8889 ಕೋಟಿ ರು. ಚುನಾವಣಾ ಅಕ್ರಮ ಪತ್ತೆ!

| Published : May 19 2024, 01:48 AM IST / Updated: May 19 2024, 05:11 AM IST

ಸಾರಾಂಶ

ಚುನಾವಣೆ ಅಕ್ರಮ ತಡೆಯಲು ಆಯೋಗ ಏನೆಲ್ಲಾ ಕ್ರಮ ಕೈಗೊಂಡರೂ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ತಮ್ಮ ಅಕ್ರಮ ಚಟುವಟಿಕೆ ಮುಂದುವರೆಸಿದ್ದು, ಲೋಕಸಭಾ ಚುನಾವಣೆಯಲ್ಲಿ ಇದುವರೆಗೂ 8889 ಕೋಟಿ ರು. ಅಕ್ರಮ ಪತ್ತೆಯಾಗಿದೆ.

ನವದೆಹಲಿ: ಚುನಾವಣೆ ಅಕ್ರಮ ತಡೆಯಲು ಆಯೋಗ ಏನೆಲ್ಲಾ ಕ್ರಮ ಕೈಗೊಂಡರೂ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ತಮ್ಮ ಅಕ್ರಮ ಚಟುವಟಿಕೆ ಮುಂದುವರೆಸಿದ್ದು, ಲೋಕಸಭಾ ಚುನಾವಣೆಯಲ್ಲಿ ಇದುವರೆಗೂ 8889 ಕೋಟಿ ರು. ಅಕ್ರಮ ಪತ್ತೆಯಾಗಿದೆ.

ಮತದಾರರಿಗೆ ಆಮಿಷ ಒಡ್ಡಲು ವಿವಿಧ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಇಟ್ಟುಕೊಂಡಿದ್ದ, ವಿತರಿಸುತ್ತಿದ್ದ 8889 ಕೋಟಿ ರು. ಮೊತ್ತದ ವಸ್ತುಗಳನ್ನು ದೇಶವ್ಯಾಪಿ ಚುನಾವಣಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ ಮಾದಕ ವಸ್ತು, ನಗದು, ಚಿನ್ನ, ಬೆಳ್ಳಿ, ಮದ್ಯ ಮತ್ತು ಇತರೆ ಉಡುಗೊರೆ ವಸ್ತುಗಳು ಸೇರಿವೆ.

ವಿಶೇಷವೆಂದರೆ ವಶಪಡಿಸಿಕೊಂಡು ವಸ್ತುಗಳ ಒಟ್ಟು ಮೊತ್ತದಲ್ಲಿ ಮಾದಕ ವಸ್ತುಗಳ ಪ್ರಮಾಣವೇ ಶೇ.45ರಷ್ಟಿದೆ. ಸುಮಾರು 3959 ಕೋಟಿ ರು.ಮೌಲ್ಯದ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ. ಉಳಿದಂತೆ 1260 ಕೋಟಿ ರು. ಮೌಲ್ಯದ ಚಿನ್ನ, ಬೆಳ್ಳಿ ಸೇರಿದಂತೆ ಬೆಲೆ ಬಾಳುವ ವಸ್ತುಗಳು, 849 ಕೋಟಿ ರು. ಮೌಲ್ಯದ ನಗದು, 815 ಕೋಟಿ ರು. ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ.