ಸಾರಾಂಶ
ನವದೆಹಲಿ: ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣವಾಗಿದ್ದ ಪಂಚ ಗ್ಯಾರಂಟಿ ಯೋಜನೆಗಳನ್ನು, ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲೂ ಗೆಲುವಿನ ಅಸ್ತ್ರವಾಗಿ ಬಳಸಲು ಕಾಂಗ್ರೆಸ್ ಮುಂದಾಗಿದೆ.
ಮಹಿಳೆಯರಿಗೆ ಮಾಸಿಕ 2000 ರು. ನೀಡುವ ಗೃಹಲಕ್ಷ್ಮೀ, ಮಾಸಿಕ ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ, ಅರ್ಹ ಯುವಸಮೂಹಕ್ಕೆ ಹಣಕಾಸಿನ ನೆರವು ನೀಡುವ ಯುವನಿಧಿ, ಉಚಿತ ಆಹಾರಧಾನ್ಯ ನೀಡುವ ಅನ್ನಭಾಗ್ಯ ಮತ್ತು ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡುವ ಶಕ್ತಿ ಯೋಜನೆ ಕುರಿತ ಕರ್ನಾಟಕ ಕಾಂಗ್ರೆಸ್‌ನ ಚುನಾವಣಾ ಭರವಸೆ ಸಮಾಜದ ಬಹುತೇಕ ವಲಯಗಳನ್ನು ತಲುಪುವಲ್ಲಿ ಯಶಸ್ವಿಯಾಗಿತ್ತು. ಜೊತೆಗೆ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರುವಲ್ಲಿ ಅದು ಪ್ರಮುಖ ಕಾರಣವಾಗಿತ್ತು.
ತದನಂತರದಲ್ಲಿ ನಡೆದ ಹಲವು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲೂ ವಿವಿಧ ರಾಜಕೀಯ ಪಕ್ಷಗಳು ಇದೇ ಮಾದರಿ ಭರವಸೆ ನೀಡಿ ಮತದಾರರ ಗಮನ ಸೆಳೆದಿದ್ದವು.
ಹೀಗಾಗಿ ಇದೇ ಮಾದರಿಯನ್ನು ಮಹಾರಾಷ್ಟ್ರದಲ್ಲೂ ಬಳಸಲು ಕಾಂಗ್ರೆಸ್ ನಾಯಕತ್ವ ಚಿಂತಿಸಿದೆ ಎಂದು ಮೂಲಗಳು ತಿಳಿಸಿವೆ.