ಈ ಸಲ ಬಿಜೆಪಿಗೆ 400 ಸೀಟು: ಸದನದಲ್ಲಿ ಖರ್ಗೆ ಎಡವಟ್ಟು

| Published : Feb 03 2024, 01:48 AM IST / Updated: Feb 03 2024, 07:42 AM IST

ಸಾರಾಂಶ

ಈ ಬಾರಿ ಬಿಜೆಪಿಗೆ ಚುನಾವಣೆಯಲ್ಲಿ 400 ಸೀಟು ಬರಲಿದೆ ಎಂದು ಹೇಳಿದ ಮಲ್ಲಿಕಾರ್ಜುನ ಖರ್ಗೆ ಮಾತು ಕೇಳಿ ನಕ್ಕ ಮೋದಿ, ಬಿಜೆಪಿಗರು ಸಂತಸ ವ್ಯಕ್ತಪಡಿಸಿದರು.

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಶುಕ್ರವಾರದಂದು ರಾಜ್ಯಸಭೆಯಲ್ಲಿ ಬಾಯಿತಪ್ಪಿ, ‘ಬಿಜೆಪಿ ಈ ಹಿಂದಿನ ಚುನಾವಣೆಯಲ್ಲಿ 330 ಸೀಟು ಗೆದ್ದಿತ್ತು. ಈ ಸಲ 400 ಸ್ಥಾನ ಗೆಲ್ಲಲಿದೆ’ ಎಂದು ಹೇಳಿ ಮುಜುಗರಕ್ಕೀಡಾದ ಪ್ರಸಂಗ ನಡೆಯಿತು. 

ಖರ್ಗೆ ಈ ಮಾತು ಆಡಿದಾಗ ಸದನದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಸೇರಿ ಬಿಜೆಪಿ ಸದಸ್ಯರು ಸಂತಸದಿಂದ ನಕ್ಕರು.

ಮಹಿಳಾ ಪ್ರಾತಿನಿಧ್ಯದ ವಿಷಯದ ಕುರಿತು ಸದನದಲ್ಲಿ ಮಾತನಾಡಿದ ಖರ್ಗೆ, ‘ಆಪ್ಕಾ ಇತ್ನಾ ಬಹುಮತ್ ಹೈ, ಪೆಹ್ಲೆ 330, 334 ಥಿ, ಅಬ್ ತೋ ‘400 ಪಾರ್’ ಹೋ ರಹಾ ಹೈ (ಈ ಹಿಂದೆ ನಿಮಗೆ 330, 334 ಸ್ಥಾನಗಳ ಬಹುಮತವಿತ್ತು ಮತ್ತು ಈಗ 400 ದಾಟುತ್ತಿದೆ)’ ಎಂದುಬಿಟ್ಟರು. 

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ, ‘ವಿಪಕ್ಷ ನಾಯಕರ ಬಾಯಿಂದಲೇ ಸತ್ಯ ಹೊರಬಂದಿದೆ’ ಎಂದು ವ್ಯಂಗ್ಯವಾಡಿದೆ.ಇನ್ನು ಇದಕ್ಕೂ ಮುನ್ನ ಭಾರತಕ್ಕೆ ಕಾಂಗ್ರೆಸ್‌ ಕೊಡುಗೆಯ ಗುಣಗಾನ ಮಾಡುವಾಗ ಖರ್ಗೆ, ‘ರಾಹುಲ್‌ ಗಾಂಧಿ ಈ ದೇಶಕ್ಕೆ ತಮ್ಮ ಪ್ರಾಣ ಸಮರ್ಪಿಸಿದರು’ ಎಂದು ಬಿಟ್ಟರು. ಆ ಕ್ಷಣದಲ್ಲೇ ತಪ್ಪಿನ ಅರಿವಾಗಿ ‘ರಾಜೀವ್‌ ಗಾಂಧಿ’ ಎಂದು ಸರಿಪಡಿಸಿಕೊಂಡರು.