ಪ್ರತಿಪಕ್ಷಗಳ ತೀವ್ರ ವಿರೋಧ, ಗದ್ದಲದ ನಡುವೆಯೇ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ)ಯನ್ನು ಬದಲಿಸಿ ವರ್ಷಕ್ಕೆ 125 ದಿನಗಳ ಕಾಲ ಉದ್ಯೋಗ ಖಾತರಿ ಒದಗಿಸುವ ‘ವಿಬಿ- ಜಿ ರಾಮ್‌ ಜಿ’ ವಿಧೇಯಕಕ್ಕೆ ಲೋಕಸಭೆಯಲ್ಲಿ ಗುರುವಾರ ಧ್ವನಿಮತದ ಮೂಲಕ ಅಂಗೀಕಾರ ನೀಡಲಾಯಿತು.

ನವದೆಹಲಿ: ಪ್ರತಿಪಕ್ಷಗಳ ತೀವ್ರ ವಿರೋಧ, ಗದ್ದಲದ ನಡುವೆಯೇ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ)ಯನ್ನು ಬದಲಿಸಿ ವರ್ಷಕ್ಕೆ 125 ದಿನಗಳ ಕಾಲ ಉದ್ಯೋಗ ಖಾತರಿ ಒದಗಿಸುವ ‘ವಿಬಿ- ಜಿ ರಾಮ್‌ ಜಿ’ ವಿಧೇಯಕಕ್ಕೆ ಲೋಕಸಭೆಯಲ್ಲಿ ಗುರುವಾರ ಧ್ವನಿಮತದ ಮೂಲಕ ಅಂಗೀಕಾರ ನೀಡಲಾಯಿತು.

ಈ ನಡುವೆ ಸರ್ಕಾರದ ಕ್ರಮವನ್ನು ಖಂಡಿಸಿ ವಿಪಕ್ಷಗಳು ಗುರುವಾರ ಸಂಸತ್‌ ಭವನದ ಕಾಂಪ್ಲೆಕ್ಸ್‌ನಲ್ಲಿ ಪ್ರತಿಭಟನೆ ನಡೆಸಿದವು. ಜೊತೆಗೆ ವಿಶ್ವದ ಅತಿದೊಡ್ಡ ಉದ್ಯೋಗ ಯೋಜನೆಯ ಈ ವ್ಯವಸ್ಥಿತ ಹತ್ಯೆ ವಿರುದ್ಧ ದೇಶವ್ಯಾಪಿ ಹೋರಾಟ ನಡೆಸಲಾಗುವುದು ಎಂದು ಇದೇ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಚ್ಚರಿಸಿದರು.

ಭಾರೀ ಗದ್ದಲ:

ವಿಕಸಿತ ಭಾರತ ಗ್ಯಾರಂಟಿ ಫಾರ್‌ ರೋಜ್‌ಗಾರ್‌ ಆ್ಯಂಡ್‌ ಅಜೀವಿಕಾ ಮಿಷನ್‌(ವಿಬಿ-ಜಿ ರಾಮ್ ಜಿ) ವಿಧೇಯಕ ಮಂಡನೆ ವೇಳೆ ಸದನದ ಬಾವಿಗಿಳಿದು ಪ್ರತಿಪಕ್ಷ ಸದಸ್ಯರು ಪ್ರತಿಭಟನೆ ನಡೆಸಿದರು. ಇಂಥದ್ದೊಂದು ಬದಲಾವಣೆ ಮೂಲಕ ಕೇಂದ್ರ ಸರ್ಕಾರ ಗ್ರಾಮೀಣ ಆರ್ಥಿಕತೆಯನ್ನು ನಾಶ ಮಾಡಸುತ್ತಿದೆ ಮತ್ತು ಮಹಾತ್ಮಾ ಗಾಂಧೀಜಿ ಹೆಸರು ಕೈಬಿಡುವ ಮೂಲಕ ಅವರ ತತ್ವಗಳನ್ನು ಕಡೆಗಣಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ತೀವ್ರ ಆಕ್ರೋಶ ಹೊರಹಾಕಿದರು. ಜತೆಗೆ, ಜಿ ರಾಮ್‌ ಜಿ ವಿಧೇಯಕದ ಪ್ರತಿಗಳನ್ನು ಹರಿದು ಸ್ಪೀಕರ್‌ ಕುರ್ಚಿಯತ್ತ ಎಸೆದರು. ಆಗ ಗದ್ದಲದ ನಡುವೆಯೇ ಜಿ ರಾಮ್‌ ಜಿ ವಿಧೇಯಕಕ್ಕೆ ಧ್ವನಿ ಮತದ ಮೂಲಕ ಅಂಗೀಕಾರ ನೀಡಲಾಯಿತು. ಬಳಿಕ ಸ್ಪೀಕರ್‌ ಅವರು ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಿದರು.

