲಿ ರಾಮಜನ್ಮಭೂಮಿ ಕೇಸು ಸುಪ್ರೀಂ ಕೋರ್ಟ್‌ನಲ್ಲಿ ಇತ್ಯರ್ಥವಾಗುವ ಮುನ್ನ ಅಯೋಧ್ಯೆಯಲ್ಲಿನ ನಿವೇಶನ ದರ ಚದರಡಿಗೆ ಕನಿಷ್ಠ 300 ರು.ನಿಂದ 700 ರು. ಇತ್ತು. 

ಆದರೆ ಈಗ ರಾಮಮಂದಿರ ಉದ್ಘಾಟನೆ ಆಗುವುದರೊಂದಿಗೆ ನಿವೇಶನದ ಚದರಡಿ ಮೌಲ್ಯ ಕನಿಷ್ಠ 1500 ರು.ನಿಂದ 3000 ರು.ವರೆಗೆ ಏರಿದೆ. ಹೀಗಾಗಿ ರಿಯಲ್‌ ಎಸ್ಟೇಟ್‌ ದರ ಕೇವಲ 4 ವರ್ಷದಲ್ಲಿ ಸುಮಾರು ಶೇ.400ರಷ್ಟು ಏರಿದಂತಾಗಿದೆ.

ಇನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆಗೂ ಅದಾಯ ಏರತೊಡಗಿದೆ. ಮೂಲತಃ ಕೃಷಿಗೆ ಬಳಕೆಯಾಗುತ್ತಿದ್ದ ಭೂಮಿಗಳನ್ನು ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಖರೀದಿಸಿ ಭಾರೀ ಮೊತ್ತಕ್ಕೆ ಬಿಕರಿ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಯೋಧ್ಯೆಯ ಸುತ್ತಮುತ್ತ ಈಗ ಎಲ್ಲ ಜಾಗಗಳು ವಾಣಿಜ್ಯೀಕರಣಗೊಂಡಿವೆ.

2020-21ನೇ ಅವಧಿಯಲ್ಲಿ 18,329 ಆಸ್ತಿಗಳು ಮಾರಾಟವಾಗಿ ಮುದ್ರಾಂಕ ಶುಲ್ಕವಾಗಿ 115 ಕೋಟಿ ರು. ಆದಾಯ ಹರಿದು ಬಂದಿತ್ತು. ಇದು ಮುಂದಿನ ಸಾಲಿನಲ್ಲಿ (2021-22ರಲ್ಲಿ) ಕೋವಿಡ್ ಸಾಂಕ್ರಾಮಿಕದ ನಡುವೆಯೂ 20,321 ಆಸ್ತಿಗಳು ಮಾರಾಟವಾಗಿ ಮುದ್ರಾಂಕ ಶುಲ್ಕದ ಆದಾಯ 149 ಕೋಟಿ ರು.ಗೆ ಏರಿಕೆಯಾಗಿತ್ತು. 2022-23ರಲ್ಲಿ ಬರೋಬ್ಬರಿ 22,183 ಸ್ಥಿರಾಸ್ತಿಗಳು ಮಾರಾಟವಾಗಿ 138 ಕೋಟಿ ರು. ಮುದ್ರಾಂಕ ಶುಲ್ಕ ಸಂಗ್ರಹವಾಗಿತ್ತು.

ಈಗ ಪ್ರಸಕ್ತ ಸಾಲಿನಲ್ಲಿ (2023-24) ಡಿಸೆಂಬರ್‌ 31ರವರೆಗೆ 18,887 ಸ್ಥಿರಾಸ್ತಿಗಳು ಮಾರಾಟವಾಗಿವೆ ಹಾಗೂ ಕೇವಲ 8 ತಿಂಗಳಲ್ಲಿ 138 ಕೋಟಿ ರು. ಹರಿದುಬಂದಿದೆ. ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಮಾರಾಟವಾಗುವ ಸ್ಥಿರಾಸ್ಥಿ ಸಂಖ್ಯೆ 25 ಸಾವಿರದ ಗಡಿ ಮುಟ್ಟುವ ಸಾಧ್ಯತೆ ಇದೆ. 

ಜೊತೆಗೆ ಮುದ್ರಾಂಕ ಶುಲ್ಕ ಆದಾಯ 195 ಕೋಟಿ ರು.ಗೆ ಏರಬಹುದಾಗಿದೆ. ರಾಮಮಂದಿರ ಉದ್ಘಾಟನೆಯೊಂದಿಗೆ ಪ್ರಸಕ್ತ ಸಾಲೊಂದರಲ್ಲೇ ಆಸ್ತಿಯ ಮೌಲ್ಯ ಶೇ.40ರಷ್ಟು ಹೆಚ್ಚಳವಾಗಿದೆ ಎಂದು ಅಯೋಧ್ಯೆಯ ಸಬ್‌ ರಿಜಿಸ್ಟ್ರಾರ್ ತಿಳಿಸಿದ್ದಾರೆ.