ಸಂಸತ್‌ನಲ್ಲಿ ನೀಟ್‌ ಕೋಲಾಹಲ

| Published : Jun 29 2024, 12:35 AM IST / Updated: Jun 29 2024, 05:01 AM IST

ಸಾರಾಂಶ

ಸಂಸತ್ತಿನಲ್ಲಿ ನಿರೀಕ್ಷೆಯಂತೆ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ‘ನೀಟ್‌-ಯುಜಿ’ ಹಗರಣ ಶುಕ್ರವಾರ ಪ್ರತಿಧ್ವನಿಸಿದೆ. ‘ರಾಷ್ಟ್ರಪತಿಗಳ ವಂದನಾ ನಿರ್ಣಯದ ಚರ್ಚೆ ಕೈಬಿಟ್ಟು, ನೀಟ್‌ ಬಗ್ಗೆ ವಿಶೇಷ ಚರ್ಚೆ ನಡೆಯಬೇಕು’ ಎಂದು ಪ್ರತಿಪಕ್ಷಗಳು ಆಗ್ರಹಿಸಿ ಕೋಲಾಹಲ ಎಬ್ಬಿಸಿವೆ.

 ನವದೆಹಲಿ :  ಸಂಸತ್ತಿನಲ್ಲಿ ನಿರೀಕ್ಷೆಯಂತೆ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ‘ನೀಟ್‌-ಯುಜಿ’ ಹಗರಣ ಶುಕ್ರವಾರ ಪ್ರತಿಧ್ವನಿಸಿದೆ. ‘ರಾಷ್ಟ್ರಪತಿಗಳ ವಂದನಾ ನಿರ್ಣಯದ ಚರ್ಚೆ ಕೈಬಿಟ್ಟು, ನೀಟ್‌ ಬಗ್ಗೆ ವಿಶೇಷ ಚರ್ಚೆ ನಡೆಯಬೇಕು’ ಎಂದು ಪ್ರತಿಪಕ್ಷಗಳು ಆಗ್ರಹಿಸಿ ಕೋಲಾಹಲ ಎಬ್ಬಿಸಿವೆ. ಆದರೆ ಸರ್ಕಾರ ಇದಕ್ಕೆ ನಿರಾಕರಿಸಿ, ‘ವಂದನಾ ನಿರ್ಣಯದಲ್ಲೇ ನೀಟ್‌ ಚರ್ಚೆ ನಡೆಸಲಾಗುವುದು’ ಎಂದು ಹೇಳಿದೆ. ವಿಪಕ್ಷಗಳು ಇದಕ್ಕೆ ಒಪ್ಪದ ಕಾರಣ ಗೊಂದಲ ಏರ್ಪಟ್ಟು ಲೋಕಸಭೆ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಗಿದೆ. ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳು ಸಭಾತ್ಯಾಗ ಮಾಡಿವೆ.

ಶುಕ್ರವಾರ ಲೋಕಸಭೆ ಕಲಾಪ ಆರಂಭವಾದ ಬಳಿಕ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧೀ, ಕಾಂಗ್ರೆಸ್ ಸದಸ್ಯ ಗೌರವ್‌ ಗೊಗೋಯ್‌ ಹಾಗೂ ಟಿಎಂಸಿ ಸದಸ್ಯರು ನೀಟ್‌ ಕುರಿತ ನಿಲುವಳಿ ಸೂಚನೆ ಅಂಗೀಕರಿಸಿ ಕೂಡಲೇ ಚರ್ಚೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. ‘ರಾಷ್ಟ್ರಪತಿಗಳ ವಂದನಾ ನಿರ್ಣಯದ ಮೇಲೆ ಆಮೇಲೆ ಚರ್ಚೆ ಮಾಡೋಣ. ಮೊದಲು ನೀಟ್‌ ಬಗ್ಗೆ ಚರ್ಚೆ ನಡೆಸೋಣ. ಈ ಮೂಲಕ ವಿದ್ಯಾರ್ಥಿಗಳ ಜತೆ ನಾವಿದ್ದೇವೆ ಎಂದು ಸರ್ಕಾರ ಹಾಗೂ ವಿಪಕ್ಷಗಳು ಜಂಟಿಯಾಗಿ ಸಂದೇಶ ರವಾನಿಸೋಣ’ ಎಂದು ರಾಹುಲ್‌ ಗಾಂಧಿ ಆಗ್ರಹಿಸಿದರು.

ಆದರೆ ಇದಕ್ಕೆ ಸಂಸದೀಯ ಸಚಿವ ಕಿರಣ್‌ ರಿಜಿಜು ಹಾಗೂ ಸ್ಪೀಕರ್‌ ಓಂ ಬಿರ್ಲಾ ಒಪ್ಪಲಿಲ್ಲ. ‘ರಾಷ್ಟ್ರಪತಿಗಳ ವಂದನಾ ನಿರ್ಣಯದ ಚರ್ಚೆಯಲ್ಲೇ ನೀಟ್‌ ಬಗ್ಗೆ ಚರ್ಚೆಗೆ ಅವಕಾಶ ನೀಡಲಾಗುತ್ತದೆ. ಚರ್ಚೆ ಮಾಡಲೂ ಒಂದು ಪದ್ಧತಿ ಇದೆ. ಅದು ವಿಪಕ್ಷ ಸಂಸದರಿಗೆ ಗೊತ್ತಿಲ್ಲವೇ’ ಎಂದು ಛೇಡಿಸಿದರು. ಆಗ ವಿಪಕ್ಷ ಸದಸ್ಯರು ಸದನದ ಬಾವಿಗಿಳಿದು ಹೋರಾಟ ಆರಂಭಿಸಿದರು. ಪರಿಣಾಮ ಸೋಮವಾರಕ್ಕೆ ಸ್ಪೀಕರ್ ಕಲಾಪ ಮುಂದೂಡಿದರು.