ಇದಕ್ಕೂ ಮೊದಲು ಜಿ ರಾಮ್ ಜಿ ವಿಧೇಯಕ ಕುರಿತು ಸುಮಾರು ಎಂಟು ಗಂಟೆಗಳ ಸುದೀರ್ಘ ಚರ್ಚೆ ಬಳಿಕ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್‌ ಸಿಂಗ್ ಚೌಹಾಣ್‌ ಅವರು ಪ್ರತಿಕ್ರಿಯಿಸಿ, ಮಹಾತ್ಮ ಗಾಂಧೀಜಿ ಅವರ ಆದರ್ಶಗಳನ್ನು ಎತ್ತಿಹಿಡಿಯಲು ಮೋದಿ ಸರ್ಕಾರ ಬದ್ಧವಾಗಿದೆ. ಆದರೆ, ಕಾಂಗ್ರೆಸ್‌ ಪಕ್ಷ ಗಾಂಧೀಜಿ ಅವರ ಆದರ್ಶಗಳನ್ನು ಹತ್ಯೆಗೈಯುವ ಕೆಲಸವನ್ನಷ್ಟೇ ಮಾಡಿತು. ಖಾತ್ರಿ ಯೋಜನೆಗೆ ಮಹಾತ್ಮ ಗಾಂಧೀಜಿ ಹೆಸರನ್ನು 2009ರಲ್ಲಿ ಸೇರ್ಪಡೆ ಮಾಡಲಾಗಿದೆ. ಮೂಲ ಯೋಜನೆಯಲ್ಲಿ ಗಾಂಧೀಜಿ ಹೆಸರೇ ಇರಲಿಲ್ಲ. ನಂತರ ಲೋಕಸಭಾ ಚುನಾವಣೆ ಸಮೀಪಿಸಿದಾಗ ಕಾಂಗ್ರೆಸ್‌ಗೆ ಬಾಪೂಜಿ ಹೆಸರು ಸ್ಮರಣೆಗೆ ಬಂತು ಎಂದು ಆರೋಪಿಸಿದರು.

ಗೂಂಡಾರಾಜ್‌ ವರ್ತನೆ-ಕಿಡಿ:

ನಂತರ ಸುದ್ದಿಗಾರರ ಜತೆಗೆ ಮಾತನಾಡಿದ ಸಚಿವ ಶಿವರಾಜ್‌ ಸಿಂಗ್ ಚೌಹಾಣ್‌ ಅವರು, ಜಿ ರಾಮ್‌ ಜಿ ವಿಧೇಯಕ ಮಂಡನೆ ವೇಳೆ ಪ್ರತಿಪಕ್ಷಗಳ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್‌ ಮತ್ತು ಇಂಡಿಯಾ ಒಕ್ಕೂಟದ ಸಂಸದರು ಗೂಂಡಾರಾಜ್‌ ರೀತಿ ವರ್ತಿಸುತ್ತಿದ್ದಾರೆ. ಇಂಥ ವರ್ತನೆ ನಾಚಿಗೆಗೇಡು ಎಂದು ಕಿಡಿಕಾರಿದರು. ಪ್ರತಿಪಕ್ಷಗಳಿಗೆ ಕೇವಲ ಹೆಸರಿನ ಕುರಿತಷ್ಟೇ ಗಮನ. ಆದರೆ, ನಾವು ಕೆಲಸದ ಕುರಿತು ಗಮನ ಕೇಂದ್ರೀಕರಿಸಿದ್ದೇವೆ ಎಂದರು.

