ಪ್ಯಾರಿಸ್‌: ಕಳೆದ ವರ್ಷ ಫ್ರಾನ್ಸ್ ಅಧ್ಯಕ್ಷ ಎಮ್ಯಾನುವೆಲ್‌ ಮ್ಯಾಕ್ರನ್‌ಗೆ ಅವರ ಪತ್ನಿ ಬ್ರಿಗೆಟ್ಟಿ ವಿಮಾನದೊಳಗೆ ಕಪಾಳಮೋಕ್ಷ ಮಾಡಿದ್ದಕ್ಕೆ ಇರಾನ್‌ ನಟಿ ಜೊತೆಗಿನ ಮ್ಯಾಕ್ರಾನ್‌ ಸಂಬಂಧ ಕಾರಣ ಎಂಬ ವಿಷಯ ಬೆಳಕಿಗೆ ಬಂದಿದೆ. ವಿಯೆಟ್ನಾಂ ಪ್ರವಾಸಕ್ಕೆ ತೆರಳಿದ್ದ ವೇಳೆ ಇರಾನ್‌ ನಟಿ ಫರ್ಹಾನಿ ಜೊತೆ ಮ್ಯಾಕ್ರಾನ್‌ ಮೊಬೈಲ್‌ ಸಂಭಾಷಣೆ ನಡೆಸಿ ಪತ್ನಿ ಬ್ರಿಗೆಟ್ಟೆ ಕೈಯಲ್ಲಿ ಸಿಕ್ಕಿಬಿದ್ದರು, ಇದರಿಂದ ಸಿಟ್ಟಿಗೆದ್ದಿದ್ದ ಬ್ರೆಗೆಟ್ಟಿ ವಿಯೆಟ್ನಾಂ ಏರ್‌ಪೋರ್ಟ್‌ನಲ್ಲಿ ವಿಮಾನದಿಂದ ಕೆಳಗಿಳಿಯುವ ಮುನ್ನ ಮ್ಯಾಕ್ರನ್‌ ಕೆನ್ನೆಗೆ ಬಾರಿಸಿದ್ದರು ಎಂದು ಫ್ರೆಂಚ್ ಪತ್ರಕರ್ತೆ ಫ್ಲೋರಿಯನ್ ಟಾರ್ಡಿಫ್ ಅವರ ‘ಆನ್ (ಆಲ್ಮೋಸ್ಟ್‌)ಪರ್ಫೆಕ್ಟ್‌ ಕಪಲ್‌’ ಎನ್ನುವ ಪುಸ್ತಕದಲ್ಲಿ ಪ್ರಸ್ತಾಪಿಸಲಾಗಿದೆ.

==

ವಂಚನೆ ಆರೋಪದ ಕೇಸಲ್ಲಿ ಅದಾನಿಗೆ ಅಮೆರಿಕ ಕ್ಲೀನ್‌ಚಿಟ್‌?

ನವದೆಹಲಿ: ಏಷ್ಯಾದ ನಂ.1 ಸಿರಿವಂತ, ಉದ್ಯಮಿ ಗೌತಮ್‌ ಅದಾನಿ ವಿರುದ್ಧ 2024ರಲ್ಲಿ ಅಮೆರಿಕದಲ್ಲಿ ದಾಖಲಾಗಿದ್ದ 2100 ಕೋಟಿ ರು. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್‌ ಪ್ರಕರಣವನ್ನು ಕೈಬಿಡಲು ಅಮೆರಿಕದ ನಿರ್ಧರಿಸಿದೆ. ದೇಶದ ಅತಿದೊಡ್ಡ ಸೌರಶಕ್ತಿ ಯೋಜನೆಗೆ ಸಂಬಂಧಿಸಿದಂತೆ ಅವ್ಯವಹಾರ ನಡೆಸಿದ ಆರೋಪ, ಅದಾನಿ, ಅವರ ಸೋದರಳಿಯ ಸೇರಿ ಕೆಲವರ ವಿರುದ್ಧ ಕೇಳಿ ಬಂದಿತ್ತು. ವಂಚನೆ ಕೇಸ್‌ ದಾಖಲಾಗಿ ತನಿಖೆ ನಡೆಯುತ್ತಿತ್ತು. ಆದರೆ ಇದೀಗ ಅಮೆರಿಕದ ನ್ಯಾಯಾಂಗ ಇಲಾಖೆ ಅದಾನಿ ಮೇಲೆ ಹೊರಿಸಿದ್ದ ಆರೋಪಗಳನ್ನು ಹಿಂಪಡೆಯಲು ನಿರ್ಧರಿಸಿದೆ ಎಂದು ಬ್ಲೂಮ್‌ಬರ್ಗ್‌ ವರದಿ ಮಾಡಿದೆ.


