ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿವಾದದಿಂದ ಭಾರೀ ಮುಜುಗರಕ್ಕೆ ಒಳಗಾಗಿರುವ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ನಡೆಸಿದ ಕಂಪ್ಯೂಟರ್ ಆಧರಿತ ಸಿಯುಇಟಿ-ಯುಜಿ ಪರೀಕ್ಷೆಯಲ್ಲೂ ತಾಂತ್ರಿಕ ಸಮಸ್ಯೆ ಎದುರಾಗಿ ವಿದ್ಯಾರ್ಥಿಗಳು ಪರದಾಡುವಂತಾದ ಘಟನೆ ಶನಿವಾರ ನಡೆದಿದೆ
ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿವಾದದಿಂದ ಭಾರೀ ಮುಜುಗರಕ್ಕೆ ಒಳಗಾಗಿರುವ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ನಡೆಸಿದ ಕಂಪ್ಯೂಟರ್ ಆಧರಿತ ಸಿಯುಇಟಿ-ಯುಜಿ ಪರೀಕ್ಷೆಯಲ್ಲೂ (ಕಾಮನ್ ಯೂನಿವರ್ಸಿಟಿ ಎಂಟ್ರನ್ಸ್ ಎಕ್ಸಾಂ) ತಾಂತ್ರಿಕ ಸಮಸ್ಯೆ ಎದುರಾಗಿ ವಿದ್ಯಾರ್ಥಿಗಳು ಪರದಾಡುವಂತಾದ ಘಟನೆ ಶನಿವಾರ ನಡೆದಿದೆ. ಹೀಗಾಗಿ ಕೆಲ ಕೇಂದ್ರಗಳಲ್ಲಿ ಪರೀಕ್ಷೆಯನ್ನೇ ರದ್ದು ಮಾಡಲಾಗಿದೆ.
2 ಗಂಟೆ ವಿಳಂಬ:
ದೇಶಾದ್ಯಂತ ಕೇಂದ್ರೀಯ ವಿವಿಗಳಿಗೆ ಪ್ರವೇಶ ಪಡೆಯಲು ಆಯೋಜಿಸಿದ್ದ ಕಂಪ್ಯೂಟರ್ ಆಧರಿತ ಸಿಯುಇಟಿ ಪರೀಕ್ಷೆ ವೇಳೆ ಕೆಲ ಕೇಂದ್ರಗಳಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು, ಇದರಿಂದ ಬೆಳಗ್ಗೆ 9 ಗಂಟೆಗೆ ಆರಂಭವಾಗಬೇಕಿದ್ದ ಮೊದಲ ಸುತ್ತಿನ ಪರೀಕ್ಷೆ ಸುಮಾರು 2 ಗಂಟೆ ವಿಳಂಬವಾಗಿ ನಡೆಯಿತು. ಕೆಲ ಕೇಂದ್ರಗಳಲ್ಲಿ ಪರೀಕ್ಷೆಯನ್ನೇ ರದ್ದು ಮಾಡಬೇಕಾಯಿತು.
ಪರೀಕ್ಷೆಗೆ ಸಹಯೋಗ ನೀಡಿದ್ದ ಟಿಸಿಎಸ್ ಕಂಪನಿ ಕಡೆಯಿಂದ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆಯಿಂದಾಗಿ ಈ ಗೊಂದಲ ಸೃಷ್ಟಿಯಾಯಿತು ಎಂದು ಎನ್‌ಟಿಎ ತಿಳಿಸಿದೆ.
ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಹೆಚ್ಚಿನ ಸಮಯಾವಕಾಶ ನೀಡಲಾಗಿದೆ. ಮಧ್ಯಾಹ್ನ 3 ಗಂಟೆಗೆ ನಡೆಯಬೇಕಿದ್ದ 2ನೇ ಪರೀಕ್ಷೆಯನ್ನು ಸಂಜೆ 4ರಿಂದ ನಡೆಸಲಾಗಿದೆ ಎಂದು ಸ್ಪಷ್ಟೀಕರಣ ನೀಡಿದೆ.
