ಕನ್ನಡಪ್ರಭ ವಾರ್ತೆ ನವದೆಹಲಿ
ಸಚಿವ ಸಂಪುಟ ವಿಸ್ತರಣೆಗೆ ನಾನು ಸಿದ್ಧನಿದ್ದೇನೆ. ಮಂಗಳವಾರ ರಾತ್ರಿ ಸಭೆ ಸೇರಿ ನಿರ್ಧರಿಸಲು ತೀರ್ಮಾನ ಆಗಿತ್ತು. ಆದರೆ ನಮ್ಮ ನಾಯಕರನ್ನು ಪೊಲೀಸರು ಬಂಧಿಸಿದ್ದು, ಅವರು ಇನ್ನೂ ಠಾಣೆಯಲ್ಲಿ ಇದ್ದಾರೆ. ಹಾಗಾಗಿ ಸಭೆಯ ಬಗ್ಗೆ ತೀರ್ಮಾನ ಆಗಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಲ್ಲಿ ಹೈಕಮಾಂಡ್ ಸುಪ್ರೀಂ. ನಾನು ಚಿಕ್ಕ ವಯಸ್ಸಿನಲ್ಲಿ ಮಂತ್ರಿ ಆದವನು. ಯುವಕರನ್ನು ಬೆಳಸಬೇಕು ಎನ್ನುವವನು. 20 ಸ್ಥಾನಗಳು ತುಂಬ ಬೇಕು ಎಂಬುದು ನನ್ನ ಆಸೆ. ಸಭಾಪತಿ, ಉಪಸಭಾಪತಿ, ಚೀಪ್ ವಿಪ್ ಆಯ್ಕೆ ಮಾಡಬೇಕಿದೆ. ಅಧಿವೇಶನದ ಒಳಗೆ ಖಂಡಿತ ಸಚಿವ ಸಂಪುಟ ವಿಸ್ತರಣೆ ಮಾಡಬೇಕು ಎಂದು ಅವರು ಹೇಳಿದರು.
ನಾನು ಸಚಿವ ಸಂಪುಟ ವಿಸ್ತರಣೆಗೆ ಸಿದ್ಧನಿದ್ದೇನೆ. ರಾತ್ರಿ ಕರೆದರೂ, ನಾಳೆ ಕರೆದರೂ ಹೋಗಲು ಸಿದ್ಧವಾಗಿದ್ದೇನೆ. ರಾತ್ರಿ ಸಭೆ ಸೇರುವುದಾಗಿ ಇತ್ತು. ಆದರೆ ನಮ್ಮ ನಾಯಕರು ಇನ್ನು ಪೊಲೀಸ್ ಠಾಣೆಯಲ್ಲಿ ಇದ್ದಾರೆ. ಇನ್ನೂ ಹಾಗಾಗಿ ಸಭೆ ನಡೆಸುವ ಬಗ್ಗೆ ತೀರ್ಮಾನ ಆಗಿಲ್ಲ ಎಂದು ಅವರು ತಿಳಿಸಿದರು.ನನಗೆ ಸಂಪುಟ ರಚನೆಯನ್ನು ಮುಂದಕ್ಕೆ ಹಾಕೋಕೆ ಇಷ್ಟ ಇಲ್ಲ. ಆದರೆ ಪರಿಸ್ಥಿತಿ ಹೀಗಿದೆ. ಸೋಮವಾರ ಹಾಸನಕ್ಕೆ ಹೋಗಿದ್ದರಿಂದ ದೆಹಲಿಗೆ ಬರಲು ಆಗಲಿಲ್ಲ. ಮಂಗಳವಾರ ರಾತ್ರಿ ಸಭೆ ನಡೆಸಲು ಹೈಕಮಾಂಡ್ ತೀರ್ಮಾನಿಸಿತ್ತು. ಆದರೆ ನಮ್ಮ ನಾಯಕರೆಲ್ಲ ಪೊಲೀಸ್ ಠಾಣೆಯಲ್ಲಿಯೇ ಇದ್ದಾರೆ. ಹಾಗಾಗಿ ಸಭೆ ಆಗೋದು ಅನುಮಾನ ಎಂದರು.