ಏನಿದು ಜಿ ರಾಮ್ ಜಿ ಬಿಲ್‌?:

ಕೇಂದ್ರ ಸರ್ಕಾರದ 2047ರ ವಿಕಸಿತ ಭಾರತದ ಪರಿಕಲ್ಪನೆಗೆ ಸರಿಹೊಂದುವಂತೆ ನರೇಗಾ ಯೋಜನೆ ಬದಲಿಗೆ ಕೇಂದ್ರದ ಎನ್‌ಡಿಎ ಸರ್ಕಾರ ಜಾರಿಗೆ ತರುತ್ತಿರುವ ಹೊಸ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಬಿಲ್‌ ಇದಾಗಿದೆ. ಈ ವಿಧೇಯಕದಡಿ ಪ್ರತಿ ಗ್ರಾಮೀಣ ಕುಟುಂಬಕ್ಕೆ ನರೇಗಾದಡಿ ಸಿಗುತ್ತಿದ್ದ 100 ದಿನಗಳ ಕೆಲಸವನ್ನು 125ಕ್ಕೆ ಹೆಚ್ಚಿಸಲಾಗಿದೆ. ಈ ಹಿಂದೆ ನರೇಗಾ ಯೋಜನೆ ಕಾಮಗಾರಿಗಳಿಗೆ ಕೇಂದ್ರ ಸರ್ಕಾರವೇ ಹೆಚ್ಚಿನ ಅನುದಾನ ನೀಡುತ್ತಿತ್ತು. ಆದರೆ, ಈ ಹೊಸ ವಿಧೇಯಕದಡಿ ಕೇಂದ್ರ ಸರ್ಕಾರ ಶೇ.60ರಷ್ಟು ಅನುದಾನ ನೀಡಿದರೆ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಶೇ.40 ಅನುದಾನ ನೀಡಬೇಕಾಗಿದೆ. ಇದರಿಂದ ರಾಜ್ಯಗಳಿಗೆ ಹೆಚ್ಚಿನ ಹೊರೆ ಬೀಳುವ ನಿರೀಕ್ಷೆ ಇದೆ.

ದೇಶಾದ್ಯಂತ ಬೀದಿಗಿಳಿದು ಹೋರಾಟ

ನವದೆಹಲಿ: ಮನರೇಗಾ ಯೋಜನೆ ಹೆಸರನ್ನು ‘ಜಿ ರಾಮ್‌ ಜಿ’ ಎಂದು ಬದಲಾಯಿಸಿದ ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ದೇಶಾದ್ಯಂತ ಬೀದಿಗಿಳಿದು ಹೋರಾಟ ನಡೆಸುವುದಾಗಿ ಕಾಂಗ್ರೆಸ್‌ ಘೋಷಿಸಿದೆ.

ಸಂಸತ್‌ ಭವನದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ವಿಶ್ವದ ಅತಿದೊಡ್ಡ ಉದ್ಯೋಗ ಯೋಜನೆಯ ಈ ವ್ಯವಸ್ಥಿತ ಹತ್ಯೆ ವಿರುದ್ಧ ದೇಶವ್ಯಾಪಿ ಹೋರಾಟ ನಡೆಸಲಾಗುವುದು. ಇದು, ಮೋದಿ ಸರ್ಕಾರ ರಾಷ್ಟ್ರಪಿತನಿಗೆ ಅವಮಾನ ಮಾಡಿದ್ದಷ್ಟೇ ಅಲ್ಲ, ಜನರಿಂದ ಕೆಲಸದ ಹಕ್ಕನ್ನೂ ಕಸಿದುಕೊಂಡಿದೆ’ ಎಂದರು.