ನೀರಾವರಿ ಹೋರಾಟದ ಧ್ವನಿ ನಾರಿಮನ್‌ ವಿಧಿವಶ

| Published : Feb 22 2024, 01:46 AM IST / Updated: Feb 22 2024, 09:13 AM IST

nariman

ಸಾರಾಂಶ

ಕಾವೇರಿ ಹಾಗೂ ಕೃಷ್ಣಾ ಸೇರಿದಂತೆ ಅನೇಕ ಜಲ ವಿವಾದಗಳ ವಿಷಯದಲ್ಲಿ ಕರ್ನಾಟಕದ ಪರ ವಾದ ಮಂಡಿಸಿ ಕನ್ನಡಿಗರ ಮನೆಮಾತಾಗಿದ್ದ ಹಿರಿಯ ವಕೀಲ ಫಾಲಿ ಎಸ್ ನಾರಿಮನ್ (95) ಬುಧವಾರ ಇಲ್ಲಿ ನಿಧನರಾದರು.

ಪಿಟಿಐ ನವದೆಹಲಿ

ಕಾವೇರಿ ಹಾಗೂ ಕೃಷ್ಣಾ ಸೇರಿದಂತೆ ಅನೇಕ ಜಲ ವಿವಾದಗಳ ವಿಷಯದಲ್ಲಿ ಕರ್ನಾಟಕದ ಪರ ವಾದ ಮಂಡಿಸಿ ಕನ್ನಡಿಗರ ಮನೆಮಾತಾಗಿದ್ದ ಹಿರಿಯ ವಕೀಲ ಫಾಲಿ ಎಸ್ ನಾರಿಮನ್ (95) ಬುಧವಾರ ಇಲ್ಲಿ ನಿಧನರಾದರು.

ಭಾರತೀಯ ನ್ಯಾಯಾಂಗದ ‘ಭೀಷ್ಮ ಪಿತಾಮಹ’ ಎಂದೇ ಖ್ಯಾತರಾಗಿದ್ದ ಅವರು ಹೃದಯ ಸಮಸ್ಯೆ ಸೇರಿದಂತೆ ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದರು. 

ಅವರು ಪುತ್ರ ರೋಹಿನ್ಟನ್ ನಾರಿಮನ್ ಸೇರಿ ಅಪಾರ ಬಂಧು ಬಳಗ ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ. ರೋಹಿನ್ಟನ್‌ ನಾರಿಮನ್‌ ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿದ್ದರು.

ನಾರಿಮನ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಭಾರತದ ಮುಖ್ಯ ನ್ಯಾಯಾಧೀಶ ನ್ಯಾ। ಡಿ.ವೈ. ಚಂದ್ರಚೂಡ್‌ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದು, ಸಾಮಾನ್ಯ ನಾಗರಿಕರಿಗೆ ನ್ಯಾಯ ದೊರಕಿಸಿಕೊಡಲು ಅವರು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು ಎಂದು ಹೇಳಿದ್ದಾರೆ.

1950ರಿಂದಲೇ ನ್ಯಾಯಾಂಗ ವೃತ್ತಿ: ಜನವರಿ 10, 1929ರಂದು ಈಗಿನ ಮ್ಯಾನ್ಮಾರ್‌ನ ರಂಗೂನ್‌ನಲ್ಲಿ ಜನಿಸಿದ ನಾರಿಮನ್ ಅವರು ನವೆಂಬರ್ 1950ರಲ್ಲಿ ಬಾಂಬೆ ಹೈಕೋರ್ಟ್‌ ವಕೀಲರಾಗಿ ನೋಂದಾಯಿಸಿಕೊಂಡರು ಮತ್ತು 1961ರಲ್ಲಿ ಹಿರಿಯ ವಕೀಲರಾಗಿ ನೇಮಕಗೊಂಡರು.

1942ರಲ್ಲಿ ಫಾಲಿ 12 ವರ್ಷದವನಿದ್ದಾಗ ಜಪಾನ್‌ ದೇಶವು ಮ್ಯಾನ್ಮಾರ್‌ ಮೇಲೆ ದಾಳಿ ಮಾಡಿತು. ಆಗ ನಾರಿಮನ್ ಕುಟುಂಬವು ಭಾರತಕ್ಕೆ ವಲಸೆ ಬಂತು.

ಅವರು ಆರಂಭದಲ್ಲಿ ಬಾಂಬೆ ಹೈಕೋರ್ಟ್‌ನಲ್ಲಿ ಮತ್ತು 1972ರಿಂದ ಸುಪ್ರೀಂಕೋರ್ಟ್‌ನಲ್ಲಿ 70 ವರ್ಷಗಳಿಗಿಂತ ಹೆಚ್ಚು ಕಾಲ ಕಾನೂನು ವೃತ್ತಿ ಕೈಗೊಂಡರು.