ರಾಜ್ಯಸಭೆಯಲ್ಲಿ:

ರಾಜ್ಯಸಭೆಯಲ್ಲೂ ಈ ಬಗ್ಗೆ ವಿಷಯ ಪ್ರಸ್ತಾಪವಾಯಿತು. ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರೇ ಸದನದ ಬಾವಿಗೆ ಇಳಿದು ನೀಟ್ ಚರ್ಚೆಗೆ ಆಗ್ರಹಿಸಿದರು. ಇದಕ್ಕೆ ಸಭಾಪತಿ ಜಗದೀಪ್‌ ಧನಕರ್‌ ಒಪ್ಪದೆ, ‘ಈಗ ವಂದನಾ ನಿರ್ಣಯದ ಚರ್ಚೆ ನಡೆಯಲಿ. ಆಮೇಲೆ ನೀಟ್‌ ಚರ್ಚೆ’ ಎಂದರು. ‘ಸದನ ಸಲಹಾ ಸಮಿತಿ ಸಭೆಯಲ್ಲಿ ನೀಟ್ ಬಗ್ಗೆ ಚರ್ಚೆಗೆ ವಿಪಕ್ಷಗಳು ಕೋರಲಿಲ್ಲ. ಈಗ ಧರಣಿಗೆ ಮುಂದಾಗಿರುವುದು ಖೇದಕರ. ಕಲಾಪಕ್ಕೆ ಅಡ್ಡಿ ಮಾಡುವುದಷ್ಟೇ ವಿಪಕ್ಷಗಳ ಉದ್ದೇಶ’ ಎಂದು ಸಭಾನಾಯಕ ಜೆ.ಪಿ. ನಡ್ಡಾ ಹೇಳಿದರು. ಆಗ ಕೋಲಾಹಲ ಉಂಟಾಗಿ ಇಂಡಿಯಾ ಕೂಟದ ಸದಸ್ಯರು ಹಾಗೂ ಬಿಜೆಡಿ ಸಂಸದರು ಸಭಾತ್ಯಾಗ ಮಾಡಿದರು.

ಚರ್ಚೆಗೆ ರೆಡಿ- ಪ್ರಧಾನ್‌:

ಸದನದ ಹೊರಗೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಸುದ್ದಿಗಾರರ ಜತೆ ಮಾತನಾಡಿ, ‘ನೀಟ್‌ ಚರ್ಚೆಗೆ ಸರ್ಕಾರ ಸಿದ್ಧವಿದೆ. ಆದರೆ ಷರತ್ತುಗಳನ್ನು ಹಾಕುತ್ತ ವಿಪಕ್ಷಗಳು ಕಲಾಪಕ್ಕೆ ಅಡ್ಡಿ ಮಾಡುತ್ತಿವೆ’ ಎಂದು ಆರೋಪಿಸಿದರು.

ನೀಟ್‌: ಕೇಂದ್ರದ ಪರ ದೇವೇಗೌಡರ ಬ್ಯಾಟಿಂಗ್‌

ನವದೆಹಲಿ: ನೀಟ್‌ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಕೇಂದ್ರ ಸರ್ಕಾರ ಇದುವರೆಗೂ ಕೈಗೊಂಡ ಕ್ರಮಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿರುವ ಜೆಡಿಎಸ್‌ ಹಿರಿಯ ನಾಯಕ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಇದೇ ವಿಷಯ ಮುಂದಿಟ್ಟುಕೊಂಡು ಸಂಸತ್‌ ಕಲಾಪಕ್ಕೆ ಅಡ್ಡಿ ಮಾಡದಂತೆ ವಿಪಕ್ಷಗಳಿಗೆ ಮನವಿ ಮಾಡಿದ್ದಾರೆ.ಶುಕ್ರವಾರ ರಾಜ್ಯಸಭೆಯಲ್ಲಿ ವಿಪಕ್ಷಗಳು ನೀಟ್‌ ವಿಷಯ ಪ್ರಸ್ತಾಪಿಸಿ ಗದ್ದಲ ಎಬ್ಬಿಸಿದ ವೇಳೆ ಮಾತನಾಡಿದ ದೇವೇಗೌಡರು, ‘ನೀಟ್‌ ಅಕ್ರಮದ ಕುರಿತು ಸಿಬಿಐ ತನಿಖೆಗೆ ಆದೇಶಿಸಿದ ಕೇಂದ್ರದ ಕ್ರಮ ಸೂಕ್ತವಾಗಿದೆ. ಈ ವಿಷಯದಲ್ಲಿ ಸಿಬಿಐ ತನ್ನ ತನಿಖೆ ಪೂರ್ಣಗೊಳಿಸಿ ವರದಿ ನೀಡುವವರೆಗೂ ವಿಪಕ್ಷಗಳು ಕಲಾಪಕ್ಕೆ ಅಡ್ಡಿ ಮಾಡಬಾರದು. ಈ ಹಂತದಲ್ಲಿ ನಾನು ಯಾರದ್ದೇ ಪರವಾಗಿ ಮಾತನಾಡುತ್ತಿಲ್ಲ. ಅಕ್ರಮದಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಆದರೆ ತನಿಖೆಗೆ ಮೊದಲೇ ಸರ್ಕಾರ ಘಟನೆಯ ಹೊಣೆ ಹೊರಲು ಸಾಧ್ಯವಿಲ್ಲ’ ಎಂದು ಹೇಳಿದರು.