==

ತ.ನಾಡು: 21 ವರ್ಷ ಒಳಗಿನವರಿಗೆ ಮದ್ಯ ಖರೀದಿ, ಸೇವನೆ ಬ್ಯಾನ್‌

ರಾತ್ರಿ 8ಕ್ಕೆ ಅಂಗಡಿ ಬಂದ್‌ ಬಗ್ಗೆ ಚಿಂತನೆ

ಚೆನ್ನೈ: ಅಪ್ರಾಪ್ತರಲ್ಲಿ ಹೆಚ್ಚುತ್ತಿರುವ ಮದ್ಯ ಸೇವನೆಯನ್ನು ತಡೆಗಟ್ಟುವ ಉದ್ದೇಶದಿಂದ ವಿಜಯ್‌ ನೇತೃತ್ವದ ತಮಿಳುನಾಡು ಸರ್ಕಾರ ಮದ್ಯ ಖರೀದಿ ಮತ್ತು ಸೇವನೆಗೆ ಇರುವ 21 ವರ್ಷಗಳ ಕನಿಷ್ಠ ವಯೋಮಿತಿ ನೀತಿಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಿ ಗುರುವಾರ ಆದೇಶ ಹೊರಡಿಸಿದೆ. ಶಾಲೆ, ದೇಗುಲಗಳ ಸುತ್ತಮುತ್ತಲ 717 ಮದ್ಯದಂಗಡಿಗಳನ್ನು ಬಂದ್‌ ಮಾಡುವ ಆದೇಶ ನೀಡಿದ ಬೆನ್ನಲ್ಲೇ, ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಎಲ್ಲಾ ಗ್ರಾಹಕರಿಗೆ ಆಧಾರ್ ಕಾರ್ಡ್ ಸೇರಿದಂತೆ ಗುರುತಿನ ಪುರಾವೆಗಳನ್ನು ಪರಿಶೀಲಿಸಿ, ಮದ್ಯ ವಿತರಿಸುವಂತೆ ಮದ್ಯದಂಗಡಿಗಳ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಪ್ರಸ್ತುತ ರಾಜ್ಯದಲ್ಲಿ ಮಧ್ಯಾಹ್ನ 12ರಿಂದ ರಾತ್ರಿ 10ರವರೆಗೆ ಮದ್ಯದಂಗಡಿ ತೆರೆಯಲು ಅನುಮತಿಯಿದೆ. ಇದನ್ನು ರಾತ್ರಿ 8ಕ್ಕೆ ಇಳಿಸುವ ಚಿಂತನೆಯನ್ನೂ ಸರ್ಕಾರ ನಡೆಸುತ್ತಿದೆ.

==

ಪ.ಬಂಗಾಳ ಶಾಲೆಗಳಲ್ಲಿ ಬೆಳಗಿನ ಪ್ರಾರ್ಥನೆ ವೇಳೆ ವಂದೇ ಗಾಯನ ಕಡ್ಡಾಯ

ಕೋಲ್ಕತಾ: ಪಶ್ಚಿಮ ಬಂಗಾಳದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ಬೆಳಗಿನ ಪ್ರಾರ್ಥನೆ ವೇಳೆ ವಂದೇ ಮಾತರಂ ಹಾಡುವುದನ್ನು ಕಡ್ಡಾಯಗೊಳಿಸಿ ಸಿಎಂ ಸುವೇಂದು ಅಧಿಕಾರಿ ನೇತೃತ್ವದ ರಾಜ್ಯ ಸರ್ಕಾರ ಆದೇಶಿಸಿದೆ.ವಿಧಾನಸಭೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ ಅಧಿಕಾರಿ ಈ ಬಗ್ಗೆ ಮಾತನಾಡಿದ್ದಾರೆ. ‘ಸೋಮವಾರದಿಂದಲೇ ಈ ಕಾನೂನು ಜಾರಿಯಾಗಲಿದೆ. ಎಲ್ಲಾ ಶಾಲೆಗಳು ಇದನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದಿದ್ದಾರೆ. ಇತ್ತೀಚೆಗಷ್ಟೇ ರಾಷ್ಟ್ರೀಯ ಗೀತೆ ವಂದೇ ಮಾತರಂ ರಚನೆಯಾಗಿ 150 ವರ್ಷ ಪೂರೈಸಿದ ಬೆನ್ನಲ್ಲೇ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ.

==

ಮತಪಟ್ಟೀಲಿ ಹೆಸರು ಇಲ್ದಿದ್ರೆ ಸೌಲಭ್ಯ ಕಟ್: ಬಿಹಾರ, ಬಂಗಾಳ ಕ್ರಮ

ನವದೆಹಲಿ: ಚುನಾವಣಾ ಆಯೋಗ ನಡೆಸಿದ ವಿಶೇಷ ಮತಪಟ್ಟಿ ಪರಿಷ್ಕರಣೆ ಬಳಿಕ ಮತಪಟ್ಟಿಯಿಂದ ತೆಗೆದುಹಾಕಲ್ಪಟ್ಟಿರುವವರಿಗೆ ಸರ್ಕಾರಿ ಸೌಲಭ್ಯ ಕಡಿತಗೊಳಿಸಲು ಪಶ್ಚಿಮ ಬಂಗಾಳ ಮತ್ತು ಬಿಹಾರ ಬಿಜೆಪಿ ಸರ್ಕಾರಗಳು ನಿರ್ಧರಿಸಿವೆ. ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೇರಿದ ಬೆನ್ನಲ್ಲೇ, ಮತಪಟ್ಟಿಯಲ್ಲಿ ಹೆಸರಿರದವರಿಗೆ ಸರ್ಕಾರದ ಕಲ್ಯಾಣ ಯೋಜನೆ ಪಡೆಯುವ ಅರ್ಹತೆ ಇರುವುದಿಲ್ಲ’ ಎಂದು ಸುವೇಂದು ಅಧಿಕಾರಿ ಹೇಳಿದ್ದರು. ಇದರ ಬೆನ್ನಲ್ಲೇ ಬಿಹಾರದಲ್ಲಿ ಸಾಮ್ರಾಟ್ ಚೌಧರಿ ನೇತೃತ್ವದ ಸರ್ಕಾರ ಕೂಡ ಇದೇ ಕ್ರಮ ಕೈಗೊಂಡಿದ್ದು, ಮತದಾನದ ಹಕ್ಕು ಇಲ್ಲದವರನ್ನು ಪಡಿತರ ಮತ್ತು ಕಲ್ಯಾಣ ಯೋಜನೆಗಳಿಂದ ಕೈಬಿಟ್ಟಿದೆ.