ಸಾರಾಂಶ
ಲಂಡನ್: ಅಧ್ಯಕ್ಷರಾಗಿ ಚುನಾಯಿತರಾಗುತ್ತಿದ್ದಂತೆಯೇ ಭಾರತೀಯ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಸೂಚಿಸಿ ಟೀಕೆಗೆ ಗುರಿಯಾಗಿರುವ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜ್ ತಮ್ಮ ದೇಶದಲ್ಲಿ ಭಾರತೀಯ ಸೇನೆ ಇರುವುದರಿಂದ ಆಗಬಹುದಾದ ಪರಿಣಾಮಗಳ ಕುರಿತು ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ಚುನಾವಣೆಗಳಲ್ಲಿ ಕರುಣೆ ಗಿಟ್ಟಿಸಿ ಗೆದ್ದಿದ್ದಾರೆ ಎಂದು ಯೂರೋಪಿಯನ್ ಒಕ್ಕೂಟ ವರದಿ ಮಾಡಿದೆ.
ಮಾಲ್ಡೀವ್ಸ್ ಆಹ್ವಾನದ ಮೇರೆಗೆ 11 ವಾರಗಳ ಕಾಲ ಅಲ್ಲಿನ ಅಧ್ಯಕ್ಷೀಯ ಚುನಾವಣಾ ಪ್ರಕ್ರಿಯೆಯ ವೀಕ್ಷಕರಾಗಿ ತೆರಳಿದ್ದ ಯುರೋಪಿಯನ್ ಯೂನಿಯನ್ ತನ್ನ ವರದಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ.
ಅದರಲ್ಲಿ ಮೊಹಮ್ಮದ್ ಮುಯಿಜ್ ಅವರು ಪ್ರತಿಪಕ್ಷಗಳ ಮೈತ್ರಿಕೂಟ ಮಾಡಿಕೊಂಡು ಭಾರತದ ವಿರುದ್ಧ ಸಾಮಾಜಿಕ ಜಾಲತಾಣವೂ ಸೇರಿದಂತೆ ಎಲ್ಲ ಕಡೆ ವ್ಯವಸ್ಥಿತವಾಗಿ ಸುಳ್ಳು ಸುದ್ದಿ ಹಬ್ಬುವಂತೆ ತಂತ್ರ ಹೆಣೆದರು. ಅಲ್ಲದೆ ಭಾರತವನ್ನು ಅವಹೇಳನಕಾರಿ ಪದಗಳಲ್ಲಿ ನಿಂದಿಸಿ ಜನರ ಅಲೆ ತಮ್ಮತ್ತ ತಿರುಗುವಂತೆ ನೋಡಿಕೊಂಡರು.
ಅಲ್ಲದೆ ಭಾರತೀಯ ಸೇನೆ ಇರುವಿಕೆಯಿಂದ ತಮ್ಮ ದೇಶದ ಸಾರ್ವಭೌಮತೆಗೆ ಧಕ್ಕೆ ಬರುವ ಜೊತೆಗೆ ನಮ್ಮ ದೇಶದಲ್ಲಿ ಭ್ರಷ್ಟಾಚಾರ, ನಿರುದ್ಯೋಗಗಳು ಹಾಗೆಯೇ ಮುಂದುವರೆಯಲಿದೆ ಎಂದು ಜನರನ್ನು ನಂಬಿಸಿ ಶೇ.54ರಷ್ಟು ಮತಗಳನ್ನು ಪಡೆಯಲು ಪ್ರಮುಖ ಕಾರಣ ಎಂದು ವರದಿ ಉಲ್ಲೇಖಿಸಿದೆ.
ಜೊತೆಗೆ ಮಾಲ್ಡೀವ್ಸ್ ಚುನಾವಣಾ ಆಯೋಗದ ಪ್ರಕ್ರಿಯೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ ಪ್ರಕ್ರಿಯೆಯನ್ನು ಮತ್ತಷ್ಟು ಸುಲಲಿತಗೊಳಿಸಲು 20 ಅಂಶಗಳನ್ನು ಶಿಫಾರಸು ಮಾಡಿದೆ.