ಹಾನಗಲ್ಲ ಇಲ್ಲಿಯ ಪರಿವರ್ತನ ಕಲಿಕಾ ಕೇಂದ್ರ ರಜಾ ಅವಧಿಯ ೪೫ ದಿನ ೯ನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಶಾಲಾ ಪೂರ್ವ ಉಚಿತ ತರಬೇತಿ ಕಾರ್ಯಕ್ರಮ ನಡೆಯಿತು.
ಹಾನಗಲ್ಲ: ಪರೀಕ್ಷೆ ಎದುರಿಸುವುದೆಂದರೆ ಯುದ್ಧಕಾಲದಲ್ಲಿ ಸಮರಾಭ್ಯಾಸ ಎಂಬಂತಾಗಬಾರದು. ಶಾಲಾರಂಭದಿಂದಲೇ ಪರೀಕ್ಷೆಗಾಗಿ ಕಾಳಜಿಯಿಂದ ಸಿದ್ಧತೆ ನಡೆಸಿದರೆ ಪರೀಕ್ಷೆಯನ್ನು ಒಂದು ಹಬ್ಬವಾಗಿ ಸ್ವೀಕರಿಸಲು ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ. ಚಿನ್ನೀಕಟ್ಟಿ ಹೇಳಿದರು.
ಇಲ್ಲಿಯ ಪರಿವರ್ತನ ಕಲಿಕಾ ಕೇಂದ್ರ ರಜಾ ಅವಧಿಯ ೪೫ ದಿನ ೯ನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ನಡೆದ ಎಸ್‌ಎಸ್‌ಎಲ್‌ಸಿ ಶಾಲಾ ಪೂರ್ವ ಉಚಿತ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಪರೀಕ್ಷೆಗೆ ಅಂಜುವ ಅಗತ್ಯವಿಲ್ಲ. ಪೂರ್ವ ತಯಾರಿಯಿಂದಾಗಿ ವಿಶ್ವಾಸ ಮೂಡುತ್ತದೆ. ಶಾಸಕ ಶ್ರೀನಿವಾಸ ಮಾನೆ ಅವರು ಕಳೆದ ೩ ವರ್ಷಗಳಿಂದ ರಜಾ ಅವಧಿಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಇಂತಹ ತರಬೇತಿ ನೀಡಲು ವ್ಯವಸ್ಥೆ ಮಾಡಿದ್ದಾರೆ. ಇದರಿಂದ ಬಹುಪಾಲು ಬಡ ಮಕ್ಕಳು ಇದರ ಪ್ರಯೋಜನ ಪಡೆದಿದ್ದಾರೆ. ಮುಂದಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶವನ್ನು ಹೆಚ್ಚಿಸಲು ತರಬೇತಿ ಹೆಚ್ಚು ಸಹಕಾರಿಯಾಗಿದೆ. ಆದರೆ ವಿದ್ಯಾರ್ಥಿಗಳು ಅಧ್ಯಯನವನ್ನು ನಿರಂತರವಾಗಿ ಮುಂದುವರಿಸಿ, ಪರೀಕ್ಷಾ ಭಯದಿಂದ ಮುಕ್ತವಾಗಬೇಕು ಎಂದರು.ತರಬೇತುದಾರ, ಶಿಕ್ಷಕ ಸಿ. ಪ್ರದೀಪಕುಮಾರ ಮಾತನಾಡಿ, ಇದು ಮಕ್ಕಳ ಮನಸ್ಸನ್ನು ಅರಳಿಸಿ ಅಧ್ಯಯನಶೀಲತೆಯನ್ನು ಜಾಗ್ರತ ಮಾಡುವ ಕಾರ್ಯವಾಗಿದೆ. ಗಣಿತ ಕಬ್ಬಿಣದ ಕಡಲೆ ಎಂದು ವಿಷಯವನ್ನು ದೂರಿಟ್ಟರೆ ಆಗದು. ಸರಿಯಾದ ತಿಳಿವಳಿಕೆಗೆ ಮುಂದಾಗಬೇಕು. ಕಲಿಕೆ ಯಾಂತ್ರಿಕವಾಗಬಾರದು. ಇತ್ತೀಚಿನ ದಿನಗಳಲ್ಲಿ ಶಿಕ್ಷಣ ವ್ಯವಹಾರವಾಗಿ ಪರಿವರ್ತನೆಯಾಗುತ್ತಿರುವುದು ವಿಷಾದದ ಸಂಗತಿ. ಗ್ರಾಮೀಣ ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡಿದಲ್ಲಿ ರಾಜ್ಯಕ್ಕೆ ಉನ್ನತ ಸ್ಥಾನ ತಂದುಕೊಡುವ ಶಕ್ತಿ ಅವರಲ್ಲಿದೆ. ವಿದ್ಯಾರ್ಥಿಗಳಲ್ಲಿ ಇಚ್ಛಾಶಕ್ತಿ ಇದ್ದರೆ ಸಾಧಕರಾಗಿ ಹೊರಹೊಮ್ಮಲು ಸಾಧ್ಯ ಎಂದರು.
ಶಿಕ್ಷಕರಾದ ಶಂಭುಲಿಂಗ ನೀಲಗುಂದ, ಸಂತೋಷ ಬೆಳವತ್ತಿ ಮಾತನಾಡಿ, ಗುರು ಶಿಷ್ಯರಲ್ಲಿ ಶೈಕ್ಷಣಿಕ ಸಾಮರಸ್ಯ ಬೇಕು. ಮನಃಶುದ್ಧಿಯಿಂದ ಸಕಾರಾತ್ಮಕ ಚಿಂತನೆ ವಿದ್ಯಾರ್ಥಿಗಳಲ್ಲಿರುಬೇಕು. ಒಳ್ಳೆಯದನ್ನು ಅನುಸರಿಸೋಣ. ನಾಳೆಗಾಗಿ ಇಂದೇ ಸಿದ್ಧರಾಗೋಣ. ನಮ್ಮ ಹವ್ಯಾಸ, ಆಸಕ್ತಿಗಳು ನಮ್ಮ ಒಳಿತಿಗಾಗಿಯೇ ಇರಲಿ. ಇದು ಸ್ಪರ್ಧಾತ್ಮಕ ಯುಗ ಎಂಬ ಎಚ್ಚರಿಕೆಯೂ ಬೇಕು ಎಂದರು.ಪರಿವರ್ತನ ಕಲಿಕಾ ಕೇಂದ್ರದ ಆಡಳಿತಾಧಿಕಾರಿ ಪ್ರೊ. ಮಾರುತಿ ಶಿಡ್ಲಾಪೂರ ಅಧ್ಯಕ್ಷತೆವಹಿಸಿದ್ದರು. ಶಿಕ್ಷಣಾರ್ಥಿಗಳಾದ ಎಂ.ವಿ. ಪೂಜಾ, ಚೈತ್ರಾ ವಡ್ಡರ, ದೀಪಾ ವೀರಾಪುರ, ತನುಜಾಕ್ಷಿ ನೆಗಳೂರ, ಕೋಮಲಾ ಲಮಾಣಿ, ಯುವರಾಜ ತಳವಾರ, ಅಕ್ಷಯ ಭಜಂತ್ರಿ ಮಾತನಾಡಿದರು. ಗಿರೀಶ ಅಂಬಿಗೇರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸ್ನೇಹಾ ಸ್ವಾಗತಿಸಿದರು. ಚೇತನಾ ಬಡಿಗೇರ, ಚಂದನ ಅರಳೀಕಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಲ್ಮಾನ ತಳಗಡ್ಡಿ ವಂದಿಸಿದರು.