ಹಿರಿಯರ ಜೀವನವು ಕಿರಿಯರಿಗೆ ಮಾರ್ಗದರ್ಶನವಾಗಿರಬೇಕು ಹಾಗೂ ಹಿರಿಯರು ಕಿರಿಯರಿಗೆ ದಾರಿ ದೀಪವಾಗಬೇಕು. ಆಗಲೇ ನಮ್ಮ ಸಮಾಜ ಸ್ವಾಸ್ಥ್ಯ ಸಮಾಜವಾಗಲು ಸಾಧ್ಯ ಎಂದು ಜಿಲ್ಲಾಧಿಕಾರಿ ಜಿ.ಪ್ರಭು ಅಭಿಪ್ರಾಯ ಪಟ್ಟರು.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಹಿರಿಯರ ಜೀವನವು ಕಿರಿಯರಿಗೆ ಮಾರ್ಗದರ್ಶನವಾಗಿರಬೇಕು ಹಾಗೂ ಹಿರಿಯರು ಕಿರಿಯರಿಗೆ ದಾರಿ ದೀಪವಾಗಬೇಕು. ಆಗಲೇ ನಮ್ಮ ಸಮಾಜ ಸ್ವಾಸ್ಥ್ಯ ಸಮಾಜವಾಗಲು ಸಾಧ್ಯ ಎಂದು ಜಿಲ್ಲಾಧಿಕಾರಿ ಜಿ.ಪ್ರಭು ಅಭಿಪ್ರಾಯ ಪಟ್ಟರು.ನಗರದ ಸರ್ ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಕ್ರೀಡೆ ಇಲಾಖೆ ಆಶ್ರಯದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಹಿರಿಯ ನಾಗರಿಕರ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿ, ವೃದ್ಧರು ನಿರುಪಯುಕ್ತರಲ್ಲ, ನಮ್ಮ ಅಮೂಲ್ಯ ಆಸ್ತಿ. ವಿಶ್ವ ಹಿರಿಯ ನಾಗರಿಕರ ದಿನವಾಗಿ ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ. ಹಿರಿಯ ನಾಗರಿಕರು ಒಂದು ತಲೆಮಾರಿನ ಹಿಂದಿನವರೆಗೂ ನಮ್ಮ ಕುಟುಂಬಗಳ ಮತ್ತು ದೇಶದ ಆರ್ಥಿಕ ಬೆಳವಣಿಗೆಗೆ ನೊಗ ಹೊತ್ತವರು. ದುಡಿಯುವ ಶಕ್ತಿ ಕುಂಠಿತಗೊಂಡರೂ ಅವರು ಯಾವತ್ತಿದ್ದರೂ ದೇಶದ ಆಸ್ತಿ. ಅವರಿಗಾಗಿ ಒಂದು ದಿನವನ್ನು ಮುಡಿಪಾಗಿಟ್ಟು ಆಚರಿಸುವುದು ಹೊಸ ತಲೆಮಾರಿನವರ ಭಾಗ್ಯ ಮತ್ತು ಕರ್ತವ್ಯವಾಗಿದೆ ಎಂದು ಹೇಳಿದರು.ಇಂದಿನ ವೇಗದ ಜೀವನ ಅಥವಾ ಹಾಗೆ ವೇಗವಾಗಿ ಸಾಗುತ್ತಿದ್ದೇವೆಂಬ ಭ್ರಮೆಯಲ್ಲಿ ನಡೆಯುತ್ತಿರುವ ಈ ಲೋಕದಲ್ಲಿ ಮುಮ್ಮಲ ಮರುತ್ತಿರುವುದು ಹೆಚ್ಚಾಗಿ ಹಿರಿಯ ಜೀವಗಳೇ. ಯುವಜನರು ಸಂಪಾದನೆಯ ಬೇಟೆಗೆ ಬಿದ್ದು ಊರು ತೊರೆದು ಹೋಗುವ ಅಥವಾ ಸಂಗಾತಿಯ ಮಾತಿಗೆ ಕಟ್ಟುಬಿದ್ದು ಕುಟುಂಬ ತೊರದು ಹೋಗುವ ಪ್ರವೃತ್ತಿ, ಪರಿಸ್ಥಿತಿ, ಅಥವಾ ವೃದ್ದರನ್ನು ಅನಾಥಾಶ್ರಮಗಳಿಗೆ ಸೇರಿಸುವುದು ಹೆಚ್ಚುತ್ತಿದೆ. ಇದರಿಂದ ಬಾಧಿತವಾಗಿರುವ ವೃದ್ಧರ ಗೋಳನ್ನು ವಿವರಿಸುವುದು ಕಷ್ಟಸಾಧ್ಯ. ನಮ್ಮ ಬದುಕಿಗೆ ದಾರಿ ಮಾಡಿಕೊಟ್ಟ ಹಿರಿಯ ನಾಗರಿಕರ ಕೊನೆಗಾಲದ ಬದುಕನ್ನು ಹಸನುಗೊಳಿಸುವುದು ಪ್ರತಿಯೊಬ್ಬ ಯುವಜನರ ಕರ್ತವ್ಯ ಎಂದು ಹೇಳಿದರು.