ಕಾಕ್ರೋಚ್ ಹೋರಾಟದ ಪರಿಣಾಮವಾಗಿ ಹೈಕಮಾಂಡ್‌ನೊಂದಿಗೆ ಉದ್ದೇಶಿತ ಸಂಪುಟ ವಿಸ್ತರಣೆ ಚರ್ಚೆ ಸಾಧ್ಯವಾಗದೆ ನಗರಕ್ಕೆ ಹಿಂತಿರುಗಿರುವ ಕಾಂಗ್ರೆಸ್‌ ರಾಜ್ಯ ನಾಯಕತ್ವ ಭಾನುವಾರದ ವೇಳೆಗೆ ಮತ್ತೊಮ್ಮೆ ದೆಹಲಿ ದಂಡಯಾತ್ರೆ ನಡೆಸುವ ಸಾಧ್ಯತೆಯಿದೆ.

 ಬೆಂಗಳೂರು : ಕಾಕ್ರೋಚ್ ಹೋರಾಟದ ಪರಿಣಾಮವಾಗಿ ಹೈಕಮಾಂಡ್‌ನೊಂದಿಗೆ ಉದ್ದೇಶಿತ ಸಂಪುಟ ವಿಸ್ತರಣೆ ಚರ್ಚೆ ಸಾಧ್ಯವಾಗದೆ ನಗರಕ್ಕೆ ಹಿಂತಿರುಗಿರುವ ಕಾಂಗ್ರೆಸ್‌ ರಾಜ್ಯ ನಾಯಕತ್ವ ಭಾನುವಾರದ ವೇಳೆಗೆ ಮತ್ತೊಮ್ಮೆ ದೆಹಲಿ ದಂಡಯಾತ್ರೆ ನಡೆಸುವ ಸಾಧ್ಯತೆಯಿದೆ.

ಈ ವೇಳೆ ಎಲ್ಲ ಅಂದುಕೊಂಡಂತೆ ನಡೆದರೇ ಸೋಮವಾರ (ಜು. 27) ಅಥವಾ ಬುಧವಾರ (ಜು. 29) ನೂತನ ಸಚಿವರ ಪದಗ್ರಹಣ ನಡೆಯುವ ಸಾಧ್ಯತೆಯಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಕಾಕ್ರೋಚ್ ಹೋರಾಟದ ಪರಿಣಾಮವಾಗಿ ಖಾಲಿ ಕೈಯಲ್ಲಿ ಹಿಂತಿರುಗಿದೆ

ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಲುವಾಗಿ ಹೈಕಮಾಂಡ್‌ ಜತೆ ಚರ್ಚೆಗೆ ತೆರಳಿದ್ದ ಕಾಂಗ್ರೆಸ್ ನಾಯಕತ್ವ ಕಾಕ್ರೋಚ್ ಹೋರಾಟದ ಪರಿಣಾಮವಾಗಿ ಖಾಲಿ ಕೈಯಲ್ಲಿ ಹಿಂತಿರುಗಿದೆ. ಮೂಲಗಳ ಪ್ರಕಾರ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್‌ ಅವರಿಗೆ ಶನಿವಾರದ ವೇಳೆಗೆ ಮತ್ತೆ ದೆಹಲಿಗೆ ಬುಲಾವ್‌ ಬರುವ ಸಾಧ್ಯತೆಯಿದೆ.

ಹೈಕಮಾಂಡ್‌ನಿಂದ ಈ ಬುಲಾವ್‌ ಬಂದರೆ ಶನಿವಾರ ರಾತ್ರಿ ದೆಹಲಿಗೆ ತೆರಳಲಿರುವ ಈ ತ್ರಿಮೂರ್ತಿಗಳು ಭಾನುವಾರ ಹೈಕಮಾಂಡ್ ವರಿಷ್ಟರೊಂದಿಗೆ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಸಲಿದ್ದು, ನೂತನ ಸಂಪುಟದ ಪಟ್ಟಿಗೆ ಹೈಕಮಾಂಡ್ ಒಪ್ಪಿಗೆ ಪಡೆಯಲಿದ್ದಾರೆ ಎನ್ನಲಾಗಿದೆ.

18 ಮಂದಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ

ಈ ಮೂಲಗಳ ಪ್ರಕಾರ ಸೋಮವಾರ ಅಥವಾ ಬುಧವಾರ ನಡೆಯಲಿರುವ ನೂತನ ಸಚಿವರ ಪದಗ್ರಹಣ ಸಮಾರಂಭದಲ್ಲಿ ಬಹುತೇಕ 18 ಮಂದಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ. ಉಳಿದ ಎರಡು ಸ್ಥಾನಗಳನ್ನು ಖಾಲಿ ಇಟ್ಟುಕೊಳ್ಳುವ ಉದ್ದೇಶ ರಾಜ್ಯ ನಾಯಕತ್ವಕ್ಕೆ ಇದೆ.

