ಬೆಂಗಳೂರು ವಿಮಾನ ನಿಲ್ದಾಣದಲ್ಲಿರುವ ಕೆಂಪೇಗೌಡರ ಪ್ರತಿಮೆ, ಗುಜರಾತ್‌ನಲ್ಲಿರುವ ವಿಶ್ವದ ಅತಿ ಎತ್ತರದ ಸರ್ದಾರ್ ಪಟೇಲರ ಏಕತಾ ಪ್ರತಿಮೆ ಸೇರಿ ಹಲವು ಕಲಾಕೃತಿಗಳ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಖ್ಯಾತಿ ಪಡೆದಿದ್ದ ಶಿಲ್ಪಿ ರಾಮ್ ಸುತಾರ್ ಬುಧವಾರ ತಡರಾತ್ರಿ ನಿಧನರಾದರು.
ಮುಂಬೈ: ಬೆಂಗಳೂರು ವಿಮಾನ ನಿಲ್ದಾಣದಲ್ಲಿರುವ ಕೆಂಪೇಗೌಡರ ಪ್ರತಿಮೆ, ಗುಜರಾತ್‌ನಲ್ಲಿರುವ ವಿಶ್ವದ ಅತಿ ಎತ್ತರದ ಸರ್ದಾರ್ ಪಟೇಲರ ಏಕತಾ ಪ್ರತಿಮೆ ಸೇರಿ ಹಲವು ಕಲಾಕೃತಿಗಳ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಖ್ಯಾತಿ ಪಡೆದಿದ್ದ ಶಿಲ್ಪಿ ರಾಮ್ ಸುತಾರ್ ಬುಧವಾರ ತಡರಾತ್ರಿ ನಿಧನರಾದರು.
ಅವರಿಗೆ 100 ವರ್ಷ ವಯಸ್ಸಾಗಿತ್ತು.
ತಮ್ಮ ಸುದೀರ್ಘ 70ಕ್ಕೂ ಅಧಿಕ ವರ್ಷಗಳ ವೃತ್ತಿಜೀವನದಲ್ಲಿ, ದೇಶದ ಅನೇಕ ಅದ್ಭುತ ಶಿಲ್ಪಗಳನ್ನು ನಿರ್ಮಿಸಿ ‘ಪ್ರತಿಮೆಗಳ ಮನುಷ್ಯ’ ಎಂದೇ ಖ್ಯಾತರಾಗಿದ್ದರು. ವಿಶ್ವದ ಅತಿ ಎತ್ತರದ (182 ಮೀ.) ಪ್ರತಿಮೆಯಾಗಿರುವ ಗುಜರಾತ್‌ನಲ್ಲಿನ ಸರ್ದಾರ್ ವಲ್ಲಭಭಾಯಿ ಪಟೇಲರ ಏಕತಾ ಪ್ರತಿಮೆ, ದೆಹಲಿಯ ಸಂಸತ್ ಭವನದಲ್ಲಿ ಧ್ಯಾನಸ್ಥ ಸ್ಥಿತಿಯಲ್ಲಿರುವ ಮಹಾತ್ಮ ಗಾಂಧಿಯವರ ಪ್ರತಿಮೆ, ದೇಶದ ಅನೇಕ ಕಡೆಗಳಲ್ಲಿ ಡಾ. ಬಿ. ಆರ್. ಅಂಬೇಡ್ಕರ್, ಶಿವಾಜಿ ಮಹಾರಾಜರಂಥ ರಾಷ್ಟ್ರೀಯ ನಾಯಕರ ಪ್ರತಿಮೆಗಳನ್ನು ನಿರ್ಮಿಸಿದ್ದರು. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಕೆಂಪೇಗೌಡರ ವಿಗ್ರಹವನ್ನೂ ಸುತಾರ್ ಅವರೇ ನಿರ್ಮಿಸಿದ್ದಾರೆಂಬುದು ವಿಶೇಷ.
ಸಾಮಾನ್ಯ ಹಿನ್ನೆಲೆಯಿಂದ ಬಂದು ಸಾಧನೆ:
ಮಹಾರಾಷ್ಟ್ರದ ಧುಲೆ ಜಿಲ್ಲೆಯ ಗೊಂಡೂರ್ ಗ್ರಾಮದಲ್ಲಿ 1925ರ ಫೆ.19ರಂದು ಜನಿಸಿದ ಸುತಾರ್, ಅತ್ಯಂತ ಸಾಮಾನ್ಯ ಕುಟುಂಬದಿಂದ ಬಂದವರು. ಮುಂಬೈನ ಸರ್ ಜೆ.ಜೆ. ಸ್ಕೂಲ್ ಆಫ್ ಆರ್ಟ್‌ನಲ್ಲಿ ಚಿನ್ನದ ಪದಕ ಪಡೆದು, ಚಿಕ್ಕಂದಿನಲ್ಲೇ ಕಲಾವಿದನಾಗಿ ಭರವಸೆ ಮೂಡಿಸಿದ್ದರು. ಮುಂದೆ ಉತ್ತರ ಪ್ರದೇಶದ ನೊಯ್ಡಾಕ್ಕೆ ಬಂದು ನೆಲೆಸಿ, ವಿಶ್ವವೇ ಗುರುತಿಸುವಂತಹ ಶಿಲ್ಪಿಯಾಗಿ ಬೆಳೆದರು.
ಹಲವು ಪ್ರಶಸ್ತಿಗಳಿಗೆ ಭಾಜನ:
ರಾಮ್ ಸುತಾರ್ ಅವರ ಸಾಧನೆಗೆ ಹಲವು ಪ್ರಶಸ್ತಿ, ಪುರಸ್ಕಾರಗಳು ಅರಸಿ ಬಂದಿವೆ. ಭಾರತ ಸರ್ಕಾರ ಕೊಡಮಾಡುವ ಪದ್ಮಶ್ರೀ, ಪದ್ಮ ಭೂಷಣ ಪ್ರಶಸ್ತಿ ಹಾಗೂ ಮಹಾರಾಷ್ಟ್ರ ಸರ್ಕಾರ ಕೊಡುವ ಮಹಾರಾಷ್ಟ್ರ ಭೂಷಣ ಸೇರಿ ನೂರಾರು ಪ್ರತಿಷ್ಠಿತ ಪ್ರಶಸ್ತಿಗಳು ಇವರ ಮುಡಿಗೇರಿವೆ.
ಪ್ರಧಾನಿ ಮೋದಿ ಸಂತಾಪ:
ಸುತಾರ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ‘ಏಕತಾ ಪ್ರತಿಮೆ ಸೇರಿದಂತೆ ಭಾರತಕ್ಕೆ ಹಲವು ಅಪ್ರತಿಮ ಶಿಲ್ಪಗಳನ್ನು ನೀಡಿದ ಅದ್ಭುತ ಶಿಲ್ಪಿ ಶ್ರೀ ರಾಮ್ ಸುತಾರ್ ಜಿ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಅವರ ಶಿಲ್ಪಗಳು ಕಲಾವಿದರು ಮತ್ತು ನಾಗರಿಕರಿಗೆ ಸದಾಕಾಲ ಸ್ಫೂರ್ತಿದಾಯಕವಾಗಿರುತ್ತವೆ. ಅವರ ನಿಧನಕ್ಕೆ ನನ್ನ ಸಂತಾಪಗಳು. ಓಂ ಶಾಂತಿ’ ಎಂದು ಟ್ವೀಟ್ ಮಾಡಿದ್ದಾರೆ.