ಸಾರಾಂಶ
ರಾಷ್ಟ್ರ ರಾಜಧಾನಿಗೆ ಹೊಂದಿಕೊಂಡಂತಿರುವ ರಾಜ್ಯ ಹರ್‍ಯಾಣದಲ್ಲಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಒಂದೆಡೆ ಎಲ್ಲ 10 ಕ್ಷೇತ್ರಗಳನ್ನು ಮತ್ತೊಮ್ಮೆ ಗೆಲ್ಲುವ ಮೂಲಕ ಮತ್ತೊಮ್ಮೆ ಕ್ಲೀನ್‌ಸ್ವೀಪ್ ಸಾಧಿಸುವ ವಿಶ್ವಾಸದಲ್ಲಿ ಬಿಜೆಪಿ ಇದ್ದರೆ ಮತ್ತೊಂದೆಡೆ ಕಳೆದ ಬಾರಿಯ ತಪ್ಪನ್ನು ಸರಿಪಡಿಸಿಕೊಂಡು ಖಾತೆ ತೆರೆಯುವ ಮೂಲಕ ಬಿಜೆಪಿಗೆ ಟಕ್ಕರ್ ಕೊಡಲು ಕಾಂಗ್ರೆಸ್ ಮೈತ್ರಿಕೂಟ ಹಾಗೂ ಜೆಜೆಪಿ ಪಕ್ಷಗಳು ಸಜ್ಜಾಗಿ ನಿಂತಿವೆ.
ಹೇಗಿದೆ ಬಿಜೆಪಿ ವಾತಾವರಣ?
2019ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಬಹುಮತ ಗಳಿಸುವಲ್ಲಿ ವಿಫಲವಾದರೂ ಇತ್ತೀಚೆಗೆ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡುವ ದೊಡ್ಡ ಸಾಹಸಕ್ಕೆ ಕೈ ಹಾಕಿರುವ ಬಿಜೆಪಿ ರೈತರ ವಿಚಾರದಲ್ಲಿ ಡ್ಯಾಮೇಜ್ ಕಂಟ್ರೋಲ್ ಮಾಡುವ ಯತ್ನದಲ್ಲಿ ತೊಡಗಿದೆ. ಆದರೆ ಮಾಜಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರಿಗೆ ಕರ್ನಾಲ್ ಕ್ಷೇತ್ರದಿಂದ ಟಿಕೆಟ್ ನೀಡುವ ಮೂಲಕ ಪ್ರಬಲ ಖಾತ್ರಿ ಸಮುದಾಯದ ಜೊತೆಗೆ ರೈತ ಸಮುದಾಯವನ್ನು ಓಲೈಕೆ ಮಾಡುತ್ತಿದೆ. ಅಲ್ಲದೆ ಸ್ವತಃ ಪ್ರಧಾನಿ ಮೋದಿಯೇ ಬಂದು ಪ್ರಚಾರದಲ್ಲಿ ಅಬ್ಬರಿಸುತ್ತಿರುವುದು ಬಿಜೆಪಿ ಪಾಲಿಗೆ ಪ್ಲಸ್. ಆದರೂ ರೈತರ ಪ್ರತಿಭಟನೆ ವಿಚಾರದಲ್ಲಿ ಮೊಂಡುವಾದವನ್ನು ಮುಂದುವರಿಸಿರುವ ಕೇಂದ್ರ ಸರ್ಕಾರದ ನಡೆ ಅದರ ಪಾಲಿಗೆ ಮುಳುವಾಗುವ ಸಾಧ್ಯತೆಯಿದೆ.
