ಸಾರಾಂಶ
ಆರ್.ಜಿ. ಕರ್ ಮೆಡಿಕಲ್ ಕಾಲೇಜಿನ ಕಿರಿಯ ವೈದ್ಯರ ಪ್ರತಿಭಟನೆಗೆ ಸಂಬಂಧಿಸಿದಂತೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವನ್ನು ಮಮತಾ ಬ್ಯಾನರ್ಜಿ ಅಲ್ಲಗಳೆದಿದ್ದಾರೆ. ಬೆಂಬಲ ವ್ಯಕ್ತಪಡಿಸಿದ ದೀದಿ, ಆರೋಪವನ್ನು ಸುಳ್ಳು ಎಂದಿದ್ದಾರೆ.
ಕೋಲ್ಕತಾ: ವೈದ್ಯೆಯ ರೇಪ್ ಖಂಡಿಸಿ ಕಳೆದ 21 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಆರ್.ಜಿ. ಕರ್ ಮೆಡಿಕಲ್ ಕಾಲೇಜಿನ ಕಿರಿಯ ವೈದ್ಯರಿಗೆ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಬೆದರಿಕೆ ಹಾಕಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಆದರೆ ಇದನ್ನು ಅಲ್ಲಗಳೆದಿರುವ ದೀದಿ ‘ಈ ಆರೋಪ ಸಂಪೂರ್ಣ ಸುಳ್ಳು’ ಎಂದಿದ್ದಾರೆ. ‘ನಾನು ವಿದ್ಯಾರ್ಥಿಗಳು ಮತ್ತು ಅವರ ಚಳವಳಿಯ ವಿರುದ್ಧ ಒಂದೇ ಒಂದು ಪದವನ್ನು ಎತ್ತಿಲ್ಲ. ನಾನು ಅವರನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ. ಅವರ ಚಳವಳಿ ನಿಜವಾದದ್ದು. ಕೆಲವರು ನನ್ನ ಮೇಲೆ ಆರೋಪ ಮಾಡುತ್ತಿರುವಂತೆ ಅವರಿಗೆ ನಾನು ಎಂದಿಗೂ ಬೆದರಿಕೆ ಹಾಕಲಿಲ್ಲ. ಈ ಆರೋಪ ಸಂಪೂರ್ಣ ಸುಳ್ಳು’ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಟಿಎಂಸಿಯ ಛತ್ರ ಪರಿಷದ್ ರ್‍ಯಾಲಿ ವೇಳೆ, ‘ಪ್ರತಿಭಟನಾನಿರತ ಕಿರಿಯ ವೈದ್ಯರು ಕರ್ತವ್ಯಕ್ಕೆ ಹಾಜರಾದರೆ ಎಫ್‌ಐಆರ್ ಹಾಕುವುದಿಲ್ಲ’ ಎಂದು ಮಮತಾ ಹೇಳಿದ್ದರು. ಆದರೆ ಇದು ಬೆದರಿಕೆ ಹಾಕುವಂತಿದೆ ಎಂದು ಕಿರಿಯ ವೈದ್ಯರು ದೀದಿ ಮನವಿಯನ್ನು ತಿರಸ್ಕರಿಸಿದ್ದರು.
