ಸಾರಾಂಶ
ಮುಂಬೈ: ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ತಮ್ಮ ಸೋದರಿ ಹಾಗೂ ಸಂಸದೆ ಸುಪ್ರಿಯಾ ಸುಳೆ ವಿರುದ್ಧ ತಮ್ಮ ಪತ್ನಿ ಸುನೇತ್ರಾ ಪವಾರ್ ಅವರನ್ನು ಕಣಕ್ಕಿಳಿಸಿ ತಪ್ಪು ಮಾಡಿಬಿಟ್ಟೆ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಹಾಗೂ ಎನ್‌ಸಿಪಿ (ಅಜಿತ್ ಬಣ) ಮುಖ್ಯಸ್ಥ ಅಜಿತ್ ಪವಾರ್ ಮಂಗಳವಾರ ಪಶ್ಚಾತ್ತಾಪ ಪಟ್ಟರು.
ಮಾಧ್ಯಮದೊಂದಿಗೆ ಮಾತನಾಡಿ, ‘ನನ್ನ ಸೋದರಿ ಅಂದ್ರೆ ನನಗೆ ತುಂಬಾ ಇಷ್ಟ. ಚುನಾವಣೆಯಲ್ಲಿ ಆಕೆಯ ವಿರುದ್ಧ ನಾನು, ನನ್ನ ಪತ್ನಿಯನ್ನು ಕಣಕ್ಕಿಳಿಸಿದ್ದೆ. ಈ ರೀತಿ ಮಾಡಬಾರದಿತ್ತು. ಆದರೆ ನಮ್ಮ ಪಕ್ಷದ ಸಂಸದೀಯ ಮಂಡಳಿ ಇದನ್ನು ನಿರ್ಧರಿಸಿತ್ತು. ಆದರೆ ಈಗ ಅದು ತಪ್ಪು ನಿರ್ಧಾರವೆಂದು ನನಗೆ ಅರಿವಾಗಿದೆ’ ಎಂದರು.ಬಾರಾಮತಿ ಲೋಕಸಭೆ ಕ್ಷೇತ್ರದಿಂದ ಅಜಿತ್ ಪತ್ನಿ ಸುನೇತ್ರಾ ಪವಾರ್, ಸುಪ್ರಿಯಾ ಸುಳೆ ವಿರುದ್ಧ ಸ್ಪರ್ಧಿಸಿ ಸೋತಿದ್ದರು.
==ಸೆನ್ಸೆಕ್ಸ್ 692 ಅಂಕ ಕುಸಿತ: ಹೂಡಿಕೆದಾರರಿಗೆ ₹4.5 ಲಕ್ಷ ಕೋಟಿ ನಷ್ಟಮುಂಬೈ: ಹಿಂಡನ್‌ಬರ್ಗ್ ವರದಿಯ ಬೆನ್ನಲ್ಲೇ ಸತತ 2ನೇ ದಿನವೂ ಇಳಿಕೆ ಕಂಡಿರುವ ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಮಂಗಳವಾರ 692 ಅಂಕಗಳು ಕುಸಿತ ಕಂಡಿದ್ದು, 78,956 ಅಂಕದಲ್ಲಿ ಮುಕ್ತಾಯವಾಗಿದೆ. ನಿಫ್ಟಿ ಕೂಡ 208 ಅಂಕ ಕುಸಿದು 24139 ಅಂಕಗಳಲ್ಲಿ ಮುಕ್ತಾಯವಾಗಿದೆ. ವಿದೇಶಿ ಸಾಂಸ್ಥಿಕೆ ಹೂಡಿಕೆದಾರರು ಭಾರೀ ಪ್ರಮಾಣದಲ್ಲಿ ಷೇರು ಮಾರಾಟಕ್ಕೆ ಮುಂದಾಗಿದ್ದು ಸೂಚ್ಯಂಕ ಕುಸಿತಕ್ಕೆ ಕಾರಣವಾಗಿದೆ. ಮಂಗಳವಾರದ ಭಾರೀ ಕುಸಿತ ಕಾರಣ ಷೇರುಪೇಟೆ ಹೂಡಿಕೆದಾರರಿಗೆ ಒಂದೇ ದಿನ 4.52 ಲಕ್ಷ ಕೋಟಿ ರು.ನಷ್ಟು ನಷ್ಟವಾಗಿದೆ.
==ಧ್ವಜ ಹಾರಿಸಲು ಆತಿಶಿಗೆ ಅನುಮತಿ ನಕಾರ: ಕೈಲಾಶ್‌ಗೆ ಅಸ್ತು
ನವದೆಹಲಿ: ಸ್ವಾತಂತ್ರ್ಯ ದಿನಾಚರಣೆ ವೇಳೆ ದಿಲ್ಲಿ ಸರ್ಕಾರದ ವತಿಯಿಂದ ರಾಷ್ಟ್ರಧ್ವಜ ಹಾರಿಸಲು ಆಪ್ ಸಚಿವೆ ಆತಿಶಿಗೆ ಅನುಮತಿ ನಿರಾಕರಿಸಿರುವ ಉಪ ರಾಜ್ಯಪಾಲ ವಿ.ಕೆ.ಸಕ್ಸೇನಾ, ಇನ್ನೊಬ್ಬ ಸಚಿವ ಕೈಲಾಶ್ ಗೆಹ್ಲೋಟ್ ಅವರನ್ನು ಧ್ವಜಾರೋಹಣಕ್ಕೆ ನಾಮನಿರ್ದೇಶನ ಮಾಡಿದ್ದಾರೆ.ಸಿಎಂ ಅರವಿಂದ ಕೇಜ್ರಿವಾಲ್ ತಾವು ಜೈಲಲ್ಲಿರುವ ಕಾರಣ, ತಮ್ಮ ಬದಲು ಆತಿಶಿಗೆ ಧ್ವಜ ಹಾರಿಸಲು ಅಧಿಕಾರ ನೀಡಿದ್ದರು. ಆದರೆ ಕೇಜ್ರಿವಾಲ್‌ಗೆ ಜೈಲಿನಿಂದ ಹೀಗೆ ಸೂಚಿಸುವ ಅಧಿಕಾರವಿಲ್ಲ. ಇದು ಅಸಿಂಧು ಎಂದು ಉಪರಾಜ್ಯಪಾಲರ ಕಚೇರಿ, ತಿಹಾರ್ ಜೈಲು ಹಾಗೂ ಸಾಮಾನ್ಯ ಆಡಳಿತ ಇಲಾಖೆ ಅಧಿಕಾರಿಗಳು ಹೇಳಿದ್ದರು. ಇದರ ಬೆನ್ನಲ್ಲೇ ಕೈಲಾಶ್‌ಗೆ ಧ್ವಜಾರೋಹಣದ ಅನುಮತಿಯನ್ನು ಸಕ್ಸೇನಾ ನೀಡಿದ್ದಾರೆ.