ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ನಡೆದ ಚುನಾವಣೋತ್ತರ ಹಿಂಸಾಚಾರವನ್ನು ಖಂಡಿಸಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

- ಮೈಕ್‌ ಬಳಕೆಗೂ ಅನುಮತಿಯಿಲ್ಲ

- ಮೆಗಾಫೋನ್‌ ಬಳಸಿ ದೀದಿ ಪ್ರತಿಭಟನೆ

- ಹೋರಾಡುವೆ, ಇಲ್ಲವೇ ಸಾಯುವೆ: ಮಮತಾ

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ನಡೆದ ಚುನಾವಣೋತ್ತರ ಹಿಂಸಾಚಾರವನ್ನು ಖಂಡಿಸಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಅವರಿಗೆ ಭಾಷಣಕ್ಕೆ ಮೈಕ್‌ ಬಳಕೆ ಅನುಮತಿ ಸಿಗದ ಕಾರಣ ಹೆಚ್ಚಾಗಿ ತರಕಾರಿ ಮಾರಾಟಗಾರರು ಬಳಸುವ ಮೆಗಾಫೋನ್‌ ಬಳಸಿಯೇ ಮಾತನಾಡಿದರು ಹಾಗೂ ‘ಹೋರಾಡುವೆ ಇಲ್ಲವೇ ಸಾಯುವೆ’ ಎಂದು ಗುಡುಗಿದರು.

ಚುನಾವಣೆ ಬಳಿಕ ಪಕ್ಷದ ಕಾರ್ಯಕರ್ತರು ಮತ್ತು ನಾಯಕರ ಮೇಲೆ ಬಿಜೆಪಿ ಹಿಂಸಾಚಾರ ನಡೆಸುತ್ತಿದೆ ಎಂದು ಆರೋಪಿಸಿ ಮಮತಾ, ರಾಣಿ ರಶ್ಮೋನಿ ರಸ್ತೆಯಲ್ಲಿ ಪ್ರತಿಭಟನೆಗೆ ಮುಂದಾಗಿದ್ದರು. ಆದರೆ ಪೊಲೀಸರು ಅದಕ್ಕೆ ಅನುಮತಿಸಲಿಲ್ಲ. ಬಳಿಕ ದೀದಿ ಅದನ್ನು ವೈ ಚಾನೆಲ್‌ ಎಂಬ ಕಡೆಗೆ ಸ್ಥಳಾಂತರಿಸಿದರು, ಈ ವೇಳೆಯೂ ಅವರಿಗೆ ವೇದಿಕೆ ಮೇಲೆ ಮೈಕ್‌ ಬಳಸುವುದಕ್ಕೆ ಪೊಲೀಸರು ಅನುಮತಿ ನೀಡಿರಲಿಲ್ಲ. ಆಗ ಅವರು ಮೆಗಾಫೋನ್‌ ಬಳಸಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ಬಿಜೆಪಿ ವಿರುದ್ಧ ಹರಿಹಾಯ್ದರು.