ನಾರಿಮನ್ ಅವರನ್ನು ಮೇ 1972ರಲ್ಲಿ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ನೇಮಿಸಲಾಯಿತು. ಜೂನ್ 26, 1975 ರಂದು ತುರ್ತು ಪರಿಸ್ಥಿತಿ ಹೇರಿದ ಒಂದು ದಿನದ ನಂತರ ಅವರು ಹುದ್ದೆಗೆ ರಾಜೀನಾಮೆ ನೀಡಿದರು.

ಅನೇಕ ಹೆಗ್ಗುರುತುಗಳು: ತಮ್ಮ ಕಾನೂನು ವೃತ್ತಿಜೀವನದಲ್ಲಿ, ನಾರಿಮನ್ ಅವರು ಭೋಪಾಲ್ ಅನಿಲ ದುರಂತ ಪ್ರಕರಣ, ಟಿಎಂಎ ಪೈ ಪ್ರಕರಣ, ಜಯಲಲಿತಾ ಅಕ್ರಮ ಆಸ್ತಿ ಪ್ರಕರಣ ಮತ್ತು ಸುಪ್ರೀಂಕೋರ್ಟ್‌ನಿಂದ ರದ್ದುಗೊಳಿಸಲ್ಪಟ್ಟ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗದ ಪ್ರಕರಣ ಸೇರಿದಂತೆ ಹಲವಾರು ಪ್ರಮುಖ ಪ್ರಕರಣಗಳಲ್ಲಿ ವಾದಿಸಿದ್ದಾರೆ.

ಕರ್ನಾಟಕವು ತಮಿಳುನಾಡಿನ ವಿರುದ್ಧ ಕಾವೇರಿ ವಿವಾದ ಹಾಗೂ ಆಂಧ್ರಪ್ರದೇಶದ ಜತೆ ಕೃಷ್ಣಾ ಜಲವಿವಾದದಲ್ಲಿ ಸಿಲುಕಿದಾಗ ನಾರಿಮನ್‌ ಅವರೇ ರಾಜ್ಯದ ಮುಖ್ಯ ವಕೀಲರಾಗಿ ಪ್ರಖರ ವಾದ ಮಂಡಿಸಿದ್ದರು. ಕರ್ನಾಟಕದ ಯಶದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಅನೇಕ ಪುಸ್ತಕಗಳ ರಚನೆ: ನಾರಿಮನ್‌ ಅವರು ‘ಬಿಫೋರ್ ದಿ ಮೆಮೊರಿ ಫೇಡ್ಸ್’, ‘ದಿ ಸ್ಟೇಟ್ ಆಫ್ ದಿ ನೇಷನ್’, ‘ಭಾರತದ ಕಾನೂನು ವ್ಯವಸ್ಥೆಯನ್ನು ಉಳಿಸಬಹುದೇ?’ (ಇಂಡಿಯನ್‌ ಲೀಗಲ್‌ ಸಿಸ್ಟಂ: ಕ್ಯಾನ್‌ ಇಟ್‌ ಬಿ ಸೇವ್ಡ್‌) ಮತ್ತು ‘ಸುಪ್ರೀಂ ಕೋರ್ಟ್ ಅನ್ನು ದೇವರೇ ಕಾಪಾಡಬೇಕು’ (ಗಾಡ್‌ ಸೇವ್‌ ಆನರೆಬಲ್‌ ಸುಪ್ರೀಂಕೋರ್ಟ್‌) ಸೇರಿದಂತೆ ಪುಸ್ತಕಗಳನ್ನು ಬರೆದಿದ್ದಾರೆ.

ಪದ್ಮ ಪುರಸ್ಕೃತ: ನಾರಿಮನ್ ಅವರಿಗೆ 1991ರ ಜನವರಿಯಲ್ಲಿ ಪದ್ಮಭೂಷಣ ಮತ್ತು 2007ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ನೀಡಲಾಯಿತು. 1999ರಲ್ಲಿ ಅವರನ್ನು ರಾಜ್ಯಸಭೆಯ ಸದಸ್ಯರಾಗಿ ನಾಮನಿರ್ದೇಶನ ಮಾಡಲಾಗಿತ್ತು.

ಅತ್ಯುತ್ತಮ ಕಾನೂನು ಪಂಡಿತ, ಬುದ್ಧಿಜೀವಿ: ಫಾಲಿ ನಾರಿಮನ್‌ ಭಾರತ ಕಂಡ ಅತ್ಯುತ್ತಮ ಕಾನೂನು ತಜ್ಞ ಮತ್ತು ಬುದ್ಧಿಜೀವಿ. ಸಾಮಾನ್ಯ ನಾಗರಿಕರಿಗೆ ನ್ಯಾಯ ದೊರಕಿಸಿಕೊಡಲು ಅವರು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಅವರ ನಿಧನದಿಂದ ನನಗೆ ನೋವಾಗಿದೆ
 - ನರೇಂದ್ರ ಮೋದಿ ಪ್ರಧಾನ ಮಂತ್ರಿ