ಚೀನಾ ಮತ್ತು ಪಾಕಿಸ್ತಾನದ ಯುದ್ಧಕೌಶಲ್ಯಗಳ ನಿಪುಣ, ಲೆಫ್ಟಿನೆಂಟ್ ಜನರಲ್ ಎನ್.ಎಸ್.ರಾಜಾ ಸುಬ್ರಮಣಿ ಅವರು ಸಶಸ್ತ್ರಪಡೆಗಳ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಮೇ 30ರಂದು ಅಧಿಕಾರಾವಧಿ ಪೂರ್ಣಗೊಳಿಸಲಿರುವ ಜ।ಅನಿಲ್ ಚೌಹಾಣ್ ಜಾಗಕ್ಕೆ ಸುಬ್ರಮಣಿ ನೇಮಕಗೊಳ್ಳಲಿದ್ದಾರೆ.
ನವದೆಹಲಿ: ಚೀನಾ ಮತ್ತು ಪಾಕಿಸ್ತಾನದ ಯುದ್ಧಕೌಶಲ್ಯಗಳ ನಿಪುಣ, ಲೆಫ್ಟಿನೆಂಟ್ ಜನರಲ್ ಎನ್.ಎಸ್.ರಾಜಾ ಸುಬ್ರಮಣಿ ಅವರು ಸಶಸ್ತ್ರಪಡೆಗಳ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಮೇ 30ರಂದು ಅಧಿಕಾರಾವಧಿ ಪೂರ್ಣಗೊಳಿಸಲಿರುವ ಜ।ಅನಿಲ್ ಚೌಹಾಣ್ ಜಾಗಕ್ಕೆ ಸುಬ್ರಮಣಿ ನೇಮಕಗೊಳ್ಳಲಿದ್ದಾರೆ.ಸುಬ್ರಮಣಿ ಅವರು ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯದ ಸೇನಾ ಸಲಹೆಗಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ವರ್ಷದ ಜು.31ರಂದು ಉಪ ಸೇನಾ ಮುಖ್ಯಸ್ಥರಾಗಿ ಸುಬ್ರಮಣಿ ಅವರು ನಿವೃತ್ತರಾಗಿದ್ದರು. ಸುಬ್ರಮಣಿ ಅವರು ಮಿಲಿಟಲಿ ವ್ಯವಹಾರಗಳ ಇಲಾಖೆ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಲಿದ್ದಾರೆ ಎಂದು ರಕ್ಷಣಾ ಸಚಿವಾಲಯ ಶನಿವಾರ ತಿಳಿಸಿದೆ.ಚೀನಾ, ಪಾಕ್ ವ್ಯವಹಾರದಲ್ಲಿ ನಿಪುಣ:
ಸೇನೆಯಲ್ಲಿ ಸುಮಾರು 40 ವರ್ಷ ಸೇವೆ ಸಲ್ಲಿಸಿರುವ ಲೆಫ್ಟಿನೆಂಟ್ ಜನರಲ್ ಸುಬ್ರಮಣಿ ಅವರು ಸಶಸ್ತ್ರಪಡೆಗಳು ಉಪಮುಖ್ಯಸ್ಥರಾಗಿಯೂ ಒಂದು ವರ್ಷ ಸೇವೆ ಸಲ್ಲಿಸಿದ್ದರು. ಸೆಂಟ್ರಲ್ ಕಮಾಂಡ್‌ನ ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಆಗಿಯೂ ಕರ್ತವ್ಯ ನಿರ್ವಹಿಸಿದ್ದರು.ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ಇಂಡಿಯನ್ ಮಿಲಿಟರಿ ಅಕಾಡೆಮಿ ಹಳೆ ವಿದ್ಯಾರ್ಥಿಯಾಗಿರುವ ಸುಬ್ರಮಣಿ ಅವರು ಗರ್ವಾಲ್ ರೈಫಲ್ಸ್‌ನ ಮೂಲಕ ಸೇನೆಗೆ 1985ರಲ್ಲಿ ದೇಶ ಸೇವೆ ಆರಂಭಿಸಿದವರು. ಮಾಸ್ಟರ್ ಆಫ್ ಆರ್ಟ್ಸ್ ಡಿಗ್ರಿ, ಮದ್ರಾಸ್ ವಿವಿಯಲ್ಲಿ ಡಿಫೆನ್ಸ್ ಸ್ಟಡೀಸ್‌ನಲ್ಲಿ ಎಂಫಿಲ್ ಪಡೆದಿರುವ ಅವರು, ಅಸ್ಸಾಂ, ಜಮ್ಮು ಮತ್ತು ಕಾಶ್ಮೀರ ಸೇರಿ ದೇಶದ ವಿವಿಧೆಡೆ ಕರ್ತವ್ಯ ನಿರ್ವಹಿಸಿದ್ದಾರೆ.ಸುಬ್ರಮಣಿ ಅವರು ಪಶ್ಚಿಮ (ಪಾಕ್) ಮತ್ತು ಉತ್ತರದ (ಚೀನಾ) ಗಡಿಪ್ರದೇಶಗಳು, ಸೇನಾ ಕಾರ್ಯಾಚರಣೆಗಳ ಕುರಿತು ಅಗಾಧವಾದ ಜ್ಞಾನ ಹೊಂದಿದ್ದಾರೆ. ಪರಮ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ, ಸೇನಾ ಪದಕ, ವಿಶಿಷ್ಟ ಸೇವಾ ಪದಕ ಸೇರಿ ಹಲವು ಸೇನಾ ಗೌರವಗಳಿಗೆ ಪಾತ್ರರಾಗಿದ್ದಾರೆ.
