ನೇಮಕಕ್ಕೆ ವಿರೋಧ ಬೆನ್ನಲ್ಲೇ ಮಹಾಮಂಡಲೇಶ್ವರ ಸ್ಥಾನಕ್ಕೆ ಬಾಲಿವುಡ್‌ ನಟಿ ಮಮತಾ ಕುಲಕರ್ಣಿ ರಾಜೀನಾಮೆ

| N/A | Published : Feb 11 2025, 12:47 AM IST / Updated: Feb 11 2025, 04:41 AM IST

ಸಾರಾಂಶ

ಬಾಲಿವುಡ್‌ ನಟಿ ಮಮತಾ ಕುಲಕರ್ಣಿ, ತಾವು ಸನ್ಯಾಸತ್ವ ಸ್ವೀಕರಿಸಿದ್ದ ಕಿನ್ನರ ಅಖಾಡದ ಮಹಾಮಂಡಲೇಶ್ವರ ಪಟ್ಟಕ್ಕೆ ರಾಜೀನಾಮೆ ಕೊಡುತ್ತಿರುವುದಾಗಿ ಹೇಳಿದ್ದಾರೆ.

ಪ್ರಯಾಗರಾಜ್‌: ಬಾಲಿವುಡ್‌ ನಟಿ ಮಮತಾ ಕುಲಕರ್ಣಿ, ತಾವು ಸನ್ಯಾಸತ್ವ ಸ್ವೀಕರಿಸಿದ್ದ ಕಿನ್ನರ ಅಖಾಡದ ಮಹಾಮಂಡಲೇಶ್ವರ ಪಟ್ಟಕ್ಕೆ ರಾಜೀನಾಮೆ ಕೊಡುತ್ತಿರುವುದಾಗಿ ಹೇಳಿದ್ದಾರೆ. ಆದರೆ ತಮ್ಮ ಸನ್ಯಾಸತ್ವವನ್ನು ಮಾತ್ರ ಮುಂದುವರೆಸುವುದಾಗಿ ಸ್ಪಷ್ಟಪಡಿಸಿದ್ದಾರೆ. 

ವಿಡಿಯೋದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ನಟಿ, ನಾನು ಬಾಲ್ಯದಿಂದಲೂ ಸಾದ್ವಿಯಾಗಿಯೇ ಬೆಳೆದಿದ್ದು, ಮುಂದೆ ಸಾದ್ವಿಯಾಗಿ ಇರುತ್ತೇನೆ ಎಂದು ಹೇಳಿದ್ದಾರೆ. ಇತ್ತೀಚೆಗೆ ಇವರ ಸನ್ಯಾಸ ಸ್ವೀಕಾರವನ್ನು ಅಖಾಡದ ಸ್ವಯಂಘೋಷಿತ ಸ್ಥಾಪಕ ರಿಷಿ ಅಜಯ್‌ ದಾಸ್‌ ವಿರೋಧಿಸಿದ್ದರು. ಆಕೆ ದೇಶದ್ರೋಹಿ. ಇಂಥವರಿಗೆ ಪಟ್ಟ ನೀಡಿದ್ದು ಸರಿಯಲ್ಲ ಎಂದು ವಾದಿಸಿದ್ದರು. ಇದರ ಬೆನ್ನಲ್ಲೇ ನಟಿ ಮಮತಾ ರಾಜೀನಾಮೆ ನೀಡಿದ್ದಾರೆ.