ಕಾಂಗ್ರೆಸ್-ಆಪ್ ಮೈತ್ರಿ:
ಈ ಬಾರಿ ಕಾಂಗ್ರೆಸ್ ಪಕ್ಷವು ಆಮ್ ಆದ್ಮಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಕಣಕ್ಕಿಳಿಯುತ್ತಿದೆ. ಅದರಲ್ಲಿ ಕುರುಕ್ಷೇತ್ರವನ್ನು ಮಾತ್ರ ಆಪ್‌ಗೆ ಕಾಂಗ್ರೆಸ್ ಬಿಟ್ಟುಕೊಟ್ಟಿದ್ದು, ಉಳಿದ ಎಲ್ಲ 9 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧೆ ಮಾಡುತ್ತಿದೆ. ಕಳೆದ ಬಾರಿ ಖಾತೆ ತೆರೆಯುವಲ್ಲಿ ವಿಫಲವಾಗಿದ್ದರೂ ಶೇ.29ರಷ್ಟು ಮತಗಳಿಗೆ ಮಾಡಿ ವಿಶ್ವಾಸ ವೃದ್ಧಿಸಿಕೊಂಡಿದ್ದ ಕಾಂಗ್ರೆಸ್ ಈ ಬಾರಿ ಅದನ್ನು ಉಳಿಸಿಕೊಳ್ಳುವ ಜೊತೆಗೆ ಕ್ಷೇತ್ರಗಳನ್ನಾಗಿ ಪರಿವರ್ತನೆ ಮಾಡಿಕೊಳ್ಳಲು ಎದುರು ನೋಡುತ್ತಿದೆ. ಇದರೊಂದಿಗೆ ಬಿಜೆಪಿಯ ಕ್ಲೀನ್‌ಸ್ವೀಪ್ ಸಾಧನೆಯ ಕನಸನ್ನು ಭಗ್ನ ಮಾಡುವ ಜೊತೆಗೆ ರಾಜ್ಯದಲ್ಲಿ ಖಾತೆ ತೆರೆದು ರೈತರ ಹೋರಾಟವನ್ನು ಮತಗಳಿಕೆಯಾಗಿ ಪರಿವರ್ತನೆ ಮಾಡಿಕೊಳ್ಳುವತ್ತ ಎದುರು ನೋಡುತ್ತಿದೆ.
ತಟಸ್ಥ ಸ್ಪರ್ಧೆಯಲ್ಲಿ ಜೆಜೆಪಿ:
ದುಶ್ಯಂತ್ ಚೌಟಾಲರ ನೇತೃತ್ವದ ಜನನಾಯಕ ಜನತಾ ಪಾರ್ಟಿ (ಜೆಜೆಪಿ) ರಾಜ್ಯದಲ್ಲಿ ಬಿಜೆಪಿಗೆ ಬಾಹ್ಯ ಬೆಂಬಲ ನೀಡಿದ್ದರೂ ಲೋಕಸಭೆಯಲ್ಲಿ ಸ್ತಂತ್ರ ಸ್ಪರ್ಧೆ ಮಾಡುವುದಾಗಿ ಪ್ರಕಟಿಸಿದೆ. ಹಾಗಾಗಿ ಜೆಜೆಪಿ ಎಲ್ಲ 10 ಕ್ಷೇತ್ರಗಳಲ್ಲಿ ಕಿಂಗ್ ಮೇಕರ್ ಆಗುವ ಸಾಧ್ಯತೆಯಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಗೆಲುವನ್ನು ನಿರ್ಧರಿಸಲು ಜೆಜೆಪಿ ಪ್ರತಿ ಕ್ಷೇತ್ರದಲ್ಲಿ ಪಡೆಯುವ ಮತಗಳು ನಿರ್ಣಾಯಕವಾಗಲಿವೆ. ಇದರ ಜೊತೆಗೆ ರಾಜ್ಯದಲ್ಲಿ ಅಭಯ್ ಸಿಂಗ್ ಚೌಟಾಲರ ಭಾರತ ರಾಷ್ಟ್ರೀಯ ಲೋಕದಳ(ಐಎನ್‌ಎಲ್‌ಡಿ), ಬಾದಲ್‌ರ ಶಿರೋಮಣಿ ಅಕಾಲಿ ದಳ, ಮತ್ತು ಅಲ್ಪ ಪ್ರಮಾಣದಲ್ಲಿ ಮಾಯಾವತಿ ಅವರ ಬಹುಜನ ಸಮಾಜ ಪಕ್ಷಗಳೂ ಅಸ್ತಿತ್ವ ಹೊಂದಿದ್ದು, ಆ ಪಕ್ಷದ ಅಭ್ಯರ್ಥಿಗಳು ಯಾರ ಮತವನ್ನು ವಿಭಜಿಸಲಿದ್ದಾರೆ ಎಂಬುದು ಕುತೂಹಲಕರವಾಗಿದೆ. ಸ್ಪರ್ಧೆ ಹೇಗೆ?