ನಾವು ಜಾತಿವಾರು, ಜಿಲ್ಲಾವಾರು ಎಂದು ಹೇಳುತ್ತಿರುತ್ತೇವೆ. ಆದರೆ ನನಗೆ 136 ಶಾಸಕರು, ಪರಿಷತ್‌ನಲ್ಲಿ ಇರೋರು ಎಲ್ಲ ಒಂದೇ. ಆದರೆ ಹೈಕಮಾಂಡ್ ಏನು ಹೇಳುತ್ತದೆಯೋ ಅದನ್ನು ಕೇಳಲೇಬೇಕು ಎಂದರು.
ಕಾಂಗ್ರೆಸ್ ಪಕ್ಷ ನಡೆದುಕೊಂಡು ಬಂದಿದ್ದೆ ಹಾಗೆ. ನಮ್ಮನ್ನು ಕರೆಸಿ ಚರ್ಚೆ ಮಾಡುತ್ತಾರೆ. ಹಿಂದೆ ಸಿದ್ದರಾಮಯ್ಯ ಅವರು ಇದ್ದಾಗಲೂ ಸಹ ಕರೆಸಿ ಚರ್ಚೆ ಮಾಡಿದ್ದರು. ಈಗಲೂ ಸಹ ನಮ್ಮ ಜತೆ ಅವರು ಚರ್ಚೆ ಮಾಡುತ್ತಾರೆ. ಆಮೇಲೆ ತೀರ್ಮಾನ ಮಾಡುತ್ತಾರೆ. ಇದು ಕಾಂಗ್ರೆಸ್ ಪಾರ್ಟಿಯಲ್ಲಿ ನಡೆದು ಬಂದ ಪದ್ಧತಿ ಅವರು ತಿಳಿಸಿದರು.ರಾಜ್ಯದಲ್ಲೂ ನೀಟ್ ಹೋರಾಟ:
ವಿದ್ಯಾರ್ಥಿಗಳ ಮೇಲೆ ಜಂತರ್ ಮಂತರ್‌ನಲ್ಲಿ ದೆಹಲಿ ಪೊಲೀಸರು ಲಾಠಿ ಬೀಸಿದ್ದಾರೆ. ಇದನ್ನು ಪ್ರಶ್ನಿಸಿದ ಕಾಂಗ್ರೆಸ್ ನಾಯಕರನ್ನು ಪೊಲೀಸರು ತಡೆದಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯ ಕಾಪಾಡುವ ಜವಾಬ್ದಾರಿ ನಮ್ಮ ಮೇಲಿದೆ. ಹಾಗಾಗಿ ಕರ್ನಾಟಕ ಹಾಗೂ ರಾಷ್ಟ್ರಮಟ್ಟದಲ್ಲಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.ಇಲ್ಲಿನ ಜಂತರ್ ಮಂತರ್‌ನಲ್ಲಿ ನೀಟ್ ಸೋರಿಕೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಸಿಜೆಪಿ ಕಾರ್ಯಕರ್ತರು, ವಿದ್ಯಾರ್ಥಿಗಳ ಮೇಲಿನ ಲಾಠಿಚಾರ್ಜ್ ಖಂಡಿಸಿ ಪ್ರಧಾನಿ ನಿವಾಸದ ಬಳಿ ಕಾಂಗ್ರೆಸ್ ನಡೆಸುತ್ತಿದ್ದ ಧರಣಿಯನ್ನು ಹತ್ತಿಕ್ಕಿರುವ ಕ್ರಮಕ್ಕೆ ಡಿಕೆಶಿ ಬೇಸರ ವ್ಯಕ್ತಪಡಿದರು.ಕಾಂಗ್ರೆಸ್ ಮುಖಂಡ, ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಸಂಸದೆ ಪ್ರಿಯಾಂಕಾ ಗಾಂಧಿ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಸಂಸದರು ಪ್ರತಿಭಟನೆ ಮಾಡುತ್ತಿದ್ದೇವೆ. ಇದು ಸೌಮ್ಯ ಪ್ರತಿಭಟನೆ. ಪ್ರಧಾನಿ ಮನೆಯ ಮುಂದೆ ಕೂರಲು ಬಿಡುತ್ತಿಲ್ಲ, ಮಾತಾಡಲು ಬಿಡುತ್ತಿಲ್ಲ ನಮ್ಮ ನಾಯಕರನ್ನು ಈಗಾಗಲೇ ಬಂಧಿಸಿದ್ದಾರೆ ಎಂದರು.