9 ತಿಂಗಳಲ್ಲಿ 1.88 ಲಕ್ಷ ಕೋಟಿ ಜಿಎಸ್ಟಿ ವಂಚನೆ ಪತ್ತೆ: ಕೇಂದ್ರ ಮಾಹಿತಿ

ನವದೆಹಲಿ: 2024ರ ಏಪ್ರಿಲ್‌- ಡಿಸೆಂಬರ್‌ ಅವಧಿಯಲ್ಲಿ ದೇಶಾದ್ಯಂತ 1.88 ಲಕ್ಷ ಕೋಟಿ ರು. ಮೊತ್ತದ ಜಿಎಸ್‌ಟಿ ವಂಚನೆ ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ ಎಂದು ಸಂಸತ್ತಿಗೆ ಸರ್ಕಾರ ಸೋಮವಾರ ಮಾಹಿತಿ ನೀಡಿದೆ. ಈ ಬಗ್ಗೆ 72,393 ಪ್ರಕರಣ ದಾಖಲಿಸಿ, 132 ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ 20,128 ಕೋಟಿ ರು. ವಸೂಲಿ ಮಾಡಲಾಗಿದೆ. 2023-24ರಲ್ಲಿ 2.30 ಲಕ್ಷ ಕೋಟಿ ರು. ಜಿಎಸ್‌ಟಿ ವಂಚನೆ, 2022-23ರಲ್ಲಿ 73238 ಪ್ರಕರಣಗಳಲ್ಲಿ 1.32 ಲಕ್ಷ ಕೋಟಿ ರು. ಜಿಎಸ್ಟಿ ವಂಚನೆ ಪತ್ತೆಹಚ್ಚಲಾಗಿತ್ತು ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್‌ ಚೌಧರಿ ತಿಳಿಸಿದರು.

ಸುರಕ್ಷತೆಯ ಕಾರಣ ನೀಡಿ ಹಜ್‌ ಯಾತ್ರೆಗೆ ಮಕ್ಕಳ ಕರೆತರುವುದಕ್ಕೆ ನಿಷೇಧ

ರಿಯಾದ್‌: 2025ನೇ ಸಾಲಿನ ಹಜ್ ಯಾತ್ರೆಗೆ ಬರುವ ಯಾತ್ರಿಕರು ಮೆಕ್ಕಾಗೆ ತಮ್ಮ ಮಕ್ಕಳನ್ನು ಕರೆದುಕೊಂಡು ಬರುವಂತಿಲ್ಲ ಎಂದು ಸೌದಿಯ ಹಜ್ ಮತ್ತು ಉಮ್ರಾ ಸಚಿವಾಲಯ ಹೇಳಿದೆ. ಜನ ದಟ್ಟಣೆಯಿಂದ ಮಕ್ಕಳ ಸುರಕ್ಷತೆಗೆ ತೊಂದರೆಯಾಗಬಾರದು ಎನ್ನುವ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿದೆ. ಈ ಬಗ್ಗೆ ಸಚಿವಾಲಯ ಪ್ರಕಟಣೆ ಹೊರಡಿಸಿದ್ದು, ‘ ಮಕ್ಕಳ ಸುರಕ್ಷತೆ, ಯೋಗ ಕ್ಷೇಮದ ಕಾರಣಕ್ಕೆ ಮತ್ತು ತೀರ್ಥಯಾತ್ರೆಯ ಸಮಯದಲ್ಲಿ ಅವರಿಗೆ ಯಾವುದೇ ಹಾನಿಯಾಗದಂತೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ’ ಎಂದಿದೆ. 2025ನೇ ಸಾಲಿನ ಹಜ್ ಯಾತ್ರೆಯು ಜೂನ್‌ 4 ರಿಂದ 6ರವರೆಗೆ ನಡೆಯಲಿದೆ.