ಕಳೆದ ಬಾರಿ 10ಕ್ಕೆ 10 ಕ್ಷೇತ್ರಗಳನ್ನೂ ಗೆದ್ದಿದ್ದ ಬಿಜೆಪಿ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಮುಗ್ಗರಿಸಿತ್ತು. ಅಲ್ಲದೆ ಇತ್ತೀಚೆಗೆ ನಡೆದ ರೈತ ಹೋರಾಟದಲ್ಲಿ ಹರ್‍ಯಾಣದಿಂದಲೂ ಹೆಚ್ಚಿನ ರೈತರು ಪಾಲ್ಗೊಂಡಿದ್ದು, ಅವರ ಬೇಡಿಕೆಗೆ ಕೇಂದ್ರ ಸರ್ಕಾರ ಮಣಿಯದಿರುವುದನ್ನು ಹೇಗೆ ಮತಗಳ ಮೂಲಕ ವ್ಯಕ್ತಪಡಿಸುವರು ಎಂಬುದರ ಮೇಲೆ ಚುನಾವಣೆ ನಿಂತಿದೆ. ಜೊತೆಗೆ ಕಾಂಗ್ರೆಸ್-ಆಪ್ ಮೈತ್ರಿ ಮಾಡಿಕೊಂಡಿರುವುದನ್ನು ಅಲ್ಲಗಳೆಯುವಂತಿಲ್ಲ. ಅರವಿಂದ್ ಕೇಜ್ರಿವಾಲ್ ಬಂಧನವೂ ಚುನಾವಣೆ ವೇಳೆಯಲ್ಲಿ ಹೆಚ್ಚು ಮುನ್ನೆಲೆಗೆ ಬರುವ ಸಾಧ್ಯತೆ ಇದೆ.
-ರಾಜ್ಯ: ಹರ್‍ಯಾಣ
ಒಟ್ಟು ಲೋಕಸಭಾ ಕ್ಷೇತ್ರಗಳು: 10
ಮತದಾನದ ಹಂತ: 1
-2019ರ ಚುನಾವಣೆ ಫಲಿತಾಂಶ
ಪಕ್ಷ ಕ್ಷೇತ್ರ ಶೇಕಡಾ
ಬಿಜೆಪಿ 10 58.21
ಕಾಂಗ್ರೆಸ್ 00 28.51
ಜೆಜೆಪಿ 00 4.9
ಪ್ರಮುಖ ಕ್ಷೇತ್ರಗಳು:
ಕರ್ನಾಲ್, ಹಿಸಾರ್, ಸೋನಿಪತ್, ಗುರುಗ್ರಾಮ, ಫರೀದಾಬಾದ್, ರೋಹ್ಟಕ್, ಫರೀದಾಬಾದ್, ಸಿರ್ಸಾ, ಕುರುಕ್ಷೇತ್ರ
-ಪ್ರಮುಖ ಹುರಿಯಾಳುಗಳು:
ಮನೋಹರ್ ಲಾಲ್ ಖಟ್ಟರ್ (ಬಿಜೆಪಿ), ರಂಜಿತ್ ಸಿಂಗ್ ಚೌಟಾಲ (ಬಿಜೆಪಿ), ಕುಮಾರಿ ಸೆಲ್ಜಾ (ಕಾಂಗ್ರೆಸ್), ಸುಶೀಲ್ ಗುಪ್ತಾ (ಎಎಪಿ), ಅರವಿಂದ್ ಕುಮಾರ್ ಶರ್ಮಾ (ಬಿಜೆಪಿ)
ಮತದಾನ ನಡೆಯುವ ದಿನ: 25 ಮೇ (1 ಹಂತ)