ಸಾರಾಂಶ
ನವದೆಹಲಿ: ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿ ಬಂಧನಕ್ಕೆ ಒಳಗಾದವರು ಜಾಮೀನು ಪಡೆಯಬೇಕಾದರೆ, ಅವರು ಹಾನಿ ಮಾಡಿದ ಆಸ್ತಿಯ ಪೂರ್ಣ ಮೊತ್ತವನ್ನು ಕಟ್ಟಿಕೊಡುವುದನ್ನು ಕಡ್ಡಾಯ ಮಾಡುವ ಕಾಯ್ದೆ ಜಾರಿಗೆ ಕೇಂದ್ರ ಕಾನೂನು ಆಯೋಗ ಒಲವು ತೋರಿದೆ.ಹಾಲಿ ಜಾರಿಯಲ್ಲಿರುವ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ತಡೆ ಕಾಯ್ದೆಗೆ ಕೆಲವೊಂದು ಬದಲಾವಣೆ ತಂದು, ಜಾಮೀನು ಪಡೆಯಲು ಕಠಿಣ ನಿಯಮ ಜಾರಿಗೊಳಿಸುವಂತೆ ಕೇಂದ್ರ ಕಾನೂನು ಆಯೋಗ, ಶೀಘ್ರವೇ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಿದೆ ಎನ್ನಲಾಗಿದೆ.ಕೇಂದ್ರ ಸರ್ಕಾರ ಕೂಡಾ ಕೆಲ ವರ್ಷಗಳ ಹಿಂದೆಯೇ ಇಂತದ್ದೊಂದು ಕಾಯ್ದೆ ಜಾರಿಗೆ ಒಲವು ತೋರಿತ್ತಾದರೂ, ಅದು ಫಲ ಕೊಟ್ಟಿರಲಿಲ್ಲ. ಆದರೆ ಅದಾದ ಬಳಿಕ ವಿವಿಧ ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್ ಮತ್ತು ಕೆಲ ಹೈಕೋರ್ಟ್‌ಗಳು ಇಂಥ ಘಟನೆ ತಡೆಯಲು ಕೆಲವೊಂದು ನಿರ್ದೇಶನಗಳನ್ನು ನೀಡಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಸ್ವತಃ ಕಾನೂನು ಆಯೋಗವೇ ಆಸ್ತಿಗೆ ಹಾನಿ ಮಾಡಿದ ಪ್ರಕರಣದಲ್ಲಿ ಜಾಮೀನು ಪಡೆಯಲು ಆರೋಪಿಗಳು ಪೂರ್ಣ ಪ್ರಮಾಣದ ದಂಡವನ್ನು ಕಟ್ಟಿಕೊಡುವುದನ್ನು ಕಡ್ಡಾಯಗೊಳಿಸುವ ಕಾಯ್ದೆ ಕುರಿತು ಶಿಫಾರಸು ಮಾಡಲು ಮುಂದಾಗಿದೆ. ಒಂದು ವೇಳೆ ಇಂಥ ಕಾಯ್ದೆ ಜಾರಿಯಾದರೆ ಬಳಿಕ ಉಳಿದವರು ಎಚ್ಚೆತ್ತುಕೊಂಡ ಇಂಥ ಘಟನೆಗಳಿಂದ ಹಿಂದೆ ಸರಿಯುತ್ತಾರೆ ಎಂಬುದು ಕಾಯ್ದೆ ಜಾರಿಯ ಹಿಂದಿನ ಉದ್ದೇಶ ಎನ್ನಲಾಗಿದೆ.