ಸಿಎಂ ರಾಜೀನಾಮೆ ಬೆನ್ನಲ್ಲೇ ಮಣಿಪುರ ಶಾಸಕರ ಜೊತೆ ಬಿಜೆಪಿ ಹೈಕಮಾಂಡ್‌ ಚರ್ಚೆ

ಇಂಫಾಲ: ಮಣಿಪುರ ಸಿಎಂ ಎನ್‌.ಬಿರೇನ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ರಾಜ್ಯ ಬಿಜೆಪಿ ಉಸ್ತುವಾರಿ ಸಂಬಿತ್ ಪಾತ್ರಾ ಬಿಜೆಪಿ ಶಾಸಕರ ಜೊತೆಗೆ ಹೋಟೆಲ್‌ನಲ್ಲಿ ಮಹತ್ವದ ಸಭೆ ನಡೆಸಿದ್ದಾರೆ.ಮೂಲಗಳ ಪ್ರಕಾರ, ಸಂಬಿತ್‌ ಪಾತ್ರಾ, ಬಿರೇನ್ ಸಿಂಗ್ ಅವರೊಂದಿಗೆ ಮುನಿಸಿಕೊಂಡಿದ್ದ ಕನಿಷ್ಠ ಮೂವರು ಶಾಸಕರನ್ನು ಭೇಟಿಯಾಗಿದ್ದಾರೆ. ಅಲ್ಲದೇ ಬಿಜೆಪಿ ಮುಂದಿನ 48 ಗಂಟೆಗಳಲ್ಲಿ ಇನ್ನು ಹಲವು ಸಭೆಗಳನ್ನು ನಡೆಸುವ ಸಾಧ್ಯತೆಯಿದೆ .

ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಕೂಗು ಕೇಳಿ ಬರುತ್ತಿರುವ ನಡುವೆಯೇ ಬಿರೇನ್ ರಾಜೀನಾಮೆ ನಿರ್ಧಾರ ಕೈಗೊಂಡಿದ್ದರು.

ತಿರುಪತಿಗೆ ತುಪ್ಪ ಪೂರೈಸಲು ಕಂಪನಿಗಳ ಭಾರೀ ಕಳ್ಳಾಟ!

ತಿರುಪತಿ: ತಿರುಮಲ ತಿರುಪತಿ ದೇಗುಲಕ್ಕೆ ತುಪ್ಪ ಪೂರೈಕೆ ಮಾಡುವ ಗುತ್ತಿಗೆ ಪಡೆಯಲು ಕೆಲವು ಡೈರಿ ಕಂಪನಿಗಳು ಭಾರೀ ಗೋಲ್‌ಮಾಲ್‌ ನಡೆಸಿರುವ ವಿಷಯ ಸಿಬಿಐ ತನಿಖೆ ವೇಳೆ ಬೆಳಕಿಗೆ ಬಂದಿದೆ.ಟೆಂಡರ್‌ಗೆ ಅರ್ಹತೆ ಪಡೆಯಲು ಡೈರಿ ಕಂಪನಿಗಳು ನಿತ್ಯ 2 ಲಕ್ಷ ಲೀಟರ್‌ ಹಾಲು ಸಂಗ್ರಹಿಸುವ ಸಾಮರ್ಥ್ಯ ಹೊಂದಿರಬೇಕು ಎಂದು ನಿಯಮ ಇತ್ತು. ತಮಿಳುನಾಡಿನ ಎ.ಆರ್‌.ಡೈರಿಯ ಸಾಮರ್ಥ್ಯ 1.45 ಲಕ್ಷ ಲೀಟರ್‌ ಇದ್ದರೂ ತನ್ನ ಸಾಮರ್ಥ್ಯ 2.52 ಲಕ್ಷ ಲೀಟರ್‌ ಎಂದು ಸುಳ್ಳು ಹೇಳಿತ್ತು.

ಇನ್ನು ಒಪ್ಪಂದದ ಪ್ರಕಾರ, ತುಪ್ಪ ತಯಾರಿಸಿ ಪೂರೈಸುವುದು ಎಆರ್‌ ಡೈರಿಯ ಜವಾಬ್ದಾರಿ. ಆದರೆ ಎಆರ್‌ ಡೈರಿಯವರು ಭೋಲೇ ಬಾಬಾ ಆಗ್ರ್ಯಾನಿಕ್‌ ಡೈರಿಯಿಂದ ತುಪ್ಪ ಖರೀದಿಸಿದ್ದರು. ಬಾಬಾ ಡೈರಿ ಕೂಡಾ ಈ ತುಪ್ಪವನ್ನು ವೈಷ್ಣವಿ ಡೈರಿಯಿಂದ ತುಪ್ಪ ಖರೀದಿ ಮಾಡಿತ್ತು ಎಂಬುದು ಬೆಳಕಿಗೆ ಬಂದಿದೆ.