ದಿಲ್ಲಿ ಹೊತ್ತಿ ಉರಿವ ಹೇಳಿಕೆ: ದೀದಿ ವಿರುದ್ಧ ದೂರು
ನವದೆಹಲಿ: ನರ್ಸ್ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಬಂಗಾಳ ಹೊತ್ತಿ ಉರಿದರೆ ದಿಲ್ಲಿ ಕೂಡ ಹೊತ್ತಿ ಉರಿಯಲಿದೆ’ ಎಂದು ಹೇಳಿದ್ದ ಪ. ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನೀಡಿದ ಹೇಳಿಕೆ ವಿರುದ್ಧ ದಿಲ್ಲಿಯಲ್ಲಿ ದೂರು ಸಲ್ಲಿಸಲಾಗಿದೆ.ಬುಧವಾರ ಮಮತಾ ಅವರು, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸುವ ವೇಳೆ, ‘ಒಂದು ವೇಳೆ ಬಿಜೆಪಿ ಬಂಗಾಳದಲ್ಲಿ ತೊಂದರೆ ಉಂಟು ಮಾಡಲು ಯತ್ನಿಸಿದರೆ ಅದು ಇತರ ರಾಜ್ಯಗಳ ಮೇಲೆಯೂ ಪರಿಣಾಮ ಬೀರಲಿದೆ. ಒಂದು ವೇಳೆ ಬಂಗಾಳ ಹೊತ್ತಿ ಉರಿದರೆ, ಅಸ್ಸಾಂ, ಈಶಾನ್ಯ ರಾಜ್ಯಗಳು, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಒಡಿಶಾ, ದೆಹಲಿಯೂ ಹೊತ್ತಿ ಉರಿಯಲಿದೆ’ ಎಂದಿದ್ದರು.ಈ ಹೇಳಿಕೆ ವಿರುದ್ಧ ಸುಪ್ರೀಂ ಕೋರ್ಟ್‌ನ ವಕೀಲ ವಿನೀತ್ ಜಿಂದಾಲ್, ಮಮತಾ ಬ್ಯಾನರ್ಜಿ ವಿರುದ್ಧ ದೆಹಲಿ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ. ದೂರಿನ ಪ್ರತಿಯನ್ನು ರಾಷ್ಟ್ರಪತಿ ಕಚೇರಿ ಮತ್ತು ಗೃಹ ಇಲಾಖೆಗೂ ಕಳುಹಿಸಿ ಕೊಟ್ಟಿದ್ದಾರೆ.
ಸೆ.2, 3ರಂದು ಬಂಗಾಳ ಅಸೆಂಬ್ಲಿ ವಿಶೇಷ ಅಧಿವೇಶನ
ಕೋಲ್ಕತಾ: ಅತ್ಯಾಚಾರಿಗಳಿಗೆ ಮರಣ ದಂಡನೆ ಶಿಕ್ಷೆ ವಿಧಿಸುವ ಕಾನೂನನ್ನು ಜಾರಿಗೆ ತರಲು ಪಶ್ಚಿಮ ಬಂಗಾಳ ಸರ್ಕಾರ ಮುಂದಾಗಿದ್ದು, ಅದಕ್ಕೆಂದೇ ಸೆ.2 ಹಾಗೂ 3ರಂದು ವಿಧಾನಸಭೆಯ ವಿಶೇಷ ಅಧಿವೇಶನ ಕರೆದಿದೆ.
ಸಿಎಂ ಮಮತಾ ಬ್ಯಾನರ್ಜಿ, ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಮರಣ ದಂಡನೆ ಶಿಕ್ಷೆ ವಿಧಿಸಲು ಕಾನೂನಿನ ತಿದ್ದುಪಡಿಗೆ ಮುಂದಿನ ವಾರದಿಂದ ಅಧಿವೇಶನ ಕರೆಯಲಾಗುವುದು ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಸೋಮವಾರ ವಿಶೇಷ ಅಧಿವೇಶನ ಕರೆಯಲಾಗಿದೆ.ಈ ಬಗ್ಗೆ ಬಂಗಾಳದ ಸಂಸದೀಯ ವ್ಯವಹಾರ ಸಚಿವ ಸೋವಂದೇಬ್ ಚಟ್ಟೋಫಾಧ್ಯಾಯ ಪ್ರತಿಕ್ರಿಯಿಸಿದ್ದು, ‘ನಾವು ಈ ಪ್ರಕ್ರಿಯೆಯನ್ನು ಕಾಲಮಿತಿಯೊಳಗೆ ಮುಗಿಸಲು ಬಯಸುತ್ತೇವೆ. ಒಂದು ವೇಳೆ ರಾಜ್ಯಪಾಲರು ವಿಧೇಯಕಕ್ಕೆ ಅಂಕಿತ ಹಾಕಲು ನಿರಾಕರಿಸಿದರೆ ಮುಂದಿನ ನಿರ್ಧಾರವನ್ನು ಕೈಗೊಳ್ಳುತ್ತೇವೆ’ ಎಂದರು.