3,700 ವಿದ್ಯಾರ್ಥಿಗಳಿಗೆ ಮರುಪರೀಕ್ಷೆ:
ಶನಿವಾರ ಪರೀಕ್ಷೆ ವೇಳೆ ತಾಂತ್ರಿಕ ದೋಷ ಎದುರಾಗಿ ಪರೀಕ್ಷೆ ತಾತ್ಕಾಲಿಕವಾಗಿ ಸ್ಥಗಿತವಾಯಿತು. ಆದರೆ ಮಧ್ಯಾಹ್ನ 3 ಗಂಟೆಗೆ ಶುರುವಾಗಬೇಕಿದ್ದ ಶಿಫ್ಟ್-1 ಪರೀಕ್ಷೆಯನ್ನು, ದೋಷವನ್ನು ಸರಿಪಡಿಸಿ 4 ಗಂಟೆಗೆ ನಡೆಸಲಾಯಿತು. ಅಷ್ಟು ಹೊತ್ತಿನಲ್ಲಾಗಲೇ ಸುಮಾರು 3,700 ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಂದ ಹೊರನಡೆದಿದ್ದರು. ಈ ವಿದ್ಯಾರ್ಥಿಗಳಿಗೆ ಮರುಪರೀಕ್ಷೆ ವ್ಯವಸ್ಥೆ ಮಾಡಲಾಗುವುದು ಎಂದು ಎನ್‌ಟಿಎ ತಿಳಿಸಿದೆ.
ರಾಹುಲ್ ಕಿಡಿ:
ಪರೀಕ್ಷೆ ವಿಳಂಬಕ್ಕೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಾಕಿ ಆಕ್ರೋಶ ಹೊರಹಾಕಿರುವ ರಾಹುಲ್ ಗಾಂಧಿ, ‘ನೀಟ್, ಸಿಬಿಎಸ್‌ಇ, ಎಸ್‌ಎಸ್‌ಸಿ ಆಯ್ತು, ಇದೀಗ ಸಿಯುಇಟಿ ಹೀಗೆ ನಾಲ್ಕೂ ಪರೀಕ್ಷೆ ನಡೆಸುವಲ್ಲಿ ಸರ್ಕಾರ ವಿಫಲವಾಗಿದೆ. ವಿಶ್ವಗುರು ಎಂದು ಹೇಳಿಕೊಳ್ಳುವವರಿಗೆ ದೇಶದಲ್ಲಿ ಒಂದೇ ಒಂದು ಪರೀಕ್ಷೆ ನಡೆಸಲೂ ಆಗುತ್ತಿಲ್ಲ. ಮೋದಿ ಇಡೀ ಶಿಕ್ಷಣ ವ್ಯವಸ್ಥೆ ಹಾಳು ಮಾಡಿದ್ದಾರೆ. ನೀವು ಯಾವ ಪೀಳಿಗೆಯ ಭವಿಷ್ಯ ಹಾಳು ಮಾಡುತ್ತಿದ್ದೀರೋ ಅವರೇ ನಿಮ್ಮನ್ನು ಉತ್ತರದಾಯಿ ಮಾಡಲಿದ್ದಾರೆ’ ಎಂದು ಕಿಡಿ ಕಾರಿದ್ದಾರೆ.
ಪೋಷಕರಿಂದಲೂ ಆಕ್ರೋಶ:
ಪರೀಕ್ಷೆ ವಿಳಂಬ ಕುರಿತು ಕೆಲ ವಿದ್ಯಾರ್ಥಿಗಳು, ಪೋಷಕರಿಂದಲೂ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಬೆಳಗ್ಗೆ 9ಕ್ಕೆ ಆರಂಭವಾಗಬೇಕಿದ್ದ ಪರೀಕ್ಷೆ 11 ಗಂಟೆವರೆಗೂ ಆರಂಭವೇ ಆಗಿರಲಿಲ್ಲ. ಯಾರೂ ಸರಿಯಾಗಿ ಮಾಹಿತಿ ನೀಡಲಿಲ್ಲ. ಮಕ್ಕಳು ಪರೀಕ್ಷಾ ಕೇಂದ್ರದಲ್ಲೇ ಉಳಿಯಬೇಕಾಯಿತು. ಎರಡ್ಮೂರು ಗಂಟೆ ಪೋಷಕರು ಬಿಸಿಲಲ್ಲೇ ಕಾಯುವಂತಾಯಿತು ಎಂದು ಪೋಷಕರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ.