ನಮ್ಮ ಸರ್ಕಾರಗಳು ವೃದ್ಧರಿಗೆಂದು ಹಲವು ಸೌಲಭ್ಯಗಳನ್ನು ಒದಗಿಸುತ್ತವೆ. ಅನೇಕ ಹಿರಿಯ ನಾಗರಿಕರಿಗೆ ಈ ಯೋಜನೆಗಳು ಬೇರೆ ಬೇರೆ ಕಾರಣಕ್ಕೆ ತಲುಪದೇ ಹೋಗಿರಬಹುದು. ನಿಮಗೆ ಇಂಥ ಪ್ರಕರಣಗಳು ಗಮನಕ್ಕೆ ಬಂದರೆ ಅವರಿಗೆ ನೆರವಾಗುವ ಪ್ರಯತ್ನ ಮಾಡಿ. ಹಿರಿಯ ನಾಗರಿಕರ ಕಾರ್ಡ್ ಮಾಡಿಸಿಕೊಡುವುದು, ಪಿಂಚಣಿ ಮಾಡಿಸಿಕೊಡುವುದು ಇತ್ಯಾದಿ ಕಾರ್ಯಗಳಲ್ಲಿ ನೆರವಾಗಿ. ನಿಮ್ಮ ಇಂಥ ಈ ಸಹಾಯವು ಆ ವೃದ್ಧರಿಗೆ ದೊಡ್ಡ ಉಪಕಾರವಾಗಬಹುದು. ವಿಶ್ವ ಹಿರಿಯ ನಾಗರಿಕರ ದಿನ ಆಚರಣೆಗೂ ಒಂದು ಅರ್ಥ ಸಿಗಬಹುದು ಎಂದು ಯುವ ಜನತೆಗೆ ಮನವಿ ಮಾಡಿದರು.ಜಿಲ್ಲಾಧಿಕಾರಿ ಜಿ.ಪ್ರಭುರವರು ಹಿರಿಯ ನಾಗರಿಕರೊಂದಿಗೆ ಸಂವಾದ ನಡೆಸಿ ಅವರ ಅಹವಾಲುಗಳನ್ನು ಆಲಿಸಿ ಪರಿಹಾರ ನೀಡುವ ವ್ಯೆವಸ್ಥೆ, ನ್ಯಾಯಾಲಯದಲ್ಲಿರಿವ ಮನೆ, ನಿವೇಶನ ಮತ್ತು ಜಮೀನು ಮತ್ತಿತರ ವ್ಯಾಜ್ಯಗಳಿಗೆ ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತವಾಗಿ ವಕೀಲರ ನೇಮಕ ಮಾಡುವುದಾಗಿ ತಿಳಿಸಿದರು.
ಈ ವೇಳೆ ನ್ಯಾ. ಪ್ರೇಮ್ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಭ ಕಲ್ಯಾಣಾಧಿಕಾರಿ ಡಾ.ಚೇತನ್, ಕುಟುಂಬ ಕಲ್ಯಾಣಾಧಿಕಾರಿ ಡಾ.ಪ್ರಕಾಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ಧೇಶಕ ವೆಂಕಟೇಶರೆಡ್ಡಿ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಾಯಕನಿರ್ದೇಶಕಿ ಜ್ಯೋತಿಲಕ್ಷ್ಮೀ, ವಾರ್ತಾಧಿಕಾರಿ ಎಂ.ಆರ್. ಮಂಜುನಾಥ, ತಾಲೂಕು ಆರೋಗ್ಯಾಧಿಕಾರಿ ಡಾ. ಮಂಜುಳ, ಮಾನಸ ಆಸ್ಪತ್ರೆ ಹಾಗೂ ಮಾನಸ ವೃದ್ದಾಶ್ರಮದ ವ್ಯೆವಸ್ಥಾಪಕ ನಿರ್ಧೇಶಕ ಡಾ. ಎಚ್.ಎಸ್.ಮಧುಕರ್, ಕಾನೂನು ಸಹಾಯಕ ಅಭಿರಕ್ಷಕರಾದ ಎಸ್.ಎಂ. ಶ್ರೀನಾಥ್, ಸಾಯಿ ಇಂಟರ್ ನ್ಯಾಷನಲ್ ಟ್ರಸ್ಟ್‌ನ ನಾರಾಯಣ ಮೂರ್ತಿ, ಹಿರಿಯ ನಾಗರೀಕರವೇದಿಕೆಯ ಶ್ರೀನಿವಾಸರೆಡ್ಡಿ, ಜಯರಾಮರೆಡ್ಡಿ, ತಿರುಮಳಪ್ಪ, ಮಹಮದ್ ಆಲಿ, ಕೇಶವರೆಡ್ಡಿ, ಮತ್ತಿತರರು ಇದ್ದರು.