ಸಂಪುಟ ವಿಸ್ತರಣೆ ಕುರಿತು ಹೈಕಮಾಂಡ್‌ನೊಂದಿಗೆ ಈಗಾಗಲೇ ನಡೆದಿರುವ ಪೂರ್ವ ಭಾವಿ ಸಭೆಗಳಲ್ಲಿ ಬಹುತೇಕ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ. ಆದರೆ, ಕೆಲವೊಂದು ಜಿಲ್ಲೆ ಹಾಗೂ ಜಾತಿಗಳಿಗೆ ಸಂಬಂಧಿಸಿದಂತೆ ಯಾರಿಗೆ ಪ್ರಾತಿನಿಧ್ಯ ನೀಡಬೇಕು ಎಂಬ ಬಗ್ಗೆ ತೀವ್ರ ಗೊಂದಲವಿದೆ. ಈ ಗೊಂದಲವಿರುವ ಜಿಲ್ಲೆ ಹಾಗೂ ಜಾತಿಗಳಿಗೆ ಸಂಬಂಧ ಪಟ್ಟಂತೆ ರಾಜ್ಯ ಹಾಗೂ ಹೈಕಮಾಂಡ್‌ನ ನಾಯಕರ ನಡುವೆ ಇನ್ನೂ ಒಮ್ಮತ ಮೂಡಿಲ್ಲ.

ಉದಾಹರಣೆಗೆ ವಿಜಯನಗರ ಜಿಲ್ಲೆಯಲ್ಲಿ ಅಪ್ಪಾಜಿ ನಾಡಗೌಡ ಹಾಗೂ ಯಶವಂತರಾಯಗೌಡ ಪಾಟೀಲ ಅವರ ಹೆಸರಿದೆ. ಇಬ್ಬರೂ ಅರ್ಹರಿರುವುದರಿಂದ ಯಾರಿಗೆ ಅವಕಾಶ ನೀಡಬೇಕು ಎಂಬ ಬಗ್ಗೆ ನಾಯಕರಲ್ಲೇ ಗೊಂದಲವಿದೆ. ನಿರ್ದಿಷ್ಟ ಹೆಸರಿಗೆ ರಾಜ್ಯದ ನಾಯಕರಿಬ್ಬರು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಹೀಗಾಗಿ

ಹೈಕಮಾಂಡ್‌ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ. ಇನ್ನು ಪರಿಶಿಷ್ಟ (ಬಲಗೈ) ಜಾತಿಗೆ ಸಂಬಂಧಿಸಿದಂತೆ ಸದ್ಯಕ್ಕೆ ಒಬ್ಬರಿಗೆ ಮಾತ್ರ ಅವಕಾಶ ನೀಡಲು ಸಾಧ್ಯವಿದ್ದು, ಮಾಜಿ ಸಚಿವ ಮಹದೇವಪ್ಪ ಅವರನ್ನು ಮುಂದುವರೆಸುವಂತೆ ಪ್ರಭಾವಿ ನಾಯಕರೊಬ್ಬರು ಪಟ್ಟು ಹಿಡಿದಿದ್ದರೆ, ಆನೇಕಲ್‌ ಶಿವಣ್ಣ ಹಾಗೂ ಪಿ.ಎ. ನರೇಂದ್ರಸ್ವಾಮಿ ಅವರ ಪರವಾಗಿ ರಾಜ್ಯದ ಮತ್ತೊಬ್ಬ ನಾಯಕರ ಹಾಗೂ ಹೈಕಮಾಂಡ್‌ ನಾಯಕರು ಒಲವು ಹೊಂದಿದ್ದಾರೆ.

ಇನ್ನು ರಾಯಚೂರಿಗೆ ಸಂಬಂಧಿಸಿದಂತೆ ಮಾಜಿ ಸಚಿವ ಹಾಗೂ ಪರಿಷತ್‌ ಸದಸ್ಯ ಬೋಸರಾಜು ಅವರನ್ನು ಮುಂದುವರೆಸಬೇಕು ಎಂಬ ಉದ್ದೇಶ ಪ್ರಭಾವಿ ನಾಯಕರೊಬ್ಬರಿಗೆ ಇದ್ದರೆ, ಹೈಕಮಾಂಡ್‌ ಅತ್ಯಂತ ಉನ್ನತ ಸ್ಥಾನದಲ್ಲಿರುವ ನಾಯಕರಿಂದ ಇದಕ್ಕೆ ವಿರೋಧವಿದೆ. ಅಲ್ಲದೆ, ಜಿಲ್ಲೆಯ ಎಲ್ಲ ಶಾಸಕರು ಹಾಗೂ ನಾಯಕರು ಸಹ ಈ ಹೆಸರಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇಂತಹ ಕೆಲ ನಿರ್ದಿಷ್ಟ ಹೆಸರಿನ ಬಗ್ಗೆ ಇರುವ ಗೊಂದಲವನ್ನು, ಜಾತಿ ಹಾಗೂ ಪ್ರಾದೇಶಿಕ ಸಮತೋಲನವನ್ನು ಕಾಪಾಡಿಕೊಳ್ಳುವ ಬಗ್ಗೆ ಮಾತ್ರ ಚರ್ಚೆ ಬಾಕಿಯಿದೆ.

ಈ ಕಾರ್ಯಕ್ಕೆ ಹೈಕಮಾಂಡ್‌ ಬುಲಾವ್‌ ನೀಡಿದರೆ ಭಾನುವಾರ ನಡೆಯುವ ಸಾಧ್ಯತೆಯಿದ್ದು, ಸೋಮವಾರ ಅಥವಾ ಬುಧವಾರ ನೂತನ ಸಚಿವರ ಪದಗ್ರಹಣ ನಡೆಯುವ ಸಾಧ್ಯತೆಯಿದೆ.