------------------------ನೌಕಾಪಡೆಗೆ ಸ್ವಾಮಿನಾಥನ್ ನೂತನ ಮುಖ್ಯಸ್ಥ
- ಎಲೆಕ್ಟ್ರಾನಿಕ್ ಯುದ್ಧಕೌಶಲ್ಯ ಪರಿಣತನವದೆಹಲಿ: ನೌಕಾಪಡೆಯ ಹೊಸ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಅವರು ನೇಮಕಗೊಂಡಿದ್ದಾರೆ. ಹಾಲಿ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕುಮಾರ್ ತ್ರಿಪಾಠಿ ಅವರ ಸೇವಾವಧಿ ಮೇ 31ರಂದು ಕೊನೆಗೊಳ್ಳಲಿದ್ದು, ಅವರಿಂದ ತೆರವಾಗಲಿರುವ ಸ್ಥಾನಕ್ಕೆ ಕೃಷ್ಣ ಸ್ವಾಮಿನಾಥನ್ ನೇಮಕಗೊಂಡಿದ್ದಾರೆ.
ಸದ್ಯ ಸ್ವಾಮಿನಾಥನ್ ಅವರು ವೆಸ್ಟರ್ನ್ ನೇವಲ್ ಕಮಾಂಡ್‌ನ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಆಫ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. 1981ರಲ್ಲಿ ನೌಕಾಪಡೆಗೆ ಸೇರ್ಪಡೆಯಾಗಿರುವ ಕೃಷ್ಣ ಸ್ವಾಮಿನಾಥನ್ ಅವರು ಸಂವಹನ ಮತ್ತು ಎಲೆಕ್ಟ್ರಾನಿಕ್ ಯುದ್ಧಕೌಶಲ್ಯ ಪರಿಣಿತರು. ಖಡಕ್ವಾಸ್ಲಾದ ರಾಷ್ಟ್ರೀಯ ಡಿಫೆನ್ಸ್ ಅಕಾಡೆಮಿ, ಅಮೆರಿಕ, ಬ್ರಿಟನ್‌ನ ಕಾಲೇಜುಗಳಲ್ಲಿ ಶಿಕ್ಷಣ ಪಡೆದಿರುವ ಕೃಷ್ಣ ಸ್ವಾಮಿನಾಥನ್ ಅವರು ಐಎನ್‌ಎಸ್ ವಿದ್ಯುತ್, ಐಎನ್‌ಎಸ್ ವಿನಾಶ್, ಐಎನ್‌ಎಸ್ ಕುಲಿಶ್, ಐಎನ್‌ಎಸ್ ಮೈಸೂರು, ಐಎನ್‌ಎಸ್ ವಿಕ್ರಮಾದಿತ್ಯವನ್ನು ಮುನ್ನಡೆಸಿದ್ದಾರೆ.ಪರಮ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ ಮತ್ತು ವಿಶಿಷ್ಟ ಸೇವಾ ಪದಕ ಪಡೆದಿರುವ ಕೃಷ್ಣ ನೌಕಾಪಡೆಯಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ ಅನುಭವ ಹೊಂದಿದ್ದಾರೆ.