ಸಾರಾಂಶ
ಬಂಗಾಳದಲ್ಲಿ ಬಂಧನ ಗೃಹ ಸ್ಥಾಪನೆಗೆ ಬಿಡಲ್ಲ ಎಂದು ಮಮತಾ ಘೋಷಿಸಿದ್ದಾರೆ. ಮತ್ತೊಂದೆಡೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ರಿಂದಲೂ ಸಿಎಎಗೆ ವಿರೋಧ ವ್ಯಕ್ತವಾಗಿದೆ.
ಜಲ್ಪೈಗುರಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಗೂ ಸಂಬಂಧವಿರುವ ಕಾರಣ ತಾವು ಕಾಯ್ದೆಯನ್ನು ವಿರೋಧಿಸುತ್ತಿರುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ. ಸಭೆಯೊಂದರಲ್ಲಿ ಮಾತನಾಡಿದ ಅವರು, ‘ಬಿಜೆಪಿಯು ರಾಜಕೀಯ ಗಿಮಿಕ್ ಮೂಲಕ ಸಿಎಎ ಜಾರಿ ಮಾಡಿದೆ. ಚುನಾವಣೆ ಬಳಿಕ ಎನ್‌ಆರ್‌ಸಿ ಜಾರಿ ಮಾಡಿ ನಿರಾಶ್ರಿತರನ್ನು ಅಸ್ಸಾಂ ರೀತಿಯಲ್ಲಿ ಬಂಧನ ಗೃಹದಲ್ಲಿ ಇರಿಸುವ ಯೋಜನೆ ರೂಪಿಸಿದೆ. ಆದರೆ ಪಶ್ಚಿಮ ಬಂಗಾಳದಲ್ಲಿ ಗೃಹ ಬಂಧನ ಸ್ಥಾಪನೆಗೆ ಎಂದಿಗೂ ಅವಕಾಶ ನೀಡದೆ ರಾಜ್ಯದ ಎಲ್ಲ ನಿರಾಶ್ರಿತರ ಶ್ರೇಯೋಭಿವೃದ್ಧಿಗೆ ನಿಲ್ಲುವೆ’ ಎಂದು ತಿಳಿಸಿದ್ದಾರೆ. ಡರ್ಟಿ ಪಾಲಿಟಿಕ್ಸ್-ಕೇಜ್ರಿವಾಲ್:
ಚುನಾವಣೆಗೆ ಮುನ್ನ ಸಿಎಎ ಜಾರಿ ಮಾಡಿರುವುದು ಬಿಜೆಪಿಯ ಡರ್ಟಿ ಪಾಲಿಟಿಕ್ಸ್ ಎಂದು ಜರಿದಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಸಿಎಎ ಜಾರಿಯಿಂದ 3 ದೇಶಗಳಲ್ಲಿರುವ 6 ಧರ್ಮಗಳ 3.5 ಕೋಟಿ ನಿರಾಶ್ರಿತರು ಭಾರತಕ್ಕೆ ಲಗ್ಗೆ ಇಟ್ಟರೆ ಕಾನೂನು ಸುವ್ಯವಸ್ಥೆ ಕಾಪಾಡುವ ಜೊತೆಗೆ ಅವರಿಗೆ ಮೂಲಸೌಕರ್ಯ ಕೊಡಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಅವರು ಭಾರತದ ಜನರ ನೌಕರಿ ಕಸಿಯುವ ಸಾಧ್ಯತೆ ಇದೆ ಎಂದಿದ್ದಾರೆ.