ದೇಶದ ಯುವಕರು, ವಿದ್ಯಾರ್ಥಿಗಳು ಭವಿಷ್ಯ ಕಾಪಾಡಬೇಕಾಗಿರುವುದು ನಮ್ಮ ಕರ್ತವ್ಯ ಹಾಗಾಗಿ ಕರ್ನಾಟಕ ರಾಜ್ಯ ಮತ್ತು ಇಡೀ ರಾಷ್ಟ್ರದಲ್ಲಿ ಹೋರಾಟ ಮುಂದುವರೆಸುತ್ತೇವೆ. ಇಡೀ ದೇಶ ಯುವಕರ ಮೇಲೆ ನಿಂತಿದೆ. ಪ್ರತಿಯೊಬ್ಬರು ಕೂಡ ತಮ್ಮ ಮಕ್ಕಳು ಒಳ್ಳೆಯ ಬದುಕು ಕಟ್ಟಿಕೊಳ್ಳಲು ಆಸೆ ಇರುತ್ತದೆ. 25 ಲಕ್ಷ ವಿದ್ಯಾರ್ಥಿಗಳು ಕಷ್ಟಪಟ್ಟು ಓದಿ ಪರೀಕ್ಷೆ ಬರೆದಿದ್ದಾರೆ. ಆದರೆ ಪ್ರಶ್ನೆ ಪತ್ರಿಕೆ ಸೋರಿಕೆ ಆಗುತ್ತಿದೆ. ನೋವು ತೋರಿಸಲು ಪ್ರತಿಭಟನೆ ಮಾಡುತ್ತಾರೆ. ಆದರೆ ಮಕ್ಕಳನ್ನು ಹೊಡೆಸಿದ್ದನ್ನು ನೋಡಿದರೆ ಬೇಸರವಾಗುತ್ತದೆ. ನಿಮ್ಮ ಮಕ್ಕಳ ಮೇಲೆ ಬಿದ್ದ ಏಟು ಅಲ್ವಾ ಅದು? ಶಿಕ್ಷಣ ಮಂತ್ರಿಗಳ ರಾಜೀನಾಮೆ ಕೇಳಿದ್ದೇವೆ. ಸಂಸತ್‌ನಲ್ಲಿ ಚರ್ಚೆಗೆ ಅವಕಾಶ ಕೊಟ್ಟಿಲ್ಲ. ಕಾಂಗ್ರೆಸ್ ಪಕ್ಷ ರಾಹುಲ್ ಗಾಂಧಿ, ಖರ್ಗೆ ಅವರ ನೇತೃತ್ವದಲ್ಲಿ ಧ್ವನಿ ಎತ್ತಿದೆ ಎಂದು ತಿಳಿಸಿದರು. ವಿದ್ಯಾರ್ಥಿಗಳ ಮೇಲಿನ ಹಲ್ಲೆ, ಕಾಂಗ್ರೆಸ್ ಮುಖಂಡರ ಬಂಧನವನ್ನು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಖಂಡಿಸಿದ್ದಾರೆ. ವಿದ್ಯಾರ್ಥಿಗಳ ಮೇಲೆ ನಡೆದ ಲಾಠಿ ಚಾರ್ಜ್ ಮಾಡಿದ್ದನ್ನು ಖಂಡಿಸಿ ಪ್ರತಿಭಟನೆಗೆ ಇಳಿದ ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರನ್ನು ಬಂಧಿಸಲಾಗಿದೆ. ರಾಹುಲ್ ಗಾಂಧಿ ಧ್ವನಿ ಹತ್ತಿಕ್ಕಲು ಯತ್ನಿಸಲಾಗುತ್ತಿದೆ. ಇದು ತುರ್ತು ಪರಿಸ್ಥಿತಿಗಿಂತ ಹೇಯಕೃತ್ಯ. ಬೆಂಗಳೂರಿನ ಲೋಕಭವನದ ಮುಂದೆ ಪ್ರತಿಭಟನೆ ಮಾಡುತ್ತೇವೆ. ನಮ್ಮ ಕಾರ್ಯಕರ್ತರು ಪ್ರತಿಭಟನೆ ಮಾಡಲಿದ್ದೇವೆ ರಾಹುಲ್ ಗಾಂಧಿ, ವೇಣುಗೋಪಾಲ ಅವರಿಗೆ ಗಾಯ ಆಗಿದೆ. ಈ ದಾಳಿ ಖಂಡನೀಯ